ಚಿತ್ರದುರ್ಗ: ಬ್ರಿಟಿಷರ ವಿರುದ್ಧ 1857ರಲ್ಲಿ ನಡೆದ ಸಿಪಾಯಿ ದಂಗೆ ‘ಪ್ರಥಮ ಸ್ವಾತಂತ್ರ ಸಂಗ್ರಾಮ’ವಾಗಿದೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆದರೆ, ಇಂಗ್ಲಿಷರಿಗೆ ಸಿಂಹಸ್ವಪ್ನವಾಗಿ ಕಾಡಿ ನಂತರ ಕಲ್ಲಿನಕೋಟೆಯೊಳಗೆ ನೇಣು ಕುಣಿಕೆಗೆ ಕೊರಳೊಡ್ಡಿದ್ದ ‘7 ಬೇಡ ಹುಡುಗರ ಕತೆ’ ಇತಿಹಾಸದಲ್ಲಿ ಮರೆಯಾಗಿದೆ ಎಂಬ ಬೇಸರ ಸ್ಥಳೀಯರಲ್ಲಿದೆ.
ಮದಕರಿ ನಾಯಕನ ಕಾಲದಲ್ಲೇ ಚಿತ್ರದುರ್ಗದಲ್ಲಿ ಬೇಡರ ಸೈನ್ಯವಿತ್ತು. ಕೋಟೆಯ ಮೇಲೆ ದಾಳಿ ಮಾಡಿದ್ದ ಪುಣೆಯ ಪೇಶ್ವೆಗಳಿಗೆ ಬೇಡರ ಸೈನ್ಯ ಸೋಲಿನ ರುಚಿ ತೋರಿಸಿತ್ತು. ತೋಳ್ಬಲಕ್ಕೆ ಹೆಸರುವಾಸಿಯಾಗಿದ್ದ 500 ಬೇಡರ ಸೈನ್ಯ ಸಾವಿರಕ್ಕೂ ಹೆಚ್ಚು ಸಂಖ್ಯೆಯ ಪೇಶ್ವೆ ಸೈನಿಕರನ್ನು ಎದುರಿಸಿದ್ದರು. ಬಹುಕಾಲದವರೆಗೆ ಕಾಡಿನಲ್ಲಿ ವಾಸಿಸುತ್ತಿದ್ದ ಬೇಡರು ಬ್ರಿಟಿಷರ ವಿರುದ್ಧವೂ ಸಮರ ಸಾರಿದ್ದರು ಎಂಬ ಅಂಶ ಕುತೂಹಲ ಮೂಡಿಸುತ್ತದೆ.
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬೇಡರು ಬ್ರಿಟಿಷ್ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಿದ್ದರು. ದೊಡ್ಡೇರಿ ಗೌಡರು, ಕಾಡಂಚಿನ ಗ್ರಾಮಸ್ಥರು ಅವರಿಗೆ ಸಹಾಯ ಮಾಡುತ್ತಿದ್ದರು. ಬೇಡರು ಕಾಡಿನಿಂದ ಕಾಡಿಗೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ಕಡೆಗೆ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಅರಣ್ಯದಲ್ಲಿ 7 ಮಂದಿ ಬೇಡ ಹುಡುಗರು ಬ್ರಿಟಿಷ್ ಸೈನ್ಯಕ್ಕೆ ಸೆರೆ ಸಿಕ್ಕಿದ್ದರು.
ಚಿತ್ರದುರ್ಗದ ಕಲ್ಲಿನಕೋಟೆಗೆ ಅವರನ್ನು ಕರೆದುತಂದ ಬ್ರಿಟಿಷರು ಏಕನಾಥೇಶ್ವರಿ ದೇವಾಲಯದ ಎದುರು ಸಾರ್ವಜನಿಕರ ಎದುರಿನಲ್ಲಿ ನೇಣುಗಂಬಕ್ಕೇರಿಸಿದರು ಎಂಬ ವಿಷಯ ಕುತೂಹಲ ಮೂಡಿಸುತ್ತದೆ. 1849ರಲ್ಲಿ ಈ ಘಟನೆ ನಡೆದಿದ್ದರೂ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಇತಿಹಾಸಕಾರರು ಬೇಡರ ತ್ಯಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಬೇಸರ ಸ್ಥಳೀಯರಲ್ಲಿದೆ.
ಉಪನ್ಯಾಸದಲ್ಲಿ ಬೆಳಕಿಗೆ ಬಂದ ವಿಚಾರ: ಇತಿಹಾಸ ಸಂಶೋಧನೆಗಳ ಚಿಂತನೆಗಾಗಿ ನಗರದಲ್ಲಿ ಸಮಾನ ಮನಸ್ಕರು ‘ಚಿತ್ರದುರ್ಗ ಇತಿಹಾಸ ಕೂಟ’ ರಚಿಸಿಕೊಂಡಿದ್ದು ಆಗಾಗ ವಿಚಾರ ಸಂಕಿರಣ ಆಯೋಜಿಸುತ್ತಾರೆ. 2018ರಲ್ಲಿ ನಡೆದ ಉಪನ್ಯಾಸದಲ್ಲಿ ತುಮಕೂರಿನ ಇತಿಹಾಸ ತಜ್ಞ ಬಿ.ನಂಜುಂಡಸ್ವಾಮಿ ಅವರು ಸ್ಥಳೀಯರಿಗೆ ಗೊತ್ತಿಲ್ಲದ ಬೇಡ ಹುಡುಗರ ತ್ಯಾಗದ ಕತೆಯನ್ನು ಬಿಚ್ಚಿಟ್ಟಿದ್ದರು.
ಅದಕ್ಕೆ ಆಧಾರ ಒದಗಿಸಿದ್ದ ನಂಜುಂಡಸ್ವಾಮಿ ಅವರು ಚಿತ್ರದುರ್ಗ– ತುಮಕೂರು ಪ್ರಾಂತ್ಯದ ಹೈಕಮೀಷನರ್ ಆಗಿದ್ದ ಮೇಜರ್ ಜನರಲ್ ಆರ್.ಎಸ್.ಡಾಬ್ಸ್ ತನ್ನ ಪುಸ್ತಕ ‘ಮೈಸೂರು, ದಕ್ಷಿಣ ಆಫ್ರಿಕಾ, ಬರ್ಮಾ ಬದುಕಿನ ನೆನಪುಗಳು’ (ರೆಮಿನಿಸೆನ್ಸ್ ಆಫ್ ಲೈಫ್ ಇನ್ ಮೈಸೂರು, ಸೌತ್ ಆಫ್ರಿಕಾ, ಬರ್ಮಾ) ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ತಿಳಿಸಿದ್ದರು. ಮರೆತು ಹೋಗಿರುವ ಬೇಡರ ಅಧ್ಯಾಯ ಇತಿಹಾಸದಲ್ಲಿ ದಾಖಲಾಗಬೇಕು ಎಂದು ಅವರು ಒತ್ತಾಯಿಸಿದ್ದರು.
ಬೇಡರ ತ್ಯಾಗವನ್ನು ಕೇಳಿ ಪ್ರೇರಣೆಗೊಂಡ ಹಿರಿಯ ಸಾಹಿತಿ ಡಾ.ಬಿ.ಎಲ್.ವೇಣು ಅವರು 2023ರಲ್ಲಿ ಐತಿಹಾಸಿಕ ಕಾದಂಬರಿ ‘ದುರ್ಗದ ಬೇಡರ್ದಂಗೆ’ ಕಾದಂಬರಿ ರಚಿಸಿದ್ದಾರೆ. ಅದರಲ್ಲಿ ಚಿತ್ರದುರ್ಗದ ಬೇಡರ ಇತಿಹಾಸ, ಹೋರಾಟವನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ಕಾದಂಬರಿಯ 2ನೇ ಆವೃತ್ತಿ ಬಿಡುಗಡೆಗೆ ಸಿದ್ಧಗೊಂಡಿದೆ.
‘ಬೇಡರ ಹೋರಾಟ ಇತಿಹಾಸದಲ್ಲಿ ಮರೆತು ಹೋಗಲು ಸ್ಥಳೀಯ ಇತಿಹಾಸಕಾರರ ನಿರ್ಲಕ್ಷ್ಯವೂ ಕಾರಣವಾಗಿದೆ. ಆರ್.ಎಸ್.ಡಾಬ್ಸ್ ಅವರ ಕೃತಿಯನ್ನು ನಾನೂ ಅಧ್ಯಯನ ಮಾಡಿದ್ದು ಮೈಸೂರು ಇತಿಹಾಸ ಬರೆಯುವಾಗ ಬೇಡ ಹುಡುಗರ ತ್ಯಾಗದ ಕತೆಯನ್ನು ಚಿತ್ರಿಸಿದ್ದಾರೆ. ಈಗಲಾದರೂ ಬೇಡರ ಇತಿಹಾಸವನ್ನು ಸ್ಮರಿಸಬೇಕು. ಇದರಿಂದ ಚಿತ್ರದುರ್ಗಕ್ಕೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಹೆಸರು ಬರಲಿದೆ’ ಎಂದು ಸಾಹಿತಿ ಬಿ.ಎಲ್.ವೇಣು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.