ಚಿತ್ರದುರ್ಗ: ‘ದೈವಭಕ್ತಿಯಿಂದ ರಾಷ್ಟ್ರಭಕ್ತಿಯೆಡೆಗೆ ಯುವಜನರನ್ನು ಕೊಂಡೊಯ್ಯುವ ಉದ್ದೇಶದಿಂದ ವೈಭವಯುತವಾಗಿ 18 ದಿನಗಳವರೆಗೆ ಗಣೇಶೋತ್ಸವ ಆಯೋಜಿಸಿದ್ದೇವೆ’ ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಂಚಾಲಕ ಪ್ರಭಂಜನ್ ಹೇಳಿದರು.
‘ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಆಯೋಜನೆ ಮಾಡಲಾಗಿರುವ ಮಹಾಗಣಪತಿ ಉತ್ಸವ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಏಷ್ಯಾಖಂಡದಲ್ಲೇ ಅತೀ ಹೆಚ್ಚು ಜನರು ಸೇರುವ 2ನೇ ಗಣೇಶೋತ್ಸವ ಇದಾಗಿದೆ. ಸೆ.13ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ನಡೆಯಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಉತ್ಸವ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಪ್ರತಿ ದಿನವೂ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಗುವುದು. ಸೆ.9ರಂದು ಚಿತ್ರದುರ್ಗದ ಸ್ಥಳೀಯ ದೇವತೆಗಳ ಉತ್ಸವ ಮೂರ್ತಿಗಳನ್ನು ಗಣೇಶೋತ್ಸವ ಮಂಟಪಕ್ಕೆ ಕರೆತರಲಾಗುವುದು. ಸೆ.10ರಂದು ಗಣಪತಿ ಹೋಮ ನೆರವೇರಿಸಲಾಗುವುದು’ ಎಂದರು.
‘ಗಣೇಶ ಮಂಟಪದ ಹೊರಭಾಗವನ್ನು ರಾಜಸ್ಥಾನದ ಜೈಪುರದ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಲಾಗಿದೆ. ಒಳ ಭಾಗವನ್ನು ಹೊಯ್ಸಳ ಶೈಲಿಯಲ್ಲಿ ಚಿತ್ರಿಸಲಾಗಿದೆ. ಇತ್ತೀಚಿಗೆ ಜಮ್ಮು– ಕಾಶ್ಮೀರದ ಪಹಲ್ಗಾಮ್‌ನಲ್ಲಿ ಜೀವ ಕಳೆದುಕೊಂಡವರ ಗೌರವಾರ್ಥವಾಗಿ ಮಂಟಪಕ್ಕೆ ಸಿಂಧೂರ ಮಂಟಪ ಎಂದು ನಾಮಕರಣ ಮಾಡಲಾಗಿದೆ’ ಎಂದು ತಿಳಿಸಿದರು.
ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಶರಣಕುಮಾರ್, ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಷಡಾಕ್ಷರಪ್ಪ, ಕಾರ್ಯದರ್ಶಿ ಕೇಶವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.