ADVERTISEMENT

ಚಿತ್ರದುರ್ಗ| ಶೋಭಾಯಾತ್ರೆ ಮಾರ್ಗದಲ್ಲಿ ಎಲ್ಲೆಂದರಲ್ಲಿ ಕಸ: ಪೌರ ಕಾರ್ಮಿಕರು ಹೈರಾಣ

120 ಪೌರ ಕಾರ್ಮಿಕರಿಂದ ಶ್ರಮ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:40 IST
Last Updated 15 ಸೆಪ್ಟೆಂಬರ್ 2025, 6:40 IST
<div class="paragraphs"><p>ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದ ಪೌರ ಕಾರ್ಮಿಕರು </p></div>

ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದ ಪೌರ ಕಾರ್ಮಿಕರು

   

ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ

ಚಿತ್ರದುರ್ಗ: ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಅಂಗವಾಗಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನಿಂದ ಶನಿವಾರ ಆಯೋಜಿಸಿದ್ದ ಶೋಭಾಯಾತ್ರೆ ರಾತ್ರಿ 11.50ಕ್ಕೆ ಚಂದ್ರವಳ್ಳಿ ಕೆರೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮೂಲಕ ಸಂಪನ್ನವಾಯಿತು. ಆದರೆ, ಶೋಭಾಯಾತ್ರೆ ಸಾಗಿದ ಮಾರ್ಗದಲ್ಲಿನ ಕಸದ ರಾಶಿ ಪೌರ ಕಾರ್ಮಿಕರನ್ನು ಭಾನುವಾರ ಮುಂಜಾನೆ ಇನ್ನಿಲ್ಲದಂತೆ ಹೈರಾಣಾಗಿಸಿತು.

ADVERTISEMENT

ಭಾನುವಾರ ಬೆಳಿಗ್ಗೆ 6.30 ರಿಂದ ಪ್ರಾರಂಭವಾದ ಸ್ವಚ್ಛತಾ ಕೆಲಸ ಪೂರ್ಣಗೊಂಡಿದ್ದು, ಮಧ್ಯಾಹ್ನ 12.30ರ ವೇಳೆಗೆ. ಬರೋಬ್ಬರಿ 120 ಪೌರ ಕಾರ್ಮಿಕರು ಚಳ್ಳಕೆರೆ ಟೋಲ್‌ಗೇಟ್‌ನಿಂದ ಚಂದ್ರವಳ್ಳಿ ರಸ್ತೆವರೆಗೂ ಕಸವನ್ನು ತೆರವುಗೊಳಿಸಿದರು. ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಪರಿಸರ) ಜೆ. ಜಾಫರ್‌ ನೇತೃತ್ವದಲ್ಲಿ 20 ಮಂದಿ ಒಳಗೊಂಡ ಒಟ್ಟು ಆರು ತಂಡಗಳು, 6 ಆರೋಗ್ಯ ನಿರೀಕ್ಷಕರು, 12 ಮೇಲುಸ್ತುವಾರಿ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡಿದ್ದರಿಂದ ನಗರದ ಮುಖ್ಯರಸ್ತೆ ಸ್ವಚ್ಛವಾಯಿತು.

ಶೋಭಾಯಾತ್ರೆ ಮಾರ್ಗದುದ್ದಕ್ಕೂ ನಿಗದಿತ ಸ್ಥಳಗಳಲ್ಲಿ ಭಕ್ತರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರಿಂದ ನೀರಿನ ಬಾಟಲ್‌, ಕವರ್‌, ಆಹಾರ ಸೇವಿಸಿದ ತಟ್ಟೆಗಳು, ವ್ಯರ್ಥವಾದ ಆಹಾರ, ತಂಪು ಪಾನೀಯ ಬಾಟಲ್‌ಗಳು, ಐಸ್‍ಕ್ರೀಂ ಕಪ್‍ಗಳು, ಕುಡಿಯುವ ನೀರಿನ ಪ್ಯಾಕೆಟ್, ಪ್ಲಾಸ್ಟಿಕ್‌ ಐಟಂಗಳು, ಪಾದರಕ್ಷೆಗಳು ಎಲ್ಲೆಂದರಲ್ಲಿ ರಾಶಿಗಟ್ಟಲೆ ಹರಡಿಕೊಂಡಿದ್ದವು. ಈ ಎಲ್ಲ ಕಸವನ್ನು ಚೀಲಗಳಲ್ಲಿ ತುಂಬಿದ ಪೌರ ಕಾರ್ಮಿಕರು ಲಾರಿ, ಟಿಪ್ಪರ್‌, ಟ್ರ್ಯಾಕ್ಟರ್‌, ಟಾಟಾ ಏಸ್‌ ವಾಹನಗಳಿಗೆ ಹಾಕಿದರು.

15 ವಾಹನಗಳು ತಲಾ ಎರಡು ಬಾರಿ ಕಸ ಸಂಗ್ರಹಿಸಿದವು. ಚಳ್ಳಕೆರೆ ಟೋಲ್‌ ಗೇಟ್‌, ಜೈನಧಾಮ, ಎಲ್‌ಐಸಿ ಕಚೇರಿ, ಮದಕರಿನಾಯಕ ವೃತ್ತ, ಜೋಗಿಮಟ್ಟಿ ವೃತ್ತ, ಅಂಬೇಡ್ಕರ್‌ ವೃತ್ತ, ಪ್ರವಾಸಿ ಮಂದಿರ, ಒನಕೆ ಓಬ್ವವ್ವ ವೃತ್ತ, ವಾಸವಿ ಮಹಲ್‌ ರಸ್ತೆ ತಿರುವು, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದವರೆಗೂ ನಿಗದಿಪಡಿಸಿದ್ದ ಸ್ಥಳಗಳಲ್ಲಿ ತಂಡಗಳು ಸ್ವಚ್ಛತಾ ಕಾರ್ಯ ನಡೆಸಿದವು.

ಶೋಭಾಯಾತ್ರೆಗೆ ಜನಸಾಗರವೇ ಹರಿದು ಬಂದಿದ್ದರಿಂದ ಅನೇಕರ ಪಾದರಕ್ಷೆಗಳು ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇನ್ನಿತರೆ ವಸ್ತುಗಳನ್ನು ಎಲ್ಲೆಲ್ಲಿಂದಲೋ ಬಂದ ಜನರು ಬಿಸಾಡಿದ್ದರು. ಒಂದು ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ನೀರಿನ ಬಾಟಲಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದವು.

ವಿವಿಧ ಸಂಘ– ಸಂಸ್ಥೆಗಳು, ವರ್ತಕರು, ದಾನಿಗಳು ಮಾರ್ಗ ಮಧ್ಯೆ ಪ್ರಸಾದ, ತಂಪು ಪಾನೀಯ ವಿತರಿಸಲು ಈ ಬಾರಿಯೂ ಹೆಚ್ಚಾಗಿ ಅಡಿಕೆ ತಟ್ಟೆ, ಪೇಪರ್‌ ಪ್ಲೇಟ್‌ ಮತ್ತು ಕಪ್‌ಗಳನ್ನು ಬಳಸಿದ್ದು, ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಬಿದ್ದಿದ್ದ ಚಪ್ಪಲಿಗಳನ್ನು ಪ್ರತ್ಯೇಕಿಸಲಾಯಿತು. ಈ ಎಲ್ಲವನ್ನು ಸ್ವಚ್ಛಗೊಳಿಸಿ ರಸ್ತೆ ಎಂದಿನಂತೆ ಕಾಣುವಂತೆ ಮಾಡುವಲ್ಲಿ ಪೌರಕಾರ್ಮಿಕರ ಶ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಸಿಬ್ಬಂದಿ ಜತೆಗೆ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್‌ ಕಾರಜೋಳ ಹಾಗೂ ಅವರ ಸ್ನೇಹಿತರು ಕೈ ಜೋಡಿಸಿದರು. ಪರಿಸರ ಮತ್ತು ಆರೋಗ್ಯ ನಿರೀಕ್ಷಕರಾದ ಭಾರತಿ, ರುಕ್ಮಿಣಿ, ನಿರ್ಮಲಾ, ಬಾಬುರೆಡ್ಡಿ, ಹೀನ ಕೌಸರ್, ಜಯಪ್ರಕಾಶ್‌ ಇದ್ದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಸ ಕಡಿಮೆಯಾಗಿದೆ. ಶೋಭಾಯಾತ್ರೆ ಸಾಗಿದ ದಾರಿಯೂ ನಗರದಲ್ಲಿನ ಪ್ರಮುಖ ವೃತ್ತ ರಸ್ತೆ ಮಾರ್ಗವಾಗಿದ್ದು ಸಾವಿರಾರು ವಾಹನಗಳು ಸಂಚರಿಸುವ ಕಾರಣ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿ ಮಧ್ಯಾಹ್ನದೊಳಗೆ ಪೂರ್ಣಗೊಳಿಸಿದ್ದಾರೆ.
ಜೆ.ಜಾಫರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಪರಿಸರ) ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.