ADVERTISEMENT

ಚಿತ್ರದುರ್ಗ | ಶೋಭಾಯಾತ್ರೆ: ಡಿ.ಜೆ ಪ್ರವೇಶ ತಡೆಯಲು ಪೊಲೀಸರ ಶತಪ್ರಯತ್ನ; ವಾಗ್ವಾದ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 13:26 IST
Last Updated 12 ಸೆಪ್ಟೆಂಬರ್ 2025, 13:26 IST
<div class="paragraphs"><p>ಡಿ.ಜೆ ಪ್ರವೇಶ ತಡೆಯಲು ಪೊಲೀಸರ ಶತಪ್ರಯತ್ನ; ವಾಗ್ವಾದ</p></div>

ಡಿ.ಜೆ ಪ್ರವೇಶ ತಡೆಯಲು ಪೊಲೀಸರ ಶತಪ್ರಯತ್ನ; ವಾಗ್ವಾದ

   

ಚಿತ್ರದುರ್ಗ: ಗಣೇಶೋತ್ಸವ ಶೋಭಾಯಾತ್ರೆಗೆ ಡಿ.ಜೆ ನಿಷೇಧವಿದ್ದರೂ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರು ನಗರಕ್ಕೆ ತಂದ ಬೃಹತ್‌ ಡಿ.ಜೆ ಸ್ಪೀಕರ್‌ಗಳನ್ನು ಪೊಲೀಸರು ಶುಕ್ರವಾರ ಜಪ್ತಿ ಮಾಡಿದರು. ಪೊಲೀಸರ ಕ್ರಮಕ್ಕೆ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜೈನ ಧಾಮದಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ ಅಂಗವಾಗಿ ಶನಿವಾರ (ಸೆ.13) ಶೋಭಾಯಾತ್ರೆ ನಡೆಯಲಿದ್ದು 4 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೆರವಣಿಗೆಯಲ್ಲಿ ಡಿ.ಜೆ ಬಳಕೆಗೆ ಪೊಲೀಸರು ಅನುಮತಿ ನೀಡಿಲ್ಲ. ನಿಷೇಧದ ನಡುವೆಯೂ ಸಂಘಟನೆಗಳ ಮುಖಂಡರು ಹೊರ ಜಿಲ್ಲೆಗಳಿಂದ ಡಿ.ಜೆ ತರಲು ಯತ್ನಿಸುತ್ತಿದ್ದಾರೆ. ನಗರದ ಹೊರವಲಯದಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದ್ದು ಡಿ.ಜೆ ಪ್ರವೇಶದ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

ADVERTISEMENT

ಶುಕ್ರವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ಡಿ.ಜೆಗಳನ್ನು ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದರು. ಜೊತೆಗೆ ಅವುಗಳನ್ನು ಬಳಸಲು ಸಾಧ್ಯವಾಗದಂತೆ ಡಿ.ಜೆ ಘಟಕದ ಡೀಸೆಲ್‌ ಟ್ಯಾಂಕ್‌ಗೆ ನೀರು ತುಂಬಿದರು. ಜೊತೆಗೆ ಕ್ರೇನ್‌ ಬಳಸಿ ಅವುಗಳನ್ನು ಬೇರೆಡೆಗೆ ಸಾಗಿಸಲು ಮುಂದಾದರು. ಪೊಲೀಸರ ಕ್ರಮ ಖಂಡಿಸಿದ ಸಂಘಟನೆಗಳ ಕಾರ್ಯಕರ್ತರು ನಗರದ ಚಳ್ಳಕೆರೆ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಪೊಲೀಸ್‌ ಸರ್ಪಗಾವಲು: ಶೋಭಾಯಾತ್ರೆ ಅಂಗವಾಗಿ ನಗರದಾದ್ಯಂತ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. 7 ಮಂದಿ ಎಸ್‌ಪಿ, 28 ಡಿವೈಎಸ್‌ಪಿ, 175 ಸಬ್‌ ಇನ್‌ಸ್ಪೆಕ್ಟರ್‌, 401 ಎಎಸ್‌ಐ, 2,678 ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, 500 ಗೃಹ ರಕ್ಷಕ ದಳದ ಸಿಬ್ಬಂದಿ, 16 ತುಕಡಿ ಕೆಎಸ್‌ಆರ್‌ಪಿ, 14 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ನಗರದಾದ್ಯಂತ ಪ್ರಮುಖ 151 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ, 26 ಕಣ್ಗಾವಲು ಟವರ್‌ ನಿರ್ಮಾಣ ಮಾಡಲಾಗಿದೆ. ಮೆರವಣಿಗೆ ಮಾರ್ಗದಲ್ಲಿನ ವಿಡಿಯೊ ಚಿತ್ರೀಕರಣಕ್ಕಾಗಿ 67 ವಿಡಿಯೊಗ್ರಾಫರ್‌ ನೇಮಕ ಮಾಡಿಕೊಳ್ಳಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಎತ್ತರದ ಕಟ್ಟಡಗಳ ಮೇಲೆ 49 ಸ್ಕೈ ಸೆಂಟ್ರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 8 ಡ್ರೋಣ್‌ ಕ್ಯಾಮೆರಾ ನಿಗಾ ಇದೆ. ಖಾಸಗಿ ಡ್ರೋಣ್‌ ಕ್ಯಾಮೆರಾ ಬಳಕೆಯನ್ನು ನಿಷೇಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.