ಮೊಳಕಾಲ್ಮುರು: ಗ್ರಾಮೀಣ ಭಾಗದ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ– ರಾಜ್ಯ ಸರ್ಕಾರಗಳು ಸಂಯುಕ್ತವಾಗಿ ಆರಂಭಿಸಿರುವ, ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿರುವ ಕಸ್ತೂರಾ ಬಾ ಬಾಲಿಕಾ ವಸತಿ ಶಾಲೆ ಅವ್ಯವಸ್ಥೆಗಳ ಆಗರವಾಗಿದೆ. ಇದರಿಂದ ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.
ಹೆಣ್ಣುಮಕ್ಕಳಿಗೆ ಶಾಲೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮ ಪಂಚಾಯಿತಿ ಕಚೇರಿಯಿಂದ ಕೇವಲ 100 ಅಡಿ ದೂರದಲ್ಲಿರುವ ಈ ಶಾಲೆಗೆ ಕಳೆದೆರಡು ತಿಂಗಳುಗಳಿಂದ ಸರಿಯಾಗಿ ನೀರು ಸರಬರಾಜು ಆಗಿಲ್ಲ. ವಿದ್ಯಾರ್ಥಿನಿಯರೇ ಬಿಂದಿಗೆಯಿಂದ ನೀರು ಹೊತ್ತು ತಂದು ಹಾಕಿಕೊಳ್ಳಬೇಕಿದೆ. ಸಮೀಪದ ಸರ್ಕಾರಿ ಶಾಲೆ ಆವರಣದಲ್ಲಿರುವ ನೀರಿನ ತೊಟ್ಟಿ ಬಳಿ ಬಟ್ಟೆ ತೊಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತೊಟ್ಟಿಯ ಬಳಿ ಬರಬೇಡಿ ಎಂದು ಸರ್ಕಾರಿ ಶಾಲೆಯವರು ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ. ಹೀಗಾಗಿ ತಟ್ಟೆ ತೊಳೆದುಕೊಳ್ಳಲು, ಬಟ್ಟೆ ಒಗೆಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಸರ್ವಶಿಕ್ಷ ಅಭಿಯಾನದಡಿ ನಡೆಯುತ್ತಿರುವ ಈ ಶಾಲೆಯಲ್ಲಿ ಜಿಲ್ಲೆಯ ಬೇರೆ, ಬೇರೆ ತಾಲ್ಲೂಕುಗಳ 80 ವಿದ್ಯಾರ್ಥಿನಿಯರು ಇದ್ದಾರೆ. ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದ್ದು, ವಿದ್ಯಾರ್ಥಿನಿಯರು ಪರಿತಪಿಸುವಂತಾಗಿದೆ.
ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಸ್ಲಾಂಪುರ ಬಳಿ 9 ಎಕರೆ ಜಾಗ ನೀಡಲಾಗಿದೆ. ₹ 1.68 ಕೋಟಿ ಅನುದಾನ ಸಹ ಮಂಜೂರಾಗಿದೆ. 4 ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ತಾಂತ್ರಿಕ ಕಾರಣದಿಂದಾಗಿ ಪರಶುರಾಂಪುರ, ಗದಗ ಮತ್ತು ಕೊಂಡ್ಲಹಳ್ಳಿ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹದಿಹರೆಯದ ಹೆಣ್ಣು ಮಕ್ಕಳು ಸ್ನಾನ ಮಾಡಲು, ಶೌಚಾಲಯಕ್ಕೂ ನೀರಿನ ಕೊರತೆ ಇದೆ. ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆ ಅಧಿಕಾರಿಗಳು ಸಹ ತಿರುಗಿ ನೋಡುತ್ತಿಲ್ಲ. ಇದರಿಂದಾಗಿ ಹೆಣ್ಣು ಮಕ್ಕಳು ಶಾಲೆ ಬಿಡುವ ಹಂತದಲ್ಲಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
‘ಕಟ್ಟಡದ ಮಾಲೀಕರಿಗೆ ಸಮಸ್ಯೆ ಬಗ್ಗೆ ಹೇಳಿದರೆ ನೀರಿನ ವ್ಯವಸ್ಥೆ ಮಾಡಲು ಆಗುವುದಿಲ್ಲ. ಇದ್ದರೆ ಇರಿ ಇಲ್ಲವಾದಲ್ಲಿ ಬೇರೆ ಕಟ್ಟಡಕ್ಕೆ ಸ್ಥಳಾಂತರ ಆಗಿ ಎಂದು ಹೇಳುತ್ತಾರೆ. ಅಗತ್ಯವಿರುವ ಕಟ್ಟಡ ಸಿಗುತ್ತಿಲ್ಲ. ಹೊಸ ಕಟ್ಟಡವೂ ನಿರ್ಮಾಣವಾಗುತ್ತಿಲ್ಲ’ ಎಂದು ಗ್ರಾಮಸ್ಥ ಜಯಣ್ಣ ದೂರಿದರು.
ಶಿಕ್ಷಣ ಇಲಾಖೆ ಸ್ವಂತ ಕಟ್ಟಡ ನಿರ್ಮಾಣವಾಗುವ ತನಕ ವಸತಿ ಶಾಲೆಗೆ ಬೇಕಿರುವ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಶ್ರಮ ವಹಿಸಬೇಕು. ಇಲ್ಲವಾದಲ್ಲಿ ಈ ವಿದ್ಯಾರ್ಥಿನಿಯರು ಶಾಲೆ ಬಿಡುವುದು ಖಚಿತ. ಹೊಣೆ ಹೊತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ ವಸತಿ ಶಾಲೆ ಕುಡಿಯುವ ನೀರು, ಸ್ನಾನ, ಶೌಚಕ್ಕೆ ತೊಂದರೆ ಶಾಲೆ ಬಿಡುತ್ತಿರುವ ವಿದ್ಯಾರ್ಥಿನಿಯರು
ನೀರಿನ ಸಮಸ್ಯೆಯ ವಿಚಾರ ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿ ಆದಷ್ಟು ಬೇಗ ಅಗತ್ಯ ಕ್ರಮ ಕೈಗೊಳ್ಳಲಾಗುವುದುಯಶವಂತ್ ಪಿಡಿಒ
ತಕ್ಷಣವೇ ನಿಲಯಕ್ಕೆ ಭೇಟಿ ನೀಡುತ್ತೇನೆ. ಸಮಸ್ಯೆ ಆಲಿಸಿ ಪಂಚಾಯಿತಿಯಿಂದ ಒದಗಿಸಬಹುದಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದುಪವಿತ್ರಾ ಪ್ರದೀಪ್ ಗ್ರಾ.ಪಂ. ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.