ADVERTISEMENT

ಚಿತ್ರದುರ್ಗ: ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ನಾಳೆಯಿಂದ

ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್‌ ಮುದ್ದಜ್ಜಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:48 IST
Last Updated 28 ಜನವರಿ 2026, 5:48 IST
ಮಾಲತೇಶ್‌ ಮುದ್ದಜ್ಜಿ
ಮಾಲತೇಶ್‌ ಮುದ್ದಜ್ಜಿ   

ಚಿತ್ರದುರ್ಗ: ‘ಜಿಲ್ಲಾಡಳಿತ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ವತಿಯಿಂದ ಜ.29 ಮತ್ತು 30 ರಂದು ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿವೆ. ಜತೆಗೆ ಸಂಕ್ರಾಂತಿ ಸಂಭ್ರಮ-ಸುಗ್ಗಿಯ ಸಿರಿ ಕಾರ್ಯಕ್ರಮ ಈ ಬಾರಿಯ ವಿಶೇಷ’ ಎಂದು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್‌ ಮುದ್ದಜ್ಜಿ ತಿಳಿಸಿದರು.

‘ಜಿಲ್ಲೆಯ ಸರ್ಕಾರಿ ನೌಕರರು ಸ್ಪರ್ಧೆಗಳಲ್ಲಿ ಭಾಗವಹಿಸಲು ಆನ್‌ಲೈನ್‌ ಮೂಲಕವೇ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗಾಗಲೇ ಸುಮಾರು 2045 ನೌಕರರು ನೋಂದಣಿ ಮಾಡಿಕೊಂಡಿದ್ದಾರೆ. ನೇರ ನೋಂದಣಿಗೆ ಅವಕಾಶ ಇಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ನೌಕರರಿಗೆ ವಿಶೇಷ ಟೀ ಶರ್ಟ್‌ ಮತ್ತು ಕ್ಯಾಪ್‌ ವಿತರಿಸಲಾಗುತ್ತದೆ. ನೌಕರರು ಕಡ್ಡಾಯವಾಗಿ ತಮ್ಮ ಇಲಾಖೆಯ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್ ತರಬೇಕು. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಎರಡು ದಿನ ವಿಶೇಷ ರಜೆ ಸೌಲಭ್ಯ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜ. 29ರಂದು ಸಂಜೆ 6ಕ್ಕೆ ಸಂಕ್ರಾಂತಿ ಸಂಭ್ರಮ-ಸುಗ್ಗಿಯ ಸಿರಿ ಎನ್ನುವ ವಿನೂತನ ಮನೋರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗಾಯಕ ಕಂಬದ ರಂಗಯ್ಯ ತಂಡದಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರನಟ ಲವ್ಲಿಸ್ಟಾರ್‌ ಪ್ರೇಮ್‌ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಎ.ಮಲ್ಲಿಕಾರ್ಜುನ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್‌.ಬಿ.ಪೂಜಾರ್‌, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ರಮೇಶ್‌, ರಾಜ್ಯ ಪರಿಷತ್ ಸದಸ್ಯೆ ಬಿ.ಟಿ.ಲೋಲಾಕ್ಷಮ್ಮ ಇದ್ದರು.

ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ನೌಕರರು ಕುಟುಂಬದವರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಜೋಳ ಸಜ್ಜೆ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯದಂತಹ ಗ್ರಾಮೀಣ ಶೈಲಿಯ ಊಟ ಈ ಬಾರಿಯ ವಿಶೇಷ.
– ಮಾಲತೇಶ್‌ ಮುದ್ದಜ್ಜಿ, ಅಧ್ಯಕ್ಷ ನೌಕರರ ಸಂಘದ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.