ADVERTISEMENT

ಸಮುದಾಯಕ್ಕೂ ಕಾನೂನಾತ್ಮಕ ಮೀಸಲಾತಿ ನೀಡಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:02 IST
Last Updated 7 ನವೆಂಬರ್ 2022, 6:02 IST
ಹೊಸದುರ್ಗದ ಗಣೇಶ ಸದನದಲ್ಲಿ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, ವಿಜಯೋತ್ಸವ, ಪಂಚಮಸಾಲಿ ಮೀಸಲಾತಿ ಜನ ಜಾಗೃತಿ ಸಮಾವೇಶವನ್ನು ವಚನನಾಂದ ಸ್ವಾಮೀಜಿ ಉದ್ಘಾಟಿಸಿದರು.
ಹೊಸದುರ್ಗದ ಗಣೇಶ ಸದನದಲ್ಲಿ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, ವಿಜಯೋತ್ಸವ, ಪಂಚಮಸಾಲಿ ಮೀಸಲಾತಿ ಜನ ಜಾಗೃತಿ ಸಮಾವೇಶವನ್ನು ವಚನನಾಂದ ಸ್ವಾಮೀಜಿ ಉದ್ಘಾಟಿಸಿದರು.   

ಹೊಸದುರ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿದಂತೆ ಪಂಚಮಸಾಲಿ ಸಮುದಾಯಕ್ಕೂ ಕಾನೂನಾತ್ಮಕ ಮೀಸಲಾತಿ ನೀಡಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಮಾಜದ ವತಿಯಿಂದ ಪಟ್ಟಣದ ಗಣೇಶ ಸದನದಲ್ಲಿ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ 199ನೇ ವಿಜಯೋತ್ಸವ, 244ನೇ ಜಯಂತ್ಯುತ್ಸವ ಮತ್ತು ಪಂಚಮಸಾಲಿ ಮೀಸಲಾತಿ ಜನ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಲಾಗಿದೆ. ಇನ್ನೆರಡು ಜಿಲ್ಲೆಗಳಲ್ಲಿ ಅಧ್ಯಯನ ನಡೆಯುತ್ತಿದ್ದು, ಪೂರ್ಣವಾದ ನಂತರ ಅಧ್ಯಯನದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ADVERTISEMENT

‘ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಲು ಸದಾ ಸಿದ್ಧ. ಬೆಲಗೂರಿನ ಪೇಟೆ ಬಸವೇಶ್ವರ ಸಮುದಾಯ ಭವನಕ್ಕೆ ₹ 40 ಲಕ್ಷ ಅನುದಾನ ಹಾಗೂ ಪಂಚಮಸಾಲಿ ಸಮಾಜಕ್ಕಾಗಿ ಮಧುರೆ ದಿಬ್ಬದಲ್ಲಿ 10 ಗುಂಟೆ ಭೂಮಿ ಖರೀದಿಸಿಲು ₹ 25 ಲಕ್ಷ ನೀಡಲಾಗುವುದು’ ಎಂದುಶಾಸಕ ಗೂಳಿಹಟ್ಟಿ ಡಿ. ಶೇಖರ್ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷ ಜಿ.ಟಿ. ಪಾಟೀಲ್, ‘ಸಮಾಜಕ್ಕೆ 2 ‘ಎ’ ಮೀಸಲಾತಿ ಜೊತೆಗೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದರು.

ರಾಜ್ಯ ಕಾರ್ಯದರ್ಶಿ ಸೋಮನಗೌಡ ಎಂ ಪಾಟೀಲ್ ಮಾತನಾಡಿ, ‘ಪಂಚಮಸಾಲಿ ಸಮುದಾಯವನ್ನು 2 ‘ಎ’ಗೆ ಸೇರಿಸುವಂತೆ 1994ರಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಗಮನಹರಿಸಬೇಕು. ತಪ್ಪಿದ್ದಲ್ಲಿ ಬರುವ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಮಾಜದ ಗೌರವಾಧ್ಯಕ್ಷ ಸಿ.ಎಂ. ಮೃತ್ಯುಂಜಯಪ್ಪ, ಅಧ್ಯಕ್ಷ ಡಿ.ಪಿ. ದಯಾನಂದ್, ನಿಕಟಪೂರ್ವ ಅಧ್ಯಕ್ಷ ಎಸ್. ದಿವಾಕರ್, ಕಾರ್ಯದರ್ಶಿ ಎಂ.ಕೆ‌. ಧನುಶಂಕರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ವಿರೂಪಾಕ್ಷಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಪಿ ಜಗದೀಶ್, ಜಿಲ್ಲಾಧ್ಯಕ್ಷ ಜಿ. ಶಿವಪ್ರಕಾಶ್, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಉಮಾ ರಮೇಶ್, ಸಮಾಜದ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಜಿ. ಬಸವರಾಜಪ್ಪ, ಸಮಾಜದ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.