ADVERTISEMENT

ದುರ್ಗದ ತುಂಬೆಲ್ಲಾ ಅನಧಿಕೃತ ಕಟ್ಟಡಗಳ ಹಾವಳಿ!

ತಲೆ ಎತ್ತುತ್ತಿವೆ ಅನಧಿಕೃತ ಕಟ್ಟಡ, ಅಕ್ರಮ ಆಸ್ತಿಗಳಿಗೆ ಇ–ಸ್ವತ್ತು, ವ್ಯಾಪಾರ ಅನುಮತಿ ಸಿಗುತ್ತಿರುವುದು ಹೇಗೆ?

ಎಂ.ಎನ್.ಯೋಗೇಶ್‌
Published 2 ಸೆಪ್ಟೆಂಬರ್ 2025, 5:34 IST
Last Updated 2 ಸೆಪ್ಟೆಂಬರ್ 2025, 5:34 IST
ರಸ್ತೆ ವಿಸ್ತರಣೆಗೆ ಉದ್ದೇಶಿಸಲಾಗಿರುವ ಬಿ.ಡಿ ರಸ್ತೆಯ ನೋಟ
ರಸ್ತೆ ವಿಸ್ತರಣೆಗೆ ಉದ್ದೇಶಿಸಲಾಗಿರುವ ಬಿ.ಡಿ ರಸ್ತೆಯ ನೋಟ   

ಚಿತ್ರದುರ್ಗ: ‘ನಗರದಲ್ಲಿನ ಪ್ರಮುಖ ರಸ್ತೆಗಳ ವಿಸ್ತರಣೆ ಶತಸಿದ್ಧ’ ಎಂದು ಜಿಲ್ಲಾಡಳಿತ ಘೋಷಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ, ನಿಯಮ ಉಲ್ಲಂಘಿಸಿ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೆ 2 ಹಂತದಲ್ಲಿ ರಸ್ತೆ ವಿಸ್ತರಿಸುವ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಸರ್ಕಾರದ ಅನುಮತಿಗಾಗಿ ಪ್ರಸ್ತಾವವನ್ನೂ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಶಾಸಕ ಕೆ.ಸಿ.ವೀರೇಂದ್ರ ಸಹ ರಸ್ತೆ ವಿಸ್ತರಣೆ ಅನಿವಾರ್ಯ ಎಂದು ತಿಳಿಸಿದ್ದಾರೆ. ಇಷ್ಟಾದರೂ ರಸ್ತೆಯುದ್ದಕ್ಕೂ ನಿಯಮ ಉಲ್ಲಂಘಿಸಿದ ಹಲವು ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಬಹುಮಹಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಯಾವುದೇ ಅಡ್ಡಿ, ಆತಂಕವಿಲ್ಲದೇ ಮುಂದುವರಿದಿದೆ.

ರಸ್ತೆ ವಿಸ್ರಣೆಗೆ ಸಿದ್ಧವಾಗಿದ್ದರೂ ನಗರಸಭೆ ಅಧಿಕಾರಿಗಳು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಿದರು? ಎಂಬ ಪ್ರಶ್ನೆ ಸ್ಥಳೀಯರಲ್ಲಿದೆ. ಜೊತೆಗೆ ಕಟ್ಟಡಗಳಿಗೆ ಇ–ಸ್ವತ್ತು, ಮಳಿಗೆಗಳಿಗೆ ವ್ಯಾಪಾರ ಪರವಾನಗಿ ಹೇಗೆ ಸಿಗುತ್ತಿವೆ? ಎಂಬ ಅನುಮಾನಗಳೂ ಕಾಡುತ್ತಿವೆ. ಹಣದ ಆಮಿಷ, ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿರುವ ನಗರಸಭೆ ಅಧಿಕಾರಿಗಳು ನಿಯಮ ಮೀರಿ ಇ–ಸ್ವತ್ತು, ವಾಣಿಜ್ಯ ಲೈಸೆನ್ಸ್‌ ನೀಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ADVERTISEMENT

ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೊದಲ ಹಂತ, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡನೇ ಹಂತದಲ್ಲಿ ರಸ್ತೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ರಸ್ತೆಯ ಮಧ್ಯ ಭಾಗದಿಂದ 25 ಮೀಟರ್‌ ರಸ್ತೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. 25 ಮೀಟರ್‌ ವ್ಯಾಪ್ತಿಯಲ್ಲಿರುವ 400ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನೂ ಸಿದ್ಧಗೊಳಿಸಲಾಗಿದೆ.

‘ರಸ್ತೆ ವಿಸ್ತರಣೆ ಆಗುವವರೆಗೂ ಯಾವುದೇ ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ತೆರವುಗೊಳಿಸುವಂತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಲೈಸೆನ್ಸ್‌ ನೀಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು ನಿಯಮ ಮೀರಿ ಪ್ರಭಾವಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ. ಇದು ಮುಂದೆ ಪರಿಹಾರ ವಿತರಣೆ ವೇಳೆ ತೊಡಕಾಗಲಿದೆ’ ಎಂದು ವಕೀಲ ಸಿ.ಮಂಜುನಾಥ್‌ ಹೇಳುತ್ತಾರೆ.

ರಸ್ತೆ ವಿಸ್ತರಣೆ ಯೋಜನೆ ಮುನ್ನೆಲೆಗೆ ಬಂದ ನಂತರ ಹಲವು ವಾಣಿಜ್ಯ ಕಟ್ಟಡಗಳು 25 ಮೀಟರ್‌ ಒಳಗಿನ ವ್ಯಾಪ್ತಿಯಲ್ಲಿಯೇ ತಲೆ ಎತ್ತಿವೆ. ವಿವಿಧ ಶೋರೂಮ್‌ಗಳು ಆರಂಭಗೊಂಡಿವೆ. ಮದಕರಿ ವೃತ್ತದಲ್ಲಿ ಬಹುಮಹಡಿ ಕಟ್ಟಡವೊಂದು ತಲೆ ಎತ್ತುತ್ತಿದೆ. ಹೀಗಾಗಿ ರಸ್ತೆ ವಿಸ್ತರಣೆ ಎಂಬುದು ಮಾತಿಗೆ ಹಾಗೂ ಕಾಗದಕ್ಕಷ್ಟೇ ಸೀಮಿತವಾಗಿದ್ದು ವಾಸ್ತವವಾಗಿ ವಿಸ್ತರಣೆ ನಡೆಯದು ಎಂಬ ಅಭಿಪ್ರಾಯ ಹಲವರಲ್ಲಿದೆ.

‘ಬಡವರು ಕಷ್ಟಪಟ್ಟು ಮನೆ ಕಟ್ಟಿದರೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಹಲವು ದಾಖಲೆ ಕೇಳುತ್ತಾರೆ. ಆದರೆ ಅನಧಿಕೃತ ವಾಣಿಜ್ಯ ಮಳಿಗೆಗಳಿಗೆ ಯಾವುದೇ ದಾಖಲೆ ಕೇಳದೇ ಮೀಟರ್‌ ಅಳವಡಿಸುತ್ತಿದ್ದಾರೆ. ದುಡ್ಡು ಕೊಟ್ಟವರಿಗೆ ಮಾತ್ರ ಮೀಟರ್‌ ಹಾಕುತ್ತಿದ್ದಾರೆ’ ಎಂದು ಸ್ಥಳೀಯರೊಬ್ಬರು ಆರೋಪಿಸಿದರು. 

ಕಾಣೆಯಾದ ದಾಖಲೆ:

ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳುವುದಕ್ಕೆ ಮೊದಲು ಬಿ.ಡಿ ರಸ್ತೆಯಲ್ಲೇ ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ವಾಹನಗಳು ಸಂಚರಿಸುತ್ತಿದ್ದವು. ರಸ್ತೆಗೆ ಸಂಬಂಧಿಸಿದ ದಾಖಲೆಗಳೆಲ್ಲವೂ ಲೋಕೋಪಯೋಗಿ ಇಲಾಖೆ ಬಳಿ ಇದ್ದವು. ಹೊಸ ರಾಷ್ಟ್ರೀಯ ಹೆದ್ದಾರಿ, ಬೈಪಾಸ್‌ ನಿರ್ಮಾಣಗೊಂಡ ನಂತರ ಆಸ್ತಿಗಳ ದಾಖಲೆಗಳನ್ನು ನಗರಸಭೆಗೆ ಹಸ್ತಾಂತರ ಮಾಡಲಾಯಿತು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ವಿಸ್ತರಣೆ ಮುನ್ನೆಲೆಗೆ ಬಂದ ನಂತರ ದಾಖಲೆಗಳು ಕಾಣೆಯಾಗಿವೆ. ಲೋಕೋಪಯೋಗಿ ಇಲಾಖೆ, ನಗರಸಭೆಯಲ್ಲಿ ರಸ್ತೆ ಬದಿಯ ದಾಖಲೆಗಳಿಲ್ಲ. ದಾಖಲೆಗಳ ಹುಡುಕಾಟಕ್ಕಾಗಿ ವಿಶೇಷ ಅಧಿಕಾರಿಯನ್ನೂ ನೇಮಕ ಮಾಡಲಾಗಿತ್ತು. ಇಷ್ಟಾದರೂ ಆಸ್ತಿಗಳ ಕಾನೂನು ಮಾನ್ಯತೆ ಕುರಿತಂತೆ ಸಮಗ್ರ ದಾಖಲೆ ದೊರೆಯದಿರುವುದು ರಸ್ತೆ ವಿಸ್ತರಣೆಗೆ ತೊಡಕಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿ.ಡಿ ರಸ್ತೆಯಲ್ಲಿ ಹೊಸದಾಗಿ ವಾಣಿಜ್ಯ ಪರವಾನಗಿ ನೀಡದಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದೇನೆ. ಆದರೂ ಮಳಿಗೆ ತೆರದಿದ್ದರೆ ಅದು ಅನಧಿಕೃತ. ರಸ್ತೆ ವಿಸ್ತರಣೆ ವೇಳೆ ಅಕ್ರಮ ಕಟ್ಟಡ ತೆರವುಗೊಳಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಅನ್ಯ ಉದ್ದೇಶಕ್ಕೆ ಬಳಕೆ; ಬಾಡಿಗೆ ವಸೂಲಿ

ವಿವಿಧ ಸಂಘಟನೆಗಳಿಗೆ ಮಠಗಳಿಗೆ ಸರ್ಕಾರ ಮಂಜೂರು ಮಾಡಿರುವ ಆಸ್ತಿಗಳನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಹೊಳಲ್ಕೆರೆ ರಸ್ತೆಯ ಮುಸ್ಲಿಂ ಸಂಘಟನೆಗೆ ಹಾಸ್ಟೆಲ್‌ ಉದ್ದೇಶಕ್ಕೆ ನೀಡಿದ್ದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಾಗಿ ನೀಡಿದ್ದ ಜಾಗದಲ್ಲಿ ಹೋಟೆಲ್‌ ಬೇಕರಿ ಬಂದಿವೆ. ಶಾಲೆಗಾಗಿ ನೀಡಿದ್ದ ಜಾಗದಲ್ಲೂ ವಾಣಿಜ್ಯ ಮಳಿಗೆ ಬಂದಿದ್ದು ಬಾಡಿಗೆ ವಸೂಲಿ ಮಾಡುಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿದವು.  ‘ಗಾಂಧಿ ವೃತ್ತದಿಂದ ಬಸ್‌ ನಿಲ್ದಾಣಕ್ಕೆ ತೆರಳುವ ಮಾರ್ಗದ ಮಸೀದಿ ಪಕ್ಕದಲ್ಲೇ ರಸ್ತೆಗೆ ಹೊಂದಿಕೊಂಡಂತೆ ಕಟ್ಟಡವೊಂದು ತಲೆ ಎತ್ತಿದೆ. ತರಾತುರಿಯಲ್ಲಿ ಕಾಮಗಾರಿ ಮುಗಿಸಲಾಗುತ್ತಿದೆ. ಇದು ಕೂಡ ಅನಧಿಕೃತವಾಗಿದ್ದು ನೋಟಿಸ್‌ ನೀಡಲಾಗುವುದು’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.