ADVERTISEMENT

ಚಿತ್ರದುರ್ಗ: ಸಿರಿಧಾನ್ಯಗಳ ನಾಡಿನಲ್ಲಿ ‘ಸಾಮೆ’ ಕೇಳುವವರಿಲ್ಲ!

ಎಂ.ಎನ್.ಯೋಗೇಶ್‌
Published 30 ಏಪ್ರಿಲ್ 2025, 7:01 IST
Last Updated 30 ಏಪ್ರಿಲ್ 2025, 7:01 IST
ಹೊಸದುರ್ಗ ತಾಲ್ಲೂಕಿನ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ಕಳೆದ ವರ್ಷ ಉತ್ಕೃಷ್ಟವಾಗಿ ಬೆಳೆದಿದ್ದ ಸಾಮೆ ಬೆಳೆ (ಸಂಗ್ರಹ ಚಿತ್ರ)
ಹೊಸದುರ್ಗ ತಾಲ್ಲೂಕಿನ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ಕಳೆದ ವರ್ಷ ಉತ್ಕೃಷ್ಟವಾಗಿ ಬೆಳೆದಿದ್ದ ಸಾಮೆ ಬೆಳೆ (ಸಂಗ್ರಹ ಚಿತ್ರ)   

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ರಾಜ್ಯದಲ್ಲೇ ಅತೀ ಹೆಚ್ಚು ‘ಸಿರಿಧಾನ್ಯ ಬೆಳೆಯುವ ನಾಡು’ ಎಂದು ಗುರುತಿಸಿಕೊಂಡಿದೆ. ಆದರೆ, ಅಲ್ಲಿ ಹೆಚ್ಚು ಬೆಳೆಯುವ ಸಾಮೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದರೂ ಮತ್ತೆ ಸಿರಿಧಾನ್ಯ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.  

ಕೋಟೆನಾಡು ಭಿನ್ನ ಪರಿಸರಕ್ಕೆ ಹೆಸರುವಾಸಿಯಾಗಿದ್ದು, ಹೊಸದುರ್ಗ ತಾಲ್ಲೂಕು ಭಾಗದ ಕೆಂಪು ಮಣ್ಣು ಸರಿಧಾನ್ಯ ಬೆಳೆಗೆ ಹೇಳಿ ಮಾಡಿಸಿದಂತಿದೆ. ಬಹುತೇಕ ರೈತರು ಸಾಮೆ ಬೆಳೆ ಬಿತ್ತನೆ ಮಾಡುತ್ತಾರೆ. ಅಪಾರ ಪೋಷಕಾಂಶ ಹೊಂದಿರುವ ಇಲ್ಲಿಯ ಸಾಮೆ ರಾಜ್ಯ, ಹೊರರಾಜ್ಯಗಳಿಗೆ ರವಾನೆಯಾಗುತ್ತದೆ. ಪೂರ್ವ ಮುಂಗಾರು ಆರಂಭವಾಗುತ್ತಿದ್ದಂತೆ ಮೇ ಮೊದಲ ವಾರದಲ್ಲಿ ರೈತರು ಸಾಮೆ ಬಿತ್ತನೆ ಆರಂಭಿಸುತ್ತಾರೆ.

ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಜಮೀನು ಬಿತ್ತನೆಗೆ ಸಿದ್ಧಗೊಂಡಿದೆ. ಆದರೆ, ಕಳೆದ ವರ್ಷ ಸಾಮೆ ಬಿತ್ತನೆ ಮಾಡಲು ರೈತರಲ್ಲಿ ಇದ್ದ ಉತ್ಸಾಹ, ಸಂಭ್ರಮ ಈ ಬಾರಿ ಇಲ್ಲವಾಗಿದೆ. ಈಚೆಗೆ ಮಾರುಕಟ್ಟೆಯಲ್ಲಿ ಸಾಮೆ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿರುವುದೇ ರೈತರ ಈ ನಿರಾಸಕ್ತಿಗೆ ಕಾರಣವಾಗಿದೆ.

ADVERTISEMENT

ಹೊಸದುರ್ಗ ತಾಲ್ಲೂಕಿನ ನೂರಾರು ರೈತರು ಕಳೆದ ವರ್ಷ ಬೆಳೆದ ಸಾಮೆ ಮಾರಾಟ ಮಾಡದೇ ಮನೆಯಲ್ಲಿ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಈಗ ಮತ್ತೆ ಸಾಮೆ ಬೆಳೆದರೆ ನಷ್ಟ ಮತ್ತಷ್ಟು ಹೆಚ್ಚುತ್ತದೆ ಎಂಬ ಭಯಕ್ಕೆ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದರೂ ರೈತರಲ್ಲಿ ಬಿತ್ತನೆಯ ಸಂಭ್ರಮ ಕಾಣದಾಗಿದೆ.

ಕನಿಷ್ಠ ಮಟ್ಟಕ್ಕೆ ಬೆಲೆ:

ಕಳೆದ ವರ್ಷ ಕ್ವಿಂಟಲ್‌ ಸಾಮೆ ₹ 4,400ರವರೆಗೂ ಮಾರಾಟವಾಗಿತ್ತು. ಬೆಲೆ ಹೆಚ್ಚಳದ ಕಾರಣದಿಂದಾಗಿ ಹೊಸದುರ್ಗ ತಾಲ್ಲೂಕಿನಾದ್ಯಂತ ಸಾಮೆ ಬಿತ್ತನೆ ಪ್ರದೇಶವೂ ಹೆಚ್ಚಳವಾಗಿತ್ತು. ಬಹುತೇಕ ರೈತರು ಸಾಮೆಯನ್ನೇ ಬೆಳೆದ ಕಾರಣ ಸದ್ಯ ಬೆಲೆ ಕುಸಿದಿದೆ. ಈಗ ಕ್ವಿಂಟಲ್‌ ಸಾಮೆ ₹ 2,800– ₹ 3,000ಕ್ಕೆ ಮಾರಾಟವಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಕಳೆದ ವರ್ಷ ಒಟ್ಟಾರೆ ಜಿಲ್ಲೆಯಾದ್ಯಂತ 32,000 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆಯಾಗಿತ್ತು. ಅದರಲ್ಲಿ ಹೊಸದುರ್ಗ ತಾಲ್ಲೂಕೊಂದರಲ್ಲೇ 28,000 ಹೆಕ್ಟೇರ್‌ ಪ್ರದೇಶದಲ್ಲಿ ಸಾಮೆ ಬಿತ್ತನೆಯಾಗಿತ್ತು. ಸರ್ಕಾರ 2023ನೇ ವರ್ಷವನ್ನು ‘ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಿರುವ ಕಾರಣ ಹೊಸದುರ್ಗ ತಾಲ್ಲೂಕಿನ ರೈತರಿಗೆ ಪ್ರೋತ್ಸಾಹ ದೊರೆತಂತಾಗಿತ್ತು. ಇಡೀ ತಾಲ್ಲೂಕನ್ನು ‘ಸಿರಿಧಾನ್ಯಗಳ ನಾಡು’ ಎಂದು ನಾಮಕರಣ ಮಾಡಿದ್ದು ರೈತರಿಗೂ ಉತ್ಸಾಹ ಬಂದಂತಾಗಿತ್ತು.

‘ಬೆಲೆ ಕುಸಿದಿರುವ ಕಾರಣ ಕಳೆದ ವರ್ಷ ಬೆಳೆದ 150 ಕ್ವಿಂಟಲ್‌ ಸಾಮೆ ಬೆಳೆಯನ್ನು ಮಾರಾಟ ಮಾಡದೇ ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ತಾಲ್ಲೂಕಿನ ಬಹುತೇಕ ಎಲ್ಲರ ಮನೆಯಲ್ಲೂ ಸಾಮೆ ಸಂಗ್ರಹವಿದೆ. ಬಿತ್ತನೆ ಬೀಜಕ್ಕೂ ಕೊರತೆ ಇಲ್ಲ. ಬೆಲೆ ಏರಿಕೆಯಾಗದ ಕಾರಣ ಈ ಬಾರಿ ಮತ್ತೆ ಬಿತ್ತನೆ ಮಾಡಲು ಮನಸ್ಸಾಗುತ್ತಿಲ್ಲ. ರಾಗಿ, ಹುರುಳಿ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮತ್ತೋಡು ಗ್ರಾಮದ ರೈತರೊಬ್ಬರು ಹೇಳಿದರು.

ಖರ್ಚು ಹೆಚ್ಚಳ:

ಸಾಮೆ ಬೆಳೆಯಲು ತಗುಲುವ ಖರ್ಚು ಕೂಡ ರೈತರಿಗೆ ಹೊರೆ ಎನಿಸಿದೆ. ಪ್ರತಿ ಎಕರೆಗೆ 15– 20 ಕೆ.ಜಿ ಬಿತ್ತನೆ ಬೀಜದ ಅವಶ್ಯಕತೆ ಇದೆ. ಜೊತೆಗೆ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಸಿಂಪಡಣೆಯ ಖರ್ಚು ಹೆಚ್ಚಾಗುತ್ತಿದೆ. ಖರ್ಚು ಹಾಗೂ ಬೆಲೆ ನಡುವೆ ಅಂತರ ಹೆಚ್ಚಾಗಿರುವ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

‘ಮಳೆಗಾಲದಲ್ಲಿ ಜಾನುವಾರುಗಳಿಗೆ ಮೇವಿನ ಅವಶ್ಯಕತೆ ಇರುತ್ತದೆ. ಆದರೆ ಸಾಮೆ ಬೆಳೆದರೆ ನಮಗೆ ಹೆಚ್ಚು ಮೇವು ಸಿಗುವುದಿಲ್ಲ. ರಾಗಿಯನ್ನಾದರೂ ಬೆಳೆದರೆ ಹೇರಳವಾಗಿ ಮೇವು ದೊರೆಯುತ್ತದೆ. ಸಾಮೆ ಬೆಳೆಯಲು ಹಿಂದೇಟು ಹಾಕಲು ಇದೂ ಕಾರಣವಾಗಿದೆ’ ಎಂದು  ಶ್ರೀರಾಂಪುರದ ರೈತ ಚಂದ್ರಣ್ಣ ಹೇಳಿದರು.

ಬಹುತೇಕ ರೈತರು ಒಂದೇ ಬೆಳೆ ಹೆಚ್ಚಾಗಿ ಬೆಳೆದಿರುವ ಕಾರಣ ಸಾಮೆ ಬೆಲೆ ಕುಸಿತ ಕಂಡಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ರೈತರನ್ನು ನಷ್ಟದಿಂದ ಸಂರಕ್ಷಣೆ ಮಾಡುವ ನೀತಿ–ನಿಯಮಗಳು ನಮ್ಮಲ್ಲಿ ಇಲ್ಲವಾಗಿವೆ
ಬಿ.ಮಂಜುನಾಥ್‌ ಜಂಟಿ ಕೃಷಿ ನಿರ್ದೇಶಕ

ಬೆಂಬಲ ಬೆಲೆ ಘೋಷಣೆಗೆ ಒತ್ತಾಯ

‘ಹೊಸದುರ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿರುವ ಕಾರಣ ಸಾಮೆ ದರ ಏರಿಕೆಯಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕೇವಲ 3–4 ವರ್ತಕರಿದ್ದಾರೆ. ಮಾರುಕಟ್ಟೆಯಲ್ಲೂ ಅವರೇ ಇರುತ್ತಾರೆ ಹಳ್ಳಿ ವ್ಯಾಪಾರಕ್ಕೂ ಅವರೇ ಬರುತ್ತಾರೆ. ಸಿರಿಧಾನ್ಯಕ್ಕೆ ಬೆಂಗಳೂರು ಭಾಗದಲ್ಲಿ ಹೊರರಾಜ್ಯಗಳಲ್ಲಿ ಅಪಾರ ಬೇಡಿಕೆ ಇದ್ದರೂ ಬೆಲೆ ಏರಿಕೆಯಾಗುತ್ತಿಲ್ಲ. ವರ್ತಕರು ಎಪಿಎಂಸಿ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಸಿರಿಧಾನ್ಯ ಬೆಳೆಗಾರ ವೆಂಕಟೇಶ್‌ ಆರೋಪಿಸಿದರು. ‘ಸರ್ಕಾರ ಹೊಸದುರ್ಗ ತಾಲ್ಲೂಕಿಗೆ ಸಿರಿಧಾನ್ಯಗಳ ನಾಡು ಎಂದು ಹೆಸರಿಸಿದೆ. ನಮ್ಮ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರಿಗೆ ಸನ್ಮಾನವನ್ನೂ ಮಾಡಿದೆ. ಆದರೆ ನಷ್ಟ ನುಭವಿಸುತ್ತಿರುವ ಸಿರಿಧಾನ್ಯ ಬೆಳೆಗಾರರಿಗೆ ಯಾವ ಸಹಾಯವನ್ನೂ ಮಾಡಿಲ್ಲ. ಈಗಲಾದರೂ ಸರ್ಕಾರ ಸಾಮೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎಂದು ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.