ADVERTISEMENT

ಚಿತ್ರದುರ್ಗ ಜಿಲ್ಲೆಯಾದ್ಯಂತ ಮೊಳಗಿದ ಶಿವನಾಮ ಸ್ಮರಣೆ

ಸದ್ಗುರು ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹ, ಜನಪದ– ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:54 IST
Last Updated 16 ಫೆಬ್ರುವರಿ 2026, 6:54 IST
ಶಿವರಾತ್ರಿ ಅಂಗವಾಗಿ ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು
ಶಿವರಾತ್ರಿ ಅಂಗವಾಗಿ ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು   

ಚಿತ್ರದುರ್ಗ: ಶಿವರಾತ್ರಿ ಅಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ ಶಿವನಾಮ ಸ್ಮರಣೆ ಮೊಳಗಿತು. ಶಿವಾಲಯಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವೀರಶೈವ ಸಮಾಜದಿಂದ ಬೆಳಿಗ್ಗೆ 5 ಗಂಟೆಯಿಂದ ಸಾಮೂಹಿಕ ರುದ್ರಾಭಿಷೇಕ ಆಯೋಜಿಸಲಾಗಿತ್ತು. ಸಾವಿರಾರು ಭಕ್ತರು ಅಭಿಷೇಕ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಶಿಸ್ತಿನಿಂದ ಸಾಲಾಗಿ ಬಂದ ಭಕ್ತರು ನೀಲಕಂಠೇಶ್ವರ ಸ್ವಾಮಿಯ ದರ್ಶನ ಪಡೆದರು. ಅರ್ಚಕರು ಸ್ವಾಮಿಯ ಮೂರ್ತಿ, ಪಾರ್ವತಿ ದೇವಿ, ಗಣಪತಿ, ವೀರಭದ್ರಸ್ವಾಮಿ ಮೂರ್ತಿಗೂ ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. 

ದೇವಾಲಯದ ದ್ವಾರದಿಂದ ನೀಲಕಂಠೇಶ್ವರ ಸ್ವಾಮಿ ಗರ್ಭಗುಡಿಯವರೆಗೂ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ್ದರು. ಭಕ್ತರು ಲಿಂಗಗಳ ದರ್ಶನ ಪಡೆದು ಸಂಭ್ರಮಿಸಿದರು.

ADVERTISEMENT

ಆನೆಬಾಗಿಲ ಪಾತಾಳೇಶ್ವರ, ಗಾರೆ ಬಾಗಿಲು ಈಶ್ವರ, ರಂಗಯ್ಯನ ಬಾಗಿಲ ಉಮಾ ಮಹೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನ ಮಂದಿರ, ಕೋಟೆಯ ಕರಿವರ್ತಿ ಈಶ್ವರ, ಮೇಲುದುರ್ಗದ ಸಂಪಿಗೆ ಸಿದ್ದೇಶ್ವರ, ಹಿಡಂಬೇಶ್ವರ, ವೀರಭದ್ರ, ಭೈರವೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸೇರಿದಂತೆ ಶಿವನ ದೇವಸ್ಥಾನಗಳಲ್ಲಿ ಮುಂಜಾನೆಯಿಂದ ತಡರಾತ್ರಿವರೆಗೂ ಪೂಜಾ ಕಾರ್ಯಗಳು ನಡೆದವು.

ಕೋಟೆಯ ಏಕನಾಥೇಶ್ವರಿ, ರಾಜ ಉತ್ಸವಾಂಭ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಾಳಿಕಾ ಮಠೇಶ್ವರಿ, ಗೌರಸಂದ್ರ ಮಾರಮ್ಮ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ಮಹಾ ಶಿವನನ್ನು ವಿವಿಧ ಪುಷ್ಪ, ಬಿಲ್ವಪತ್ರೆಯಿಂದ ವೈವಿಧ್ಯಮಯವಾಗಿ ಅಲಂಕರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಂದ ಶಿವನಾಮ ಜಯಘೋಷಗಳು ನಿರಂತರವಾಗಿ ಮೊಳಗಿದವು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ವೈಭವದ ಪಲ್ಲಕ್ಕಿ ಉತ್ಸವ: ಕರುವಿನ ಕಟ್ಟೆ ವೃತ್ತದಲ್ಲಿನ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವನಾಮ ಸಪ್ತಾಹದ ಅಂಗವಾಗಿ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಹಾಗೂ ಜನಪದ ಉತ್ಸವ ನಡೆಯಿತು. ಪಲ್ಲಕ್ಕಿ ಉತ್ಸವದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಮನಸೂರೆಗೊಂಡಿತು.

ಚಂಡೆ, ಕೀಲುಕುದುರೆ, ತಮಟೆ, ಜಾಂಜ್ ನೃತ್ಯ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್ ಬ್ಯಾಂಡ್, ಕಹಳೆ, ಉರಿಮೆ, ಗೂರವಪ್ಪ, ಛತ್ರಿ ಚಾಮರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದವು.

ಉತ್ಸವವು ನಗರದ ಕಬೀರಾನಂದಾಶ್ರಮದಿಂದ ಪ್ರಾರಂಭವಾಗಿ ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇವಾಲಯ, ಚಿಕ್ಕಪೇಟೆ, ಆನೆಬಾಗಿಲು, ಸಂತೇಪೇಟೆ ವೃತ್ತ, ಮೈಸೂರ್‌ ಬ್ಯಾಂಕ್‌ ವೃತ್ತ, ಧರ್ಮ ಶಾಲಾ ರಸ್ತೆ, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತದಿಂದ ಶ್ರೀಮಠವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತರು ಮನೆಯ ಮುಂಭಾಗದಲ್ಲಿ ನೀರು ಹಾಕಿ ರಂಗೋಲಿ ಬಿಡುವ ಮೂಲಕ ಮೆರವಣಿಗೆಗೆ ಸ್ವಾಗತ ಕೋರಿದರು.

ನೀಲಕಂಠೇಶ್ವರ ಸ್ವಾಮಿ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು
ಶಿವನಾಮ ಸಪ್ತಾಹದ ಅಂಗವಾಗಿ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಹಾಗೂ ಜನಪದ ಉತ್ಸವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.