
ಚಿತ್ರದುರ್ಗ: ‘ಕುಂಚಿಗನಾಳ್ ಕಣಿವೆ ಬಳಿ ನಿರ್ಮಿಸಿರುವ ಜಿಲ್ಲಾಡಳಿತ ಭವನ ಕಟ್ಟಡವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಈ ಕುರಿತು ಆದೇಶ ಬಂದ ಕೂಡಲೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮುಂದುವರಿದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ತೋಟಗಾರಿಕೆ ಇಲಾಖೆ ಜಾಗದ ವ್ಯಾಪ್ತಿಯಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಈಗಾಗಲೇ ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದು, ಸರ್ಕಾರಿ ಆದೇಶವಷ್ಟೇ ಬರಬೇಕಾಗಿದೆ. ವೈದ್ಯಕೀಯ ಕಾಲೇಜಿನ ಕೆಲವು ವಿಭಾಗಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲು ಕ್ರಮ ವಹಿಸಬೇಕು. ವೈದ್ಯಕೀಯ ಕಾಲೇಜಿಗೆ ಗಣಿ ಭಾದಿತ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ದಿಂದ ಅನುದಾನ ಬರವುದಿಲ್ಲ. ಆದರೆ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಕಾಲೇಜು ವ್ಯಾಪ್ತಿಗೆ ಬರುವ ಕಾರಣ ನಿಗಮನ ಅನುದಾನ ಪಡೆಯಬಹುದಾಗಿದೆ’ ಎಂದರು.
ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಯುವರಾಜ್ ಮಾತನಾಡಿ ‘ಜಿಲ್ಲಾಡಳಿತ ಭವನದ ಕಟ್ಟಡವನ್ನು ನಾವು ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಅಲ್ಲಿಗೆ ಬಿಎಸ್‌ಸಿ ನರ್ಸಿಂಗ್ ಹಾಗೂ ಇತರ ಆರೋಗ್ಯ ವಿಜ್ಞಾನ ತರಬೇತಿ ಸಂಸ್ಥೆಗಳನ್ನು ಮಾತ್ರ ಅಲ್ಲಿ ತೆರೆಯಲಾಗುವುದು. ಉಳಿದಂತೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರ ಮಾಡಲಾಡಲಾಗುವುದು. ಅಲ್ಲಿ ತ್ಯಾಜ್ಯ ನಿರ್ವಹಣಾ ಘಟಕ (ಎಸ್‌ಟಿಪಿ) ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕಾಗಿದೆ’ ಎಂದರು.
ಜಿಲ್ಲಾಧಿಕಾರಿ ಉತ್ತರಿಸಿ ‘ಜಿಲ್ಲಾಸ್ಪತ್ರೆ ಆವರಣದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ (ಎಸ್‌ಟಿಪಿ) ಇಲ್ಲದಿರುವುದು ಸರಿಯಲ್ಲ. ಜಿಲ್ಲಾ ಶಸ್ತ್ರಚಿಕಿತ್ಸಕರು ಈ ಬಗ್ಗೆ ಪ್ರಸ್ತಾವವನ್ನೇ ಸಲ್ಲಿಸಿಲ್ಲ. ಬೇರೆ ಎಲ್ಲದಕ್ಕೂ ಪ್ರಸ್ತಾವ ಸಲ್ಲಿಸುತ್ತಾರೆ. ಆದರೆ ಅಗತ್ಯವಾಗಿ ಬೇಕಿರುವ ಎಸ್‌ಟಿಪಿ ಘಟಕಕ್ಕೆ ಪ್ರಸ್ತಾವ ಮಾಡಿಲ್ಲ’ ಎಂದು ಜಿಲ್ಲಾ ಶಸ್ತ್ರಚಕಿತ್ಸಕ ಡಾ.ರವೀಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಟೆಂಡರ್ ಪ್ರಕ್ರಿಯೆ ಆರಂಭಿಸಲು ಸೂಚನೆ: ‘ಕೆಎಂಇಆರ್‌ಸಿ , ಸಿಎಂಐಡಿಪಿ (ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ) ಅಡಿ ಆಡಳಿತಾತ್ಮಕ ಮಂಜೂರಾತಿ ನೀಡಲಾದ ಕಾಮಗಾರಿಗಳಿಗೆ ಕೂಡಲೇ ತಾಂತ್ರಿಕ ಅನುಮೋದನೆ ಪಡೆದು, ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ತಾಂತ್ರಿಕ ಅನುಮೋದನೆ ನೀಡಲು ತಡವಾಗುತ್ತಿರುವುದು ಸರಿಯಲ್ಲ’ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಬೆಂಗಳೂರಿನ ಮುಖ್ಯ ಎಂಜಿನಿಯರ್ ಅವರಿಗೆ ಸಭೆಯಲ್ಲೇ ಕರೆ ಮಾಡಿದ ಅವರು ‘ 6 ತಿಂಗಳಾದರೂ ತಾಂತ್ರಿಕ ಅನುಮೋದನೆ ನೀಡದೆ, ಕಡತಗಳನ್ನು ಇಟ್ಟುಕೊಂಡರೆ, ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ? ಚಿತ್ರದುರ್ಗ ಜಿಲ್ಲೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ ಕೂಡಲೇ ತಾಂತ್ರಿಕ ಅನುಮೋದನೆ ನೀಡಬೇಕು’ ಎಂದು ತಾಕೀತು ಮಾಡಿದರು.
ಬೇಸಿಗೆ ನಿರ್ವಹಿಸಿ: ‘ಈ ಬಾರಿ ಪ್ರಖರ ಬೇಸಿಗೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಿರು ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. 15ನೇ ಹಣಕಾಸು ಯೋಜನೆಯಡಿ ಹಂಚಿಕೆಯಾದ ಅನುದಾನ ಗ್ರಾಮ ಪಂಚಾಯಿತಿಗಳಿಗೆ ಬಂದಿಲ್ಲ. ಗ್ರಾಮ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಚಿತ್ರದುರ್ಗ ಜಿಲ್ಲೆ ಸದಾಕಾಲ ಬರಗಾಲಕ್ಕೆ ತುತ್ತಾಗುತ್ತದೆ. ವಿಪತ್ತು ನಿರ್ವಹಣೆ ನಿಧಿಯನ್ನು ಕುಡಿಯುವ ನೀರಿನ ಕಾಮಗಾರಿಗಳಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಬೇಕು. ದುರಸ್ತಿಯಲ್ಲಿಯಲ್ಲಿರುವ ಘಟಕಗಳನ್ನು ರಿಪೇರಿ ಮಾಡಿಸಿ ಶೇ 100ರಷ್ಟು ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮವಹಿಸಬೇಕು’ ಎಂದರು.
ಸಭೆಯಲ್ಲಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ , ಜಿಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಇದ್ದರು.
‘ಕೆರೆಗಳಿಗೆ ನೀರು ತುಂಬುವ ಮುನ್ನ ಕೆರೆ ಹೂಳು ಎತ್ತಿದರೆ ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದಾಗಿ ಕೆರೆಗಳ ಹೂಳು ಮಣ್ಣನ್ನು ಬಳಸಿಕೊಳ್ಳಲು ರೈತರಿಗೆ ಅನುಮತಿ ನೀಡಲಾಗಿದೆ. ಆದರೆ ವಿನಾಕರಣ ರೈತರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಕೂಡ ಧ್ವನಿಗೂಡಿಸಿದರು. ‘ರೈತರು ಕೆರೆ ಹೂಳು ಮಣ್ಣನ್ನು ಜಮೀನುಗಳಿಗೆ ಬಳಸಲು ಅಡ್ಡಿ ಪಡಿಸಬಾರದು. ಪ್ರಕರಣ ದಾಖಲಿಸುವುದು ದಂಡ ವಸೂಲಿಯಂತಹ ಕ್ರಮಗಳನ್ನು ಕೈಗೊಳ್ಳಬಾರದು. ಮಣ್ಣನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ ಸಣ್ಣ ನೀರಾವರಿ ಜಿಲ್ಲಾ ಪಂಚಾಯಿತಿಗಳಿಂದ ಅನುಮತಿ ಪಡೆಯಬೇಕು’ ಎಂಧರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉತ್ತರಿಸಿ ‘ಅನುಮತಿ ಕೋರುವಾಗ ರೈತರು ತಮ್ಮ ಜಮೀನಿನ ಪಹಣಿ ಮತ್ತು ಕೃಷಿ ಚಟುವಟಿಕೆಯ ಉದ್ದೇಶ ಸ್ಪಷ್ಟಪಡಿಸಬೇಕು. ಕೇವಲ ಟ್ರ್ಯಾಕ್ಟರ್ ಮೂಲಕ ಮಾತ್ರ ಮಣ್ಣು ಸಾಗಿಸಲು ಅವಕಾಶವಿದೆ. ವಾಣಿಜ್ಯ ಚಟುವಟಿಕೆಗೆ ಕೆರೆ ಮಣ್ಣು ಸಾಗಣೆಗೆ ಅವಕಾಶವಿಲ್ಲ. ಒಂದು ಮೀಟರ್‌ಗಿಂದ ಹೆಚ್ಚು ಆಳಕ್ಕೆ ಗುಂಡಿ ತೋಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಮಾತನಾಡಿ ‘ಹಲವು ವರ್ಷಗಳಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯುಷ್ ಆಸ್ಪತ್ರೆಯೂ ಇತ್ತು. ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭಗೊಂಡ ನಂತರ ಆಯುಷ್ ಆಸ್ಪತ್ರೆಗೆ ಜಾಗದ ಕೊರತೆಯಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಈಗ ಹೊಸದಾಗಿ ನಿರ್ಮಾಣಗೊಂಡಿರುವ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಮ್ಮ ಆಯುಷ್ ಆಸ್ಪತ್ರೆಗೂ ಜಾಗ ಸಿಗುತ್ತದೆಯೇ’ ಎಂದು ಪ್ರಶ್ನಿಸಿದರು. ಆಯುಷ್ ಅಧಿಕಾರಿ ಪ್ರಶ್ನೆಯನ್ನು ಸಚಿವರು ಶಾಸಕರು ಹಾಗೂ ಅಧಿಕಾರಿಗಳು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅದನ್ನು ನಿರ್ಲಕ್ಷಿಸಿ ಬೇರೆ ವಿಚಾರಗಳತ್ತ ಹೊರಳಿದರು. ಉತ್ತರ ಸಿಗದ ಆಯುಷ್ ಅಧಿಕಾರಿ ಬೇಸರದಿಂದ ಕುಳಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.