ADVERTISEMENT

ಚಿತ್ರದುರ್ಗ: ಕಂಪಳರಂಗ ಸ್ವಾಮಿ ಜಾತ್ರೆ ವೈಭವದ ಆಚರಣೆ

ಬುಡಕಟ್ಟು ಸಂಸ್ಕೃತಿಗೆ ಖ್ಯಾತಿ, ಅಪಾರ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:09 IST
Last Updated 31 ಜನವರಿ 2026, 7:09 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಕಂಪಳರಂಗ ಸ್ವಾಮಿ ಜಾತ್ರೆಯಲ್ಲಿ ಪದಿಗಳ ಮುಂದೆ ದೇವರ ಎತ್ತುಗಳನ್ನು ಓಡಿಸಲಾಯಿತು.
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಕಂಪಳರಂಗ ಸ್ವಾಮಿ ಜಾತ್ರೆಯಲ್ಲಿ ಪದಿಗಳ ಮುಂದೆ ದೇವರ ಎತ್ತುಗಳನ್ನು ಓಡಿಸಲಾಯಿತು.   

ಮೊಳಕಾಲ್ಮುರು: ಮ್ಯಾಸನಾಯಕ ಜನಾಂಗದ ಪ್ರಮುಖ ದೇವರುಗಳಲ್ಲಿ ಒಂದಾದ ಕಂಪಳರಂಗ ಸ್ವಾಮಿಯ ಜಾತ್ರೆಯ ಮುಖ್ಯಘಟ್ಟಗಳು ಶುಕ್ರವಾರ ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿ ಜಾತ್ರೆಯಲ್ಲಿ ವೈಭವದಿಂದ ಜರುಗಿದವು.

ಪ್ರತಿವರ್ಷ ನಾಗಮಾಸ ಅಮಾವಾಸ್ಯೆ ಮುಗಿದ 5 ದಿನಗಳ ನಂತರ ಈ ಜಾತ್ರೆಗೆ ಚಾಲನೆ ನೀಡುವುದು ನಡೆದುಕೊಂಡು ಬಂದಿದೆ. ಫೆ. 22ರಂದು ಮ್ಯಾಸನಾಯಕ ದೇವರ ಉತ್ಸವ ಮೂರ್ತಿಗಳನ್ನು ದೇವಸ್ಥಾನದಿಂದ ಹೊರತಂದು ಜಾತ್ರೆ ನಡೆಯುವ ಸ್ಥಳದಲ್ಲಿ ಸ್ಥಾಪಿಸಿದ್ದ ತಾತ್ಕಾಲಿಕ ಪದಿಗಳಲ್ಲಿ ಸ್ಥಾಪಿಸುವ ಮೂಲಕ ಚಾಲನೆ ನೀಡಲಾಗಿತ್ತು.

ಕಂಪಳರಂಗ ಸ್ವಾಮಿ ಜತೆಯಲ್ಲಿ ಜನಾಂಗದ ಇತರೆ ದೇವರುಗಳಾದ ಜಗಳೂರು ಪಾಪನಾಯಕ, ಜೋಗೇಶ್ವರ ಸ್ವಾಮಿ, ಪಾಪನಾಯಕ ಸ್ವಾಮಿ ದೇವರುಗಳನ್ನು ಸಹ ಕರೆತಂದು ಪದಿಗಳಲ್ಲಿ ಸ್ಥಾಪನೆ ಮಾಡಲಾಯಿತು. ನಂತರ ಪ್ರತಿದಿನ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ರಾಜ್ಯದ ವಿವಿಧ ಭಾಗದಲ್ಲಿ ನೆಲೆಸಿರುವ ಮ್ಯಾಸನಾಯಕ ಜನಾಂಗದರು ಬಂದು ಪೂಜೆ, ಕಾಣಿಕೆ ಸಲ್ಲಿಸಿದರು.

ADVERTISEMENT

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಮತ್ತು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಹೊಲದಲ್ಲಿ ಬೆಳೆದಿದ್ದ ಹುರುಳಿ ಮೀಸಲು ಅರ್ಪಣೆ, ಬೆಣ್ಣೆ ಅರ್ಪಣೆ, ದೇವರ ಎತ್ತುಗಳನ್ನು ಸಲಹುವ ಕಿಲಾರಿಗಳಿಗೆ ಕಾಣಿಕೆ ಅರ್ಪಣೆ ಜಾತ್ರೆಯ ಮುಖ್ಯ ಘಟ್ಟಗಳಾಗಿವೆ. ಶುಕ್ರವಾರ ಮಹಾಪೂಜೆ ನಂತರ ಮಧ್ಯಾಹ್ನ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹೂಡೇಂನಿಂದ ಬಂದ ಅಲಂಕೃತ ಕುದುರೆ ಸ್ವಾಗತ ಮಾಡಿಕೊಂಡು ಪೂಜೆ ಸಲ್ಲಿಸಿ ದೇವರ ದರ್ಶನ ಮಾಡಿಸಲಾಯಿತು.

ನಂತರ ಪದಿಗಳ ಎದುರು ಕಿಲಾರಿಗಳು ಹತ್ತಾರು ದೇವರ ಎತ್ತುಗಳನ್ನು ಓಡಿಸಿದರು. ಭಕ್ತರು ಎತ್ತುಗಳು, ಕಿಲಾರಿಗಳಿಗೆ ನಮಸ್ಕರಿಸಿದರು.

ಶನಿವಾರ ಮರುದೀಪ, ಬೆಣ್ಣೆ ಮೀಸಲು ಅರ್ಪಣೆ, ಮಹಾಪೂಜೆ ನಡೆಯಲಿದೆ. ಭಾನುವಾರ ಸಂಜೆ ದೇವರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ವಾಪಸ್‌ ಕರೆದುಕೊಂಡು ಹೋಗಿ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ಪದಿಯಲ್ಲಿರುವ ದೇವರುಗಳಿಗೆ ಭಕ್ತರು ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.