ADVERTISEMENT

ಸರ್ಕಾರದ ಅನುಮತಿ ಪಡೆಯದ ಕಾರಣ ಸೋಂಕಿತ ವ್ಯಕ್ತಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 17 ಮೇ 2020, 13:22 IST
Last Updated 17 ಮೇ 2020, 13:22 IST
ಎ. ನಾರಾಯಣಸ್ವಾಮಿ.
ಎ. ನಾರಾಯಣಸ್ವಾಮಿ.   

ಚಿತ್ರದುರ್ಗ: ‘ಚೆನ್ನೈನಿಂದ ಕೋಡಿಹಳ್ಳಿಗೆ ಬಂದ ವ್ಯಕ್ತಿ ವಿರುದ್ಧ ತಳುಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಸಂಚಾರ ಮಾಡಿ ಬಂದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲೂ ಯಾಕೆ ತಡೆದು ತಪಾಸಣೆ ನಡೆಸಿಲ್ಲ ಎಂಬ ಕುರಿತು ಪರಿಶೀಲನೆ ನಡೆಯಲಿದೆ’ ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.

ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸರ್ಕಾರದಿಂದ ಅನುಮತಿ ಪಡೆಯದೇ 20 ದಿನದ ಹಸುಗೂಸು, ಬಾಣಂತಿ ಹಾಗೂ 3 ವರ್ಷದ ಮಗುವಿನೊಂದಿಗೆ ಜಿಲ್ಲೆಗೆ ಬಂದಿದ್ದು, ತಪ್ಪು. ಅಲ್ಲದೆ, ಊರಿಗೆ ಬಂದ ನಂತರ ಮನೆಯಲ್ಲೇ ಇರುವುದನ್ನು ಬಿಟ್ಟು ಅನೇಕ ಗ್ರಾಮಗಳಲ್ಲಿ ಸಂಚರಿಸಿರುವ ಕಾರಣ ದೂರು ದಾಖಲಿಸಿದ್ದಾರೆ. ಇದು ಬೇರೆಯವರಿಗೂ ಎಚ್ಚರಿಕೆ ಇದ್ದಂತೆ’ ಎಂದು ತಿಳಿಸಿದರು.

‘ಗುಜರಾತಿನ ಅಹಮದಾಬಾದಿನಿಂದ ಜಿಲ್ಲೆಗೆ ಬಂದ ತಬ್ಲಿಗಿಗಳು ಸೇವಾಸಿಂಧು ಇ-ಪಾಸ್‌ ಮೂಲಕ ಚೆಕ್‌ಪೋಸ್ಟ್‌ಗಳಲ್ಲಿ ಪ್ರವೇಶವಕಾಶ ಪಡೆದಿದ್ದರು. ಈ ಕಾರಣಕ್ಕೆ ಅವರ ಮೇಲೆ ದೂರು ದಾಖಲಾಗಿಲ್ಲ’ ಎಂದ ಅವರು, ‘ಇನ್ನೂ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಎಚ್.ಎಂ. ರೇವಣ್ಣ ನೇತೃತ್ವದಲ್ಲಿ ನಡೆದ ಸಭೆ ಕುರಿತು ಅಧಿಕಾರಿಗಳು ಪರಿಶೀಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭ: ‘ಅಜ್ಜಂಪುರ ಬಳಿಯ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಅಡ್ಡವಾಗಿದ್ದ ಸಮಸ್ಯೆ ಬಗೆಹರಿಸಲಾಗಿದೆ. ಈ ಸಂಬಂಧ ತಜ್ಞ ಎಂಜಿನಿಯರ್‌ಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ರೈಲ್ವೆ ಕೋಚ್‌ನ ಸಿಮೆಂಟ್ ಬ್ಲಾಕ್‌ಗಳ ಸಹಾಯದಿಂದ ಈಗ ಕೆಲಸ ಆರಂಭಗಾವಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿದರೆ ಜಿಲ್ಲೆಯ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮುಖಂಡರಾದ ಜಿ.ಎಂ.ಸುರೇಶ್, ಸಿದ್ದೇಶ್ ಯಾದವ್, ಶಶಿಧರ್, ನಾಗರಾಜ್ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.