ADVERTISEMENT

ಚಿತ್ರದುರ್ಗ | ಈರುಳ್ಳಿ ಹಾನಿ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ನಿರಂತರ ಮಳೆಯಿಂದ ಕಾಡುತ್ತಿದೆ ಕೊಳೆ ರೋಗ; ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:57 IST
Last Updated 19 ಆಗಸ್ಟ್ 2025, 4:57 IST
ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದ ಆರ್‌.ಎನ್‌.ಪಾರ್ಥ ಅವರ ಈರುಳ್ಳಿ ಬೆಳೆ ಮಳೆ ನೀರಲ್ಲಿ ಮುಳುಗಿರುವುದು
ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದ ಆರ್‌.ಎನ್‌.ಪಾರ್ಥ ಅವರ ಈರುಳ್ಳಿ ಬೆಳೆ ಮಳೆ ನೀರಲ್ಲಿ ಮುಳುಗಿರುವುದು   

ಚಿತ್ರದುರ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕಿನಲ್ಲಿ ಬೆಳೆದಿರುವ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಕೊಚ್ಚಿ ಹೋಗುತ್ತಿದೆ. ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣ ಅವಕೃಪೆ ತೋರಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದ ಕಾರಣ ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಈ ವರ್ಷ 22,000ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಕಳೆದ ವರ್ಷಕ್ಕಿಂತ ಶೇ 10ರಷ್ಟು ಭೂಮಿಯಲ್ಲಿ ಹೆಚ್ಚು ಬಿತ್ತನೆಯಾಗಿತ್ತು. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬೆಳೆ ಕಟಾವಿಗೆ ಬರುತ್ತಿತ್ತು. ಆದರೆ, ಕಳೆದ 3 ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಶೀತ ವಾತಾವರಣ ತೀವ್ರಗೊಂಡಿದೆ. ಈರುಳ್ಳಿ ಹೊಲದಲ್ಲಿ ನೀರು ನಿಂತಿರುವ ಕಾರಣ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಬೆಳೆ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಣೆ, ರಸಗೊಬ್ಬರ ಹಾಕಿದ್ದಾರೆ. ಆದರೂ ತೀವ್ರ ಶೀತದ ಕಾರಣಕ್ಕೆ ಬೆಳೆ ಹಾನಿಯಾಗಿದೆ. ಇನ್ನೊಂದು ತಿಂಗಳಲ್ಲಿ ಕೈಗೆ ಬರಬೇಕಾದ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದಕ್ಕೆ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಹಾನಿಯಾಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಹರ್ತಿಕೋಟೆ ಗ್ರಾಮದ ಆರ್‌.ಎನ್‌.ಪಾರ್ಥಲಿಂಗ ಅವರು ಮುಂಗುಸವಳ್ಳಿ ಭಾಗದಲ್ಲಿ 30 ಎಕರೆ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. 95 ಕೆ.ಜಿ ಬಿತ್ತನೆ ಬೀಜ ಹಾಕಿದ್ದರು. ಕನಿಷ್ಠ ₹ 10 ಲಕ್ಷ ಖರ್ಚು ಮಾಡಿದ್ದರು. ಬಹುತೇಕ ಭಾಗ ಮಳೆ ನೀru ನಿಂದು ಮುಳುಗಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ADVERTISEMENT

‘ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಪೈರು ಕೊಚ್ಚಿ ಹೋಗುತ್ತಿದೆ. ನಮ್ಮ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ನಾಶವಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಷ್ಟ ಪರಿಹಾರ ನೀಡಬೇಕು’ ಎಂದು ಪಾರ್ಥಲಿಂಗ ಒತ್ತಾಯಿಸಿದರು.

ಹರ್ತಿಕೋಟೆ ಗ್ರಾಮದ ಎಲ್. ರಂಗನಾಥ್ ಅವರ 2 ಎಕರೆ, ರಾಜಣ್ಣ ಅವರ 1.03 ಎಕರೆ, ಜಿ. ಶ್ರೀನಿವಾಸ್ ಅವರ 1 ಎಕರೆ, ತಾಳವಟ್ಟಿ ಗ್ರಾಮದ ಲಕ್ಷ್ಮೀದೇವಿ ಅವರ 5 ಎಕರೆ ಈರುಳ್ಳಿ ಬೆಳೆ ಮಳೆಯ ನೀರಿನಲ್ಲಿ ಮುಳುಗಿದ್ದು, ಈರುಳ್ಳಿ ಗೆಡ್ಡೆಗಳು ಕೊಳೆಯುವ ಆತಂಕ ಎದುರಾಗಿದೆ.

ಹಿರಿಯೂರು ತಾಲ್ಲೂಕಿನ ತಾಳವಟ್ಟಿಯಲ್ಲಿ ಸುಮಾರು 15 ಎಕರೆಯಷ್ಟು ಈರುಳ್ಳಿ ಹೊಲದಲ್ಲಿ ನೀರು ನಿಂತಿದೆ. ಶ್ರೀನಿವಾಸ್ ಅವರ ಹೊಲದಲ್ಲಿ ನಿಂತಿರುವ ನೀರು ನಿಂತಿದ್ದು ನೀರು ಹೊರಹಾಕಲು ಕಾಲುವೆ ತೋಡಿದ್ದಾರೆ. ಆದರೂ ನೀರು ಕಡಿಮೆಯಾಗದ ಕಾರಣ ಬೆಳೆ ಕೊಚ್ಚಿ ಹೋಗುತ್ತಿದೆ.

ಈರುಳ್ಳಿ ಬೆಳೆ ಹಾನಿ ಸಮೀಕ್ಷೆ ಜಿಲ್ಲೆಯಲ್ಲಿ ಆರಂಭಗೊಂಡಿದೆ. ನಿಯಮಾನುಸಾರ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು
ಎಸ್‌.ಎಸ್‌.ಭೋಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.