ADVERTISEMENT

ಚಿತ್ರದುರ್ಗ | ಖಾಸಗಿ ಬಸ್‌ ನಿಲ್ದಾಣ; ದುರ್ವಾಸನೆಗೆ ಜನ ಹೈರಾಣ

ತರಕಾರಿ ಮಾರುಕಟ್ಟೆಯಲ್ಲಿ ಕಸ ಸುರಿಯುತ್ತಿರುವ ವರ್ತಕರು, ಮೂಗು ಮುಚ್ಚಿ ಓಡಾಡುವ ಪ್ರಯಾಣಿಕರು

ಎಂ.ಎನ್.ಯೋಗೇಶ್‌
Published 3 ನವೆಂಬರ್ 2025, 8:37 IST
Last Updated 3 ನವೆಂಬರ್ 2025, 8:37 IST
ಚಿತ್ರದುರ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಾರುಕಟ್ಟೆ ತ್ಯಾಜ್ಯ ಸುರಿದಿರುವುದು
ಚಿತ್ರದುರ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಾರುಕಟ್ಟೆ ತ್ಯಾಜ್ಯ ಸುರಿದಿರುವುದು   

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್‌ನಿಲ್ದಾಣದ ಆವರಣದ ಸ್ಥಿತಿ ಸಾಕ್ಷಾತ್‌ ಕಸದ ತೊಟ್ಟಿಯಂತಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಿಲ್ದಾಣ ಪ್ರವೇಶಿಸಬೇಕಾದ ಪರಿಸ್ಥಿತಿಯುಂಟಾಗಿದೆ.

ಜಿಲ್ಲೆಯ ವಿವಿಧ ಭಾಗಗಳಿಗೆ ಖಾಸಗಿ ಬಸ್‌ಗಳು ಸಂಪರ್ಕ ಸೇತುವೆಯಾಗಿವೆ. ಬಹುತೇಕ ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕ ಇಲ್ಲ. ಗಡಿ ಪ್ರದೇಶ, ಕಾಡಂಚಿನ ಹಳ್ಳಿಗಳಿಗೆ ಜನರು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ನಿಲ್ದಾಣದಿಂದ 200ಕ್ಕೂ ಹೆಚ್ಚು ಬಸ್ ಗ್ರಾಮೀಣ ಭಾಗದ ವಿವಿಧ ಮಾರ್ಗಗಳಿಗೆ ಸೇವೆ ನೀಡುತ್ತವೆ.

ಖಾಸಗಿ ಬಸ್‌ ನಿಲ್ದಾಣ ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡಂತಿದ್ದು ತರಕಾರಿ, ಅಂಗಡಿ, ಮಳಿಗೆಗಳ ತ್ಯಾಜ್ಯ ನಿಲ್ದಾಣ ಸೇರುತ್ತಿದೆ. ಈ ಬಗ್ಗೆ ಪ್ರಯಾಣಿಕರು, ಖಾಸಗಿ ಬಸ್‌ ಮಾಲೀಕರು, ಚಾಲಕರು ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟಿದ್ದಾರೆ. ಆದರೆ, ತ್ಯಾಜ್ಯವು ಬಸ್‌ ನಿಲ್ದಾಣದ ಅಂಗಳ ಸೇರದಂತೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.

ADVERTISEMENT

ಮೂಲ ಸೌಲಭ್ಯಗಳೇ ಇಲ್ಲದ ನಿಲ್ದಾಣದಲ್ಲಿ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ತ್ಯಾಜ್ಯದ ಸಮಸ್ಯೆ ಮಿತಿ ಮೀರಿದೆ. ಮಳೆ ಬಂದಾಗ ತರಕಾರಿ ಮಾರುಕಟ್ಟೆ ಕಡೆಯಿಂದ ಹರಿದು ಬರುವ ಕೊಳಚೆ ನೀರು ಖಾಸಗಿ ಬಸ್‌ ನಿಲ್ದಾಣದತ್ತ ನುಗ್ಗುತ್ತದೆ. ರಾತ್ರಿ 9 ಗಂಟೆಯ ನಂತರ ನಿಲ್ದಾಣದಲ್ಲಿ ಬಸ್ ಸೇವೆ ಸ್ಥಗಿತಗೊಳ್ಳುತ್ತದೆ. ಇದೇ ಸಂದರ್ಭವನ್ನು ನೋಡಿಕೊಳ್ಳುವ ಕೆಲ ತರಕಾರಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಕಸ ತಂದು ಸುರಿಯುತ್ತಾರೆ.

ಬೆಳಿಗ್ಗೆ ಬಸ್‌ಗಳು ನಿಲ್ದಾಣದ ಅಂಗಳಕ್ಕೆ ಬಂದಾಗ ಇಡೀ ಆವರಣ ಕಸದ ರಾಶಿಯಿಂದ ತುಂಬಿ ಹೋಗಿರುತ್ತದೆ. ನಗರಸಭಾ ಸಿಬ್ಬಂದಿ ಸ್ವಚ್ಛತೆಗೆ ಆದ್ಯತೆ ನೀಡದ ಕಾರಣ ಕೊಳಚೆ, ಕಸದ ನಡುವೆಯೇ ಬಸ್‌ಗಳು ಓಡಾಡುತ್ತಿವೆ. ತಮ್ಮ ಊರುಗಳಿಗೆ ತೆರಳಲು ಬರುವ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ದುರ್ವಾಸನೆ ನಡುವೆಯೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸ ಸಂಗ್ರಹ ತಾಣ: ನಗರಸಭಾ ಕಸ ಸಂಗ್ರಹ ಸಿಬ್ಬಂದಿ ನಿಲ್ದಾಣವನ್ನು ತ್ಯಾಜ್ಯ ಸುರಿಯುವ ಜಾಗ ಮಾಡಿಕೊಂಡಿದ್ದಾರೆ. ವಿವಿಧ ಬಡಾವಣೆಗಳಿಂದ ಕಸ ತೆಗೆದುಕೊಂಡು ಬರುವ ಸಿಬ್ಬಂದಿ ಖಾಸಗಿ ಬಸ್‌ ನಿಲ್ದಾಣದ ಬದಿಯಲ್ಲೇ ಅದನ್ನು ಇಡುತ್ತಾರೆ. 2–3 ದಿನಗಳವರೆಗೂ ಅದು ನಿಲ್ದಾಣದಲ್ಲೇ ಇರುತ್ತದೆ. ಹೀಗಾಗಿ ಇಡೀ ಬಸ್‌ ನಿಲ್ದಾಣದ ಆವರಣ ದುರ್ವಾಸನೆಯಿಂದ ಕೂಡಿರುತ್ತದೆ.

‘ಹೊರಗಿನಿಂದ ತಂದ ಕಸವನ್ನು ನಿಲ್ದಾಣದ ಸಮೀಪ ಸಂಗ್ರಹಿಸಿಡಬೇಡಿ ಎಂದು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮನವಿ ಮಾಡಿದ್ದೇವೆ. ಅವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು, ಚಾಲಕರು, ನಿರ್ವಾಹಕರು ನರಕಯಾತನೆ ಅನುಭವಿಸಬೇಕಾಗಿದೆ’ ಎಂದು ಬಸ್‌ ಚಾಲಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಮಾಲೀಕರು–ಚಾಲಕರ ಸಂಘದಿಂದ ಸ್ವಚ್ಛತೆ: ಖಾಸಗಿ ಬಸ್‌ ಮಾಲೀಕರು ಹಾಗೂ ಚಾಲಕರ ಸಂಘದಿಂದ ಬಸ್‌ ನಿಲ್ದಾಣದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ. ಫ್ಲಾಟ್‌ಫಾರಂ ಸುತ್ತಮುತ್ತಲಿನ ಜಾಗದಲ್ಲಿ ಕಸ ಗುಡಿಸಲಾಗುತ್ತದೆ. ಆದರೆ, ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಕಸ ಸುರಿಯುವುದನ್ನು ತಡೆಯಲು ಸಾಧ್ಯವಾಗಿಲ್ಲ.

ನಿಲ್ದಾಣದ ಆವರಣದಲ್ಲಿ 2 ಶೌಚಾಲಯಗಳಿವೆ. ಅಲ್ಲಿಗೆ ನೀರು ಪೂರೈಕೆ ಇಲ್ಲದ ಕಾರಣ ಪ್ರಯಾಣಿಕರು ಗೋಡೆ ಬದಿಯಲ್ಲೇ ಶೌಚ ಮಾಡುತ್ತಿದ್ದು, ಇದೂ ದುರ್ವಾಸನೆ ಹೆಚ್ಚಾಗಲು ಕಾರಣವಾಗಿದೆ. ಸಮೀಪದಲ್ಲೇ ನಗರಸಭೆಯಿಂದ ಗುತ್ತಿಗೆ ಪಡೆದಿರುವವರು ಶೌಚಾಲಯ ನಿರ್ಮಿಸಿದ್ದು, ಶೌಚಕ್ಕೆ ₹ 10 ಪಡೆಯುತ್ತಾರೆ. ಹೀಗಾಗಿ ಪ್ರಯಾಣಿಕರು ಅಲ್ಲಿಗೂ ಹೋಗುವುದಿಲ್ಲ. ಹೊರಗೇ ಶೌಚ ಮಾಡುವುದರಿಂದ ಇಡೀ ಆವರಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ.

‘ಒಂದು ಕಡೆ ಕಸದ ವಾಸನೆ, ಇನ್ನೊಂದೆಡೆ ಗೋಡೆ ಬದಿಯ ಶೌಚದಿಂದಾಗಿ ದುರ್ವಾಸನೆ ಬೀರುತ್ತಿದೆ. ಕೆಲವು ಸಂದರ್ಭಗಳಲ್ಲಿ ಬಸ್‌ಗಳು ಅರ್ಧಗಂಟೆಯಿಂದ 1 ಗಂಟೆ ನಿಲ್ದಾಣದಲ್ಲೇ ನಿಲ್ಲುತ್ತವೆ. ಆಗ ದುರ್ನಾತ ಸಹಿಸಿಕೊಂಡೇ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ. ಇದರಿಂದ ತಲೆನೋವು, ಕೆಮ್ಮು ಸೇರಿದಂತೆ ಹಲವು ರೋಗಗಳು ಕಾಡುತ್ತಿವೆ’ ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಕಸದ ರಾಶಿಯ ನಡುವೆ ಚಿತ್ರದುರ್ಗ ಖಾಸಗಿ ಬಸ್‌ ನಿಲ್ದಾಣ
ಮೊಳಕಾಲ್ಮುರು ಖಾಸಗಿ ಬಸ್‌ ನಿಲ್ದಾಣದಲ್ಲಿ ಕಾರು ಬೈಕ್‌ಗಳ ಹಾವಳಿ

ಬಸ್‌ ನಿಲ್ದಾಣ ಸೇರುತ್ತಿರುವ ತರಕಾರಿ, ಅಂಗಡಿಗಳ ತ್ಯಾಜ್ಯ  ಖಾಸಗಿ ಬಸ್‌ ನಿಲ್ದಾಣದಲ್ಲಿ ಮರೀಚಿಕೆಯಾದ ಸ್ವಚ್ಛತೆ ಬಸ್‌ ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡದ ನಗರಸಭೆ

ಚಿತ್ರದುರ್ಗ ಖಾಸಗಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕಸ ಸುರಿಯದಂತೆ ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು
ಎಸ್‌.ಲಕ್ಷ್ಮಿ ನಗರಸಭೆ ಪೌರಾಯುಕ್ತೆ

ಸ್ವಚ್ಛತೆ ಕೊರತೆ; ಅವ್ಯವಸ್ಥೆ

-ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಆವರಣ ಅವ್ಯವಸ್ಥೆಯ ಆಗರವಾಗಿದ್ದು, ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲ್ಲದ ಕಾರಣ ಪ್ರಯಾಣಿಕರು ಅವುಗಳಿಗಾಗಿ ಹುಡುಕಾಡುವ ಪರಿಸ್ಥಿತಿ ಇದೆ. ಶೌಚಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿರುವ ಕಾರಣ ಪರದಾಡುವಂತಾಗಿದೆ.

15 ವರ್ಷಗಳ ಹಿಂದೆ ಇಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಬಸ್‌ಗಳ ನಿಲುಗಡೆಗೆ ಪ್ಲಾಟ್‌ ಫಾರಂಗಳೂ ತಲೆ ಎತ್ತಿವೆ. ಆದರೆ ಬಸ್‌ಗಳನ್ನು ನಿಗದಿತ ಫ್ಲಾಟ್‌ ಫಾರಂ ಬದಲು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಬೇರೆ ಬೇರೆ ಊರುಗಳಿಂದ ಬರುವ ಪ್ರಯಾಣಿಕರು ತಾವು ಹತ್ತುವ ಬಸ್‌ಗಳಿಗಾಗಿ ಹುಡುಕಾಟ ನಡೆಸಬೇಕಿದೆ. ಆವರಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷಗಳು ಉರುಳಿದರೂ ಕ್ರಮ ಕೈಗೊಂಡಿಲ್ಲ. ದೂರದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ನಲುಗಿದೆ. ಹಳ್ಳಿಗಳಿಂದ ಬರುವವರು ಬೈಕ್‌ ಮತ್ತು ಕಾರ್‌ಗಳನ್ನು ನಿಲ್ದಾಣದ ಆವರಣದಲ್ಲೇ ನಿಲ್ಲಿಸಿ ಹೋಗುವ ಕಾರಣ ಓಡಾಡಲೂ ಆಗದಂತ ಸ್ಥಿತಿ ಉಂಟಾಗುತ್ತಿದೆ.

ಖಾಸಗಿ ಬಸ್‌ ನಿಲ್ದಾಣಕ್ಕೆ ಸಮರ್ಪಕವಾಗಿ ನೀರಿನ ಪೂರೈಕೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಬಿಡಾಡಿ ದನಗಳ ಹಾವಳಿ

-ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ಪಟ್ಟಣದಲ್ಲಿರುವ ಖಾಸಗಿ ಬಸ್ ನಿಲ್ದಾಣ ಹಳೆಯದಾಗಿದ್ದು, ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಬಿಡಾಡಿ ದನಗಳು ನಿಲ್ದಾಣದಲ್ಲೇ ಮಲಗುವುದರಿಂದ ಸಗಣಿ, ಗಂಜಲ ತುಂಬಿರುತ್ತದೆ.‌

ಬಸ್ ನಿಲ್ದಾಣದ ಚಾವಣಿಗೆ ಅಳವಡಿಸಿರುವ ಶೀಟ್‌ಗಳು ತೂತು ಬಿದ್ದಿದ್ದು, ಮಳೆ ಬಂದರೆ ಸೋರುತ್ತದೆ. ನಿಲ್ದಾಣದ ಒಳಗಿರುವ ಟೈಲ್ಸ್‌ಗಳು ಒಡೆದು ಹೋಗಿದ್ದು, ಅಲ್ಲಲ್ಲಿ ಮಣ್ಣು ತುಂಬಿದೆ. ಮಳೆಗಾಲದಲ್ಲಿ ನಿಲ್ದಾಣ ಕೆಸರು ಗದ್ದೆಯಂತಾಗುತ್ತದೆ. 

ಬಸ್ ನಿಲ್ದಾಣದ ಒಂದು ಭಾಗದಲ್ಲಿ ದೊಡ್ಡ ಕಂದಕ ನಿರ್ಮಾಣ ಆಗಿದ್ದು, ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಪ್ರಯಾಣಿಕರು ಗುಂಡಿಯಲ್ಲಿ ಬೀಳುವ ಅಪಾಯವೂ ಇದೆ. ನಿಲ್ದಾಣದ ತುಂಬ ಗುಟ್ಕಾ, ಎಲೆ ಅಡಿಕೆ ಉಗಿದಿದ್ದು, ಅಸಹ್ಯ ಮೂಡಿಸುತ್ತದೆ. ನಿಲ್ದಾಣದ ಒಂದು ಬದಿಯಲ್ಲಿ ಮಾತ್ರ ಬಸ್ ನಿಲ್ಲಿಸಲು ಅವಕಾಶವಿದ್ದು, ಸುಗಮ ಸಂಚಾರಕ್ಕೆ ಕಷ್ಟವಾಗುತ್ತಿದೆ.

ಇದರಿಂದ ಬಸ್ ಚಾಲಕರು ಡಿವೈಡರ್‌ನ ಬಲ ಭಾಗದಿಂದಲೇ ನಿಲ್ದಾಣದ ಒಳಗೆ ಬರುತ್ತಾರೆ. ಚಿತ್ರದುರ್ಗ–ಶಿವಮೊಗ್ಗ, ದಾವಣಗೆರೆ–ಹೊಸದುರ್ಗ ಮಾರ್ಗದಲ್ಲಿ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಪಟ್ಟಣದಲ್ಲಿ ಹೊಸದಾಗಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.