ADVERTISEMENT

ಚಿತ್ರದುರ್ಗ: ರೈಲ್ವೆ ಮೇಲ್ಸೇತುವೆ ನಿರ್ಮಾಣ ಪ್ರಕ್ರಿಯೆ ಚುರುಕು

ಶಾಸಕ ಕೆ.ಸಿ.ವೀರೇಂದ್ರ ಮನವಿಗೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:00 IST
Last Updated 23 ಜನವರಿ 2026, 7:00 IST
ಚಿತ್ರದುರ್ಗ ನಗರದ ರೇಲ್ವೆ ನಿಲ್ದಾಣ
ಚಿತ್ರದುರ್ಗ ನಗರದ ರೇಲ್ವೆ ನಿಲ್ದಾಣ   

ಚಿತ್ರದುರ್ಗ: ಜಿಲ್ಲೆಯ ಬಹುಕಾಲದ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹಾಗೂ ಕೆಳಸೇತುವೆಗಳ ಅವ್ಯವಸ್ಥೆ ಸರಿಪಡಿಸುವಂತೆ ಶಾಸಕ ಕೆ.ಸಿ.ವೀರೇಂದ್ರ ಸಲ್ಲಿಸಿದ್ದ ಮನವಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಶಾಸಕರು ಪತ್ರದ ಮೂಲಕ ಸಲ್ಲಿಸಿದ್ದ ದೂರುಗಳಿಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ವಿವಿಧ ಯೋಜನೆಗಳ ಪ್ರಗತಿ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೂರು ಪ್ರಮುಖ ರೈಲ್ವೆ ಗೇಟ್‌ಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ತಿಳಿಸಿದ್ದಾರೆ.

‘ನಗರಕ್ಕೆ ಹೊಂದಿಕೊಂಡಿರುವ ಕವಾಡಿಗರಹಟ್ಟಿ ಬಳಿಯ ಅಮೃತಪುರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವಿನ ರೈಲ್ವೆ ಗೇಟ್‌ ಸಂಖ್ಯೆ 20ರಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಸಬ್‌ವೇ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇದರ ಸಾಮಾನ್ಯ ವಿನ್ಯಾಸ ನಕ್ಷೆ ಅನುಮೋದನೆಗೊಂಡಿದೆ. ಈ ಪ್ರದೇಶದಲ್ಲಿ ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ ಹೆದ್ದಾರಿ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ’ ಎಂದು ವಿ.ಸೋಮಣ್ಣ ಪತ್ರದಲ್ಲಿ ಉಲ್ಲೇಖಿದ್ದಾರೆ.

ADVERTISEMENT

ಚಿತ್ರದುರ್ಗ– ದಾವಣಗೆರೆ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದ ಹತ್ತಿರದ ರೈಲ್ವೆ ಗೇಟ್‌ ಸಂಖ್ಯೆ 22, ಚಿತ್ರದುರ್ಗ ಮತ್ತು ಬಾಲೇನಹಳ್ಳಿ ನಿಲ್ದಾಣಗಳ ನಡುವೆ, ವೆಚ್ಚ ಹಂಚಿಕೆ ಆಧಾರದ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಪ್ರಸ್ತುತ ನಕ್ಷೆ ಸಿದ್ಧಪಡಿಸಲಾಗುತ್ತಿದೆ. 

‘ನಗರದ ಭೀಮಸಮುದ್ರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್‌ ಸಂಖ್ಯೆ 15, ಅಮೃತಪುರ ಮತ್ತು ಚಿತ್ರದುರ್ಗ ನಡುವಿನ ಈ ಮೇಲ್ಸೇತುವೆಗೆ ನಕ್ಷೆ ಅನುಮೋದನೆಯಾಗಿದೆ. ವೆಚ್ಚ ಹಂಚಿಕೆ ಆಧಾರದಲ್ಲಿ ಈ ಯೋಜನೆ ಅನುಮೋದನೆಯಾಗಿತ್ತು. ಆದರೆ, ಪರಿಷ್ಕೃತ ಅಂದಾಜು ಪಟ್ಟಿಯಂತೆ ಪ್ರಸ್ತುತ ರೈಲ್ವೆ ಇಲಾಖೆಯಿಂದಲೇ ಶೇ 100ರಷ್ಟು ವೆಚ್ಚದ ಮೊತ್ತದ ಕಾಮಗಾರಿ ಮಂಜೂರಾಗಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

‘ಚಿತ್ರದುರ್ಗದ ಮೆದೇಹಳ್ಳಿ ಮತ್ತು ಗೋನೂರು ರಸ್ತೆ ರೈಲ್ವೆ ಕೆಳಸೇತುವೆಗಳಲ್ಲಿ ಕಳೆದ 6– 7 ವರ್ಷಗಳಿಂದ ಮಳೆ ನೀರಿನ ಸಮಸ್ಯೆಯಿಂದಾಗಿ ಬಹಳ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಬಹು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಸರಿಪಡಿಸಬೇಕು’ ಎಂದು ಪಪ್ಪಿಸ್‌ ಸ್ಟೂಡೆಂಟ್ ವಿಂಗ್ ಸಂಘಟನೆಯು ಸಚಿವರಿಗೆ ಮನವಿ ಮಾಡಿತ್ತು.

ಕೆಳಸೇತುವೆಗಳ ಸುಧಾರಣೆಗೆ ಕ್ರಮ

ಮಳೆಗಾಲದಲ್ಲಿ ಕೆಳಸೇತುವೆಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆ ಮನಗಂಡು ರೈಲ್ವೆ ಸಚಿವಾಲಯ ತುರ್ತು ಕ್ರಮ ಕೈಗೊಂಡಿದೆ. ಚಿತ್ರದುರ್ಗ– ತುರುವನೂರು ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ನಿರಂತರ ನಿಗಾ ವಹಿಸಲು ಮತ್ತು ಮೋಟಾರ್‌ ಪಂಪ್ ನಿರ್ವಹಿಸಲು 24 ಗಂಟೆಗಳ ಕಾಲ ವಾಚ್‌ಮನ್ ನಿಯೋಜಿಸಲಾಗಿದೆ. ಮಾನಂಗಿ ಗ್ರಾಮದ ರೈಲ್ವೆ ಕೆಳಸೇತುವೆಯ ಚರಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಸದ್ಯಕ್ಕೆ ಅಲ್ಲಿ ನೀರು ನಿಲ್ಲುವ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಕುರುಬರಹಳ್ಳಿ ರಟ್ಟಿಹಳ್ಳಿ ಮತ್ತು ಬೆಟ್ಟದ ನಾಗೇನಹಳ್ಳಿ ಭಾಗದ ರೈಲ್ವೆ ಕೆಳಸೇತುವೆಗಳಲ್ಲಿ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.