ಸಂಪೂರ್ಣ ಹಾಳಾಗಿರುವ ಚಿತ್ರದುರ್ಗದ ಕವಾಡಿಗರಹಟ್ಟಿ ರಸ್ತೆಯಲ್ಲೇ ಸಾಗುತ್ತಿರುವ ವಾಹನಗಳು
ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯ ರಸ್ತೆಗಳು ಪುನಃ ಹಾಳಾಗುತ್ತಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ತಿಂಗಳು ಜಿಲ್ಲೆಯಾದ್ಯಂತ ನಿರಂತರವಾಗಿ ಸೋನೆ ಮಳೆ ಸುರಿದ ಪರಿಣಾಮ ರಸ್ತೆಗಳ ಮುಖ ಕಳಚಿದೆ.
ಪ್ರತಿ ರಸ್ತೆ ನಿರ್ಮಾಣ ಮಾಡುವಾಗಲೂ ಅದಕ್ಕೆ ತನ್ನದೇ ಆದ ಮಾನದಂಡವಿರುತ್ತದೆ. ರಸ್ತೆಗಳಿಗೆ ಎಷ್ಟು ಇಂಚು ಡಾಂಬರ್, ಸಿಮೆಂಟ್ ಹಾಕಬೇಕು ಎಂಬ ನಿಯಮಾವಳಿ ಇದೆ. ಆದರೆ, ಗುತ್ತಿಗೆದಾರರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂಬುದನ್ನು ರಸ್ತೆಗಳು ಸಾಕ್ಷಿಕರಿಸುತ್ತಿವೆ.
ಜಿಲ್ಲೆಯು 11,720 ಕಿ.ಮೀ. ರಸ್ತೆಯನ್ನು ಹೊಂದಿದೆ. ಇದರಲ್ಲಿ 11,056 ಕಿ.ಮೀ. ಗ್ರಾಮೀಣ ಹಾಗೂ ಇತರ ರಸ್ತೆಗಳಿವೆ. ಉಳಿದದ್ದು ರಾಷ್ಟ್ರೀಯ, ರಾಜ್ಯ ಹೆದ್ದಾರಿ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯ ಕುಗ್ರಾಮಗಳು ಇಂದಿಗೂ ರಸ್ತೆ ಭಾಗ್ಯ ಕಂಡಿಲ್ಲ. ಮುಖ್ಯರಸ್ತೆಯಿಂದ ಕಾಲು ದಾರಿಯಲ್ಲಿ ಸಾಗುವ ಸ್ಥಿತಿ ಎದುರಾಗಿದೆ. ಕೆಲವೆಡೆ ಡಾಂಬರು ರಸ್ತೆಗಳು ಅಸ್ತಿಪಂಜರದಂತಾಗಿವೆ.
ನಗರದ ಹೊರವಲಯದ ಮುರುಘಾ ಮಠದಿಂದ ಹೊಳಲ್ಕೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಅಕ್ಷರಶಹ ಬಸ್, ಕಾರು, ಬೈಕ್ ಚಾಲಕರು, ಸವಾರರನ್ನು ಹೈರಾಣಗೊಳಿಸಿದೆ. ಮುರುಘಾಮಠದಿಂದ ಕವಾಡಿಗರಹಟ್ಟಿ ಸಮೀಪಿಸುತ್ತಿದ್ದಂತೆ ಹಳ್ಳಕೊಳ್ಳದ ದರ್ಶನವಾಗುತ್ತಿದೆ. ಅಲ್ಲಿಂದ ರೈಲ್ವೆ ಹಳಿ ದಾಟಿ, ಭೀಮಸಮುದ್ರ ರಸ್ತೆವರೆಗೂ ಸಂಪೂರ್ಣ ಗುಂಡಿಗಳಿಂದ ಆವೃತವಾಗಿದೆ. ಹೆದ್ದಾರಿಯಾಗಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಸಮಸ್ಯೆಗೆ ಕಾರಣವಾಗಿದೆ.
ಮನೆಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಯಿಂದ ಸಿಸಿ ರಸ್ತೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ನಗರದ ಬಹುತೇಕ ಕಡೆ ಉತ್ತಮ ರಸ್ತೆಗಳಿದ್ದವು. ಆದರೆ, ಇದೀಗ ಕಾಮಗಾರಿ ನೆಪದಲ್ಲಿ ಪುನಃ ಜೆಸಿಬಿಯಿಂದ ರಸ್ತೆಗಳನ್ನು ಕಿತ್ತು ಹಾಳು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತಕ್ಕೆ ಬರುವ ಮಾರ್ಗದ ರಸ್ತೆ ದೇವರಿಗೆ ಪ್ರೀತಿ ಎನ್ನುವಂತಿದೆ. ರಸ್ತೆ ವಿಸ್ತರಣೆ ಮಾಡದೆ ಡಿವೈಡರ್ ಹಾಕಿ ಪುನಃ ಅದನ್ನು ಕಿತ್ತು ಹಾಕಲಾಯಿತು. ಇದೀಗ ಕಿತ್ತು ಹಾಕಿದ ಜಾಗದಲ್ಲಿ ಕಬ್ಬಿಣದ ಸಲಾಕೆಗಳು ಎದ್ದಿವೆ. ಇದು ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದೆ.
ನಗರದ ಹೃದಯ ಭಾಗದಲ್ಲಿ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಲಕ್ಷ್ಮೀ ಬಜಾರ್, ವಾಸವಿ ಮಹಲ್, ಆನೆಬಾಗಿಲು, ಮೇದೆಹಳ್ಳಿ, ಎಸ್‌ಬಿಎಂ ವೃತ್ತ, ಧರ್ಮಶಾಲಾ ರಸ್ತೆ, ಪ್ರಸನ್ನ ಚಿತ್ರಮಂದಿರ, ಸಂತೆ ಮಾರುಕಟ್ಟೆಯ ಆಸುಪಾಸಿನ ಹಲವು ರಸ್ತೆಗಳು ದುಸ್ಥಿತಿ ತಲುಪಿವೆ.
ಭೀಮಸಮುದ್ರ – ಕಡ್ಲೇಗುದ್ದು, ಕೋಣನೂರು – ಚಿಕ್ಕೇನಹಳ್ಳಿ ಮೂಲಕ ಸಿರಿಗೆರೆ ತಲುಪಲು ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗುವಂತಾಗಿದೆ. ನೀಲಯ್ಯನಹಟ್ಟಿ – ದೊಡ್ಡಾಲಗಟ್ಟ – ಸಿರಿಗೆರೆ ರಸ್ತೆ ಈಗಾಗಲೇ ಎರಡು ಬಾರಿ ಅನುದಾನ ನುಂಗಿಹಾಕಿದೆ. ಕಾಮಗಾಗಾರಿ ತೀರ ಕಳಪೆಯಾಗಿದ್ದು, ಸ್ಥಳೀಯರು ಹೈರಾಣಾಗಿದೆ.
ಚಿಕ್ಕಜಾಜೂರು ಹೋಬಳಿಯ ವ್ಯಾಪ್ತಿಯಲ್ಲಿ ರಸ್ತೆಗಳು ನಿರ್ಮಾಣವಾಗಿದ್ದರು ಸಹ ಸ್ಥಳೀಯರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ವಾಹನ ಚಾಲಕರು ಗುಂಡಿಗಳಲ್ಲಿ ಜಾರಿ ಬಿದ್ದು, ಗಾಯ ಮಾಡಿಕೊಂಡಿರುವ ಘಟನೆಗಳೂ ಸಾಮಾನ್ಯವಾಗಿವೆ.
ಹೊಸದುರ್ಗ ತಾಲ್ಲೂಕಿನಲ್ಲಿ ಕೆಲ ಮುಖ್ಯ ರಸ್ತೆಗಳು ಕಚ್ಚಾ ರಸ್ತೆಯಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ. ಹೊಸದುರ್ಗ ರೋಡ್ ಸೇರಿದಂತೆ ಹಲವು ಹಳ್ಳಿಗಳ ಸಂಪರ್ಕಿಸುವ ರಸ್ತೆ ದುರಸ್ತಿಗೆ ಬಂದು ವರ್ಷಗಳೇ ಕಳೆದಿವೆ.
ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ನಿರ್ವಹಣೆ ಹಾಗೂ ನಿರ್ಲಕ್ಷ್ಯಕ್ಕೆ ಜಿಲ್ಲೆಯ ನಗರ, ಗ್ರಾಮೀಣ ರಸ್ತೆಗಳು ತುತ್ತಾಗುತ್ತಿರುವುದು ಬೇಸರ ಸಂಗತಿ.
ನಗರದಲ್ಲಿ ಕೆಲ ರಸ್ತೆಗಳು ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು ಪರಿಶೀಲನೆ ನಡೆಸಿ ಹಂತ ಹಂತವಾಗಿ ಕ್ರಮವಹಿಸಲಾಗುತ್ತದೆ. ಜತೆಗೆ ಕವಾಡಿಗರಹಟ್ಟಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.ಎಸ್.ಲಕ್ಷ್ಮೀ ಪೌರಾಯುಕ್ತೆ ಚಿತ್ರದುರ್ಗ
ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಆಟೋಗಳನ್ನು ಓಡಿಸಲು ಹರಸಾಹಸ ಪಡಬೇಕಿದೆ. ಮಳೆಗಾಲ ಬಂತೆಂದರೆ ಜೀವಭಯದಲ್ಲಿ ಆಟೋ ಚಾಲನೆ ಮಾಡಬೇಕಿದೆ.ಟಿ.ರಾಘವೇಂದ್ರ ಆಟೋ ಚಾಲಕ ನಾಯಕನಹಟ್ಟಿ
ನಾಯಕನಹಟ್ಟಿಯ ಚಳ್ಳಕೆರೆ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್ ಎದುರು ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಸೃಷ್ಠಿಯಾಗುತ್ತಿವೆ. ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಎಚ್ಚೇತ್ತುಕೊಳ್ಳಬೇಕು.ಟಿ.ರಮೇಶ ಗ್ರಾಮಸ್ಥ
ರಸ್ತೆ ತುಂಬ ತಗ್ಗು–ಗುಂಡಿಗಳದ್ದೇ ಕಾರುಬಾರು:
ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ–45ರ ತುಂಬೆಲ್ಲಾ ತಗ್ಗುಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಾಯಕನಹಟ್ಟಿ ಪಟ್ಟಣದಲ್ಲಿ ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ದೇವಾಲಯ ಹಾಗೂ ಸಮೀಪದಲ್ಲೇ ಕುದಾಪುರದ ಬಳಿ ನಿರ್ಮಾಣವಾಗಿವ ವಿಜ್ಞಾನ ಸಂಸ್ಥೆಗಳು ಪಟ್ಟಣ ಪಂಚಾಯಿತಿ ಸೇರಿದಂತೆ 8 ವರ್ಷದಲ್ಲಿ ವೇಗವಾಗಿ ಬೆಳೆಯತ್ತಿರುವ ಪಟ್ಟಣಗಳ ಸಾಲಿನಲ್ಲಿ ಕಂಡುಬರುತ್ತಿದೆ. ಪಟ್ಟಣವು ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕವಾಗಿ ಪ್ರಸಿದ್ಧಿಯಾಗಿದೆ. ಜೊತೆಗೆ ಸುತ್ತಮುತ್ತಲ 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ–45ರಲ್ಲಿ ಚಳ್ಳಕೆರೆ ಚಿತ್ರದುರ್ಗ ಬಳ್ಳಾರಿ ರಾಯದುರ್ಗ ಕಲ್ಯಾಣದುರ್ಗ ದಾವಣಗೆರೆ ಹೊಸಪೇಟೆ ಮಾರ್ಗವನ್ನು ಸಂಪರ್ಕಿಸುತ್ತದೆ. ಇದೇ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಒಂದು ತಿಂಗಳಿನಿಂದ ಮುಖ್ಯ ರಸ್ತೆಯಲ್ಲಿ ಒಂದು ಅಡಿ ಆಳದಷ್ಟು ತಗ್ಗುಗುಂಡಿಗಳು ಸೃಷ್ಠಿಯಾಗಿ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರವಾಹನ ಲಘುವಾಹನ ಲಾರಿ ಟ್ರಕ್ಕುಗಳು ಟ್ರಾಕ್ಟರ್‌ಗಳು ಸೇರಿದಂತೆ ಭಾರಿ ವಾಹನಗಳು ಬಸ್‍ಗಳು ತಗ್ಗುಗುಂಡಿಗಳಲ್ಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಅಂಚೆ ಕಚೇರಿಗೆ ತೆರಳುವ ಮಾರ್ಗದಲ್ಲಿ ಅಂಬೇಡ್ಕರ್ ವೃತ್ತದಿಂದ ನಾಗರಕಟ್ಟೆ ಮಾರ್ಗಕ್ಕೆ ತೆರಳುವ ಮಾರ್ಗಮಧ್ಯೆದಲ್ಲೂ ಸಹ ರಸ್ತೆಮಧ್ಯೆ ತಗ್ಗುಗುಂಡಿಗಳು ಕಾಣಿಸಿಕೊಂಡಿವೆ. ವಾಲ್ಮೀಕಿ ವೃತ್ತದಲ್ಲಿ ಯಾವಾಗಲೂ ಜನದಟ್ಟಣೆ ಹೆಚ್ಚಾಗಿರುತ್ತದೆ. ಸಮೀಪದಲ್ಲೇ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಗಳಿವೆ. ಶಾಲಾ ಮಕ್ಕಳು ಶಾಲೆಗಳಿಗೆ ತೆರಳಲು ಇದೇ ಮಾರ್ಗದಲ್ಲಿ ಬಂದುಹೋಗುತ್ತಾರೆ. ಈ ವೇಳೆ ರಸ್ತೆಯಲ್ಲಿರುವ ತಗ್ಗುಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ರಸ್ತೆಯ ಪಕ್ಕಕ್ಕೆ ಬಂದು ತೆರಳುವುದರಿಂದ ಶಾಲಾ ಮಕ್ಕಳು ಬಸ್‍ಗಳಿಗಾಗಿ ಕಾಯುವ ಮಹಿಳೆಯರು ಸಾರ್ವಜನಿಕರು ಜೀವಭಯದಲ್ಲಿರುವ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ತಗ್ಗುಗುಂಡಿಗಳನ್ನು ತಪ್ಪಿಸುವ ಸಲುವಾಗಿ ಬೈಕ್ ಮತ್ತು ಲಘುವಾಹನ ಸವಾರರು ರಸ್ತೆಯ ಪಕ್ಕಕ್ಕೆ ಸಂಚರಿಸಿದರೆ ಮುಂದೆ ಬರುವ ಮತ್ತು ಹಿಂದೆ ಬರುವ ವಾಹನಗಳು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆ. ಒಂದು ತಿಂಗಳಿನಿಂದ ನಿತ್ಯಾ ಒಬ್ಬರಲ್ಲಾ ಒಬ್ಬರು ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡು ತೆರಳುತ್ತಿದ್ದಾರೆ. ಹಾಗಾಗಿ ಪಟ್ಟಣದ ರಸ್ತೆಯಲ್ಲಿ ಜೀವಭಯದಲ್ಲಿ ವಾಹನ ಸಂಚಾರವನ್ನು ಕೈಗೊಳ್ಳುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಹಲವು ತಗ್ಗು ಗುಂಡಿಗಳು ಬಿದ್ದಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೇತ್ತುಕೊಳ್ಳುತ್ತಿಲ್ಲ. ತಗ್ಗುಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.