ADVERTISEMENT

ಚಿತ್ರದುರ್ಗ: ಸಂಚಾರಕ್ಕೆ ತೊಡಕಾದ ‘ನಿರ್ಲಕ್ಷ್ಯ’ದ ಹಾದಿ

ಗ್ರಾಮೀಣ ಭಾಗದ ರಸ್ತೆಗಳ ದುಃಸ್ಥಿತಿ– ವಾಹನ ಸಂಚಾರಕ್ಕೆ ಅಡಚಣೆ

ಕೆ.ಪಿ.ಓಂಕಾರಮೂರ್ತಿ
ಶಿವಗಂಗಾ ಚಿತ್ತಯ್ಯ
Published 24 ಮಾರ್ಚ್ 2025, 8:23 IST
Last Updated 24 ಮಾರ್ಚ್ 2025, 8:23 IST
ಚಿಕ್ಕಜಾಜೂರು ಸಮೀಪದ ಕಾಶೀಪುರದ ರಸ್ತೆಯ ಸ್ಥಿತಿ
ಚಿಕ್ಕಜಾಜೂರು ಸಮೀಪದ ಕಾಶೀಪುರದ ರಸ್ತೆಯ ಸ್ಥಿತಿ   

ಚಿತ್ರದುರ್ಗ/ಚಳ್ಳಕೆರೆ: ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ನಿರ್ವಹಣೆ ಹಾಗೂ ನಿರ್ಲಕ್ಷ್ಯಕ್ಕೆ ಜಿಲ್ಲೆಯ ಗ್ರಾಮೀಣ ರಸ್ತೆಗಳು ತುತ್ತಾಗಿವೆ. ಈಚಿನ ವರ್ಷಗಳಲ್ಲಿ ಜಿಲ್ಲೆಯ ಬಹುತೇಕ ರಸ್ತೆಗಳು ಡಾಂಬರು ಕಂಡಿವೆ. ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ಹಣ ವ್ಯಯಿಸಿ ನಿರ್ಮಾಣವಾಗುವ ರಸ್ತೆಗಳ ನೈಜ ಚಿತ್ರಣ ಮಳೆಗಾಲದಲ್ಲಿ ಅನಾವರಣವಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯು 11,720 ಕಿ.ಮೀ. ಉದ್ದದ ರಸ್ತೆಯನ್ನು ಹೊಂದಿದೆ. ಇದರಲ್ಲಿ 11,056 ಕಿ.ಮೀ. ಗ್ರಾಮೀಣ ಹಾಗೂ ಇತರ ರಸ್ತೆಗಳಿವೆ. ಉಳಿದದ್ದು ರಾಷ್ಟ್ರೀಯ, ರಾಜ್ಯ ಹೆದ್ದಾರಿ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯ ಕುಗ್ರಾಮಗಳು ಇಂದಿಗೂ ರಸ್ತೆ ಭಾಗ್ಯ ಕಂಡಿಲ್ಲ. ಮುಖ್ಯರಸ್ತೆಯಿಂದ ಕಾಲು ದಾರಿಯಲ್ಲಿ ಸಾಗುವ ಸ್ಥಿತಿ ಎದುರಾಗಿದೆ. ಕೆಲ ಕಡೆ ಡಾಂಬರು ರಸ್ತೆಗಳು ಅಸ್ತಿಪಂಜರದಂತಾಗಿವೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಅಡಿ ನಿರ್ಮಿಸಿದ ರಸ್ತೆಗಳು ಕಳಪೆ ಕಾಮಗಾರಿಯಿಂದ ಕೂಡಿವೆ ಎಂಬ ಆರೋಪ ಹೇಳಿ ಬಂದಿವೆ. ಮೊದಲೇ ಇದ್ದ ಡಾಂಬರು ರಸ್ತೆಯನ್ನು ಕಿತ್ತು, ಅದರ ಅವಶೇಷಗಳನ್ನೇ ಬಳಸಿಕೊಂಡು ಅತ್ಯಂತ ಕಳಪೆ ಕಾಮಗಾರಿ ನಡೆಸಿ ರಸ್ತೆ ನಿರ್ಮಿಸುವ ಪರಿಪಾಟ ಹೆಚ್ಚಾಗಿದೆ.

ADVERTISEMENT

ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಕುಡಿಯುವ ನೀರು ಮತ್ತು ತುಂಗಭದ್ರಾ ಹಿನ್ನೀರು ಯೋಜನೆ ಪೈಪ್‌ಲೈನ್ ಕಾಮಗಾರಿಯ ಪರಿಣಾಮ, ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮದ ಮುಖ್ಯ ಹಾಗೂ ಒಳರಸ್ತೆಗಳು ದುಃಸ್ಥಿತಿ ತಲುಪಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ನಿತ್ಯ ಅಡಚಣೆಯಾಗುತ್ತಿದೆ.

ಯೋಜನೆಯಡಿ ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ, ನಳ ಅಳವಡಿಕೆ ಪೈಪ್‌ಲೈನ್‌ ಸಲುವಾಗಿ ಮುಖ್ಯರಸ್ತೆ ಮತ್ತು ಒಳರಸ್ತೆಗಳ ಡಾಂಬರ್ ಹಾಗೂ ಕಾಂಕ್ರೀಟ್‌ ಅನ್ನು ಎಲ್ಲೆಂದರಲ್ಲೆ ಅಗೆದು ಹಾಳು ಮಾಡಲಾಗಿದೆ. ಅಗೆದ ಜಾಗ ಮುಚ್ಚದಿರುವ ಕಾರಣ ರಸ್ತೆಯಲ್ಲಿ ತಗ್ಗು-ಗುಂಡಿ ನಿರ್ಮಾಣವಾಗಿವೆ. ದೂರುಗಳು ಹೆಚ್ಚಾದ ಬಳಿಕ ನಡೆಸುವ ಗುಂಡಿ ಮುಚ್ಚುವ ಕಾರ್ಯವೂ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಚಳ್ಳಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದ ಮೂಲಕ ಹಾದು ಹೋಗುವ ಚನ್ನಮ್ಮನಾಗತಿಹಳ್ಳಿ, ಮತ್ಸಮುದ್ರ, ಹಾಲಗೊಂಡನಹಳ್ಳಿ, ಕ್ಯಾತಗೊಂಡನಹಳ್ಳಿ ಮತ್ತು ಗಡಿ ಭಾಗದ ಜಾಜೂರು, ಪಾತಪ್ಪನಗುಡಿ, ಪಗಡಲಬಂಡೆ, ಕೊರ್ಲಕುಂಟೆ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಚಳ್ಳಕೆರೆ ನಗರದಿಂದ ಹಾದುಹೋಗುವ ಸೋಮಗುದ್ದು, ಚಿಕ್ಕಮಧುರೆ, ಚಿಗತನಹಳ್ಳಿ, ಗಂಜಿಗುಂಟೆ, ಕಮ್ಮತ್ ಮರಿಕುಂಟೆ ಮುಂತಾದ ಗ್ರಾಮೀಣ ರಸ್ತೆಗಳು ನಿರ್ವಹಣೆ ಕೊರತೆಯಿಂದಾಗಿ ದುಃಸ್ಥಿತಿಯಲ್ಲಿವೆ.

ಹಿರೇಮಧುರೆ ಗ್ರಾಮದ ಕೆರೆ ಮುಂದೆ ಸೊಂಡೆಕೆರೆ ಮಾರ್ಗದ 70-80 ಮೀಟರ್‌ನಷ್ಟು ಡಾಂಬರ್‌ ರಸ್ತೆಯನ್ನು ಕಿತ್ತು ಹಾಕಿ ನಡೆಸುತ್ತಿರುವ ಸೇತುವೆ ಕಾಮಗಾರಿ ಸ್ಥಗಿತಗೊಂಡು 2-3 ವರ್ಷಗಳೇ ಕಳೆದಿವೆ. ಅಪೂರ್ಣ ಕಾಮಗಾರಿ ಮತ್ತು ದೊಡ್ಡ ತಗ್ಗು ಗುಂಡಿಗಳು ನಿರ್ಮಾಣಗೊಂಡಿರುವ ಪರಿಣಾಮ ಈ ಮಾರ್ಗದಲ್ಲಿ ಜೋಡೆತ್ತಿನಗಾಡಿ ಓಡಾಡುವುದೂ ತ್ರಾಸದಾಯಕವಾಗಿದೆ.

‘ಡಾಂಬರ್ ಹಾಕಿ 15 ರಿಂದ 20 ವರ್ಷ ಕಳೆದಿದ್ದು, ನಿರ್ವಹಣೆ ಕೊರತೆಯಿಂದ ರಸ್ತೆ ಹಾಳಾಗಿವೆ. ಹಿರೇಮಧುರೆ ಬಳಿ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಚಿಕ್ಕಮಧುರೆ ನಾಗರಾಜ.

ಡಾಂಬರೀಕರಣಕ್ಕೆ ಅನುದಾನದ ಕೊರತೆ ಇರುವುದರಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕುರುಡಿಹಳ್ಳಿ ಲಂಬಾಣಿಹಟ್ಟಿಯಿಂದ ಬಂಡೆಹಟ್ಟಿ, ಗಂಜಿಗುಂಟೆಯಿಂದ ಚಿಕ್ಕಮಧುರೆ, ಪುರ್ಲೆಹಳ್ಳಿ ಕ್ರಾಸ್‌ನಿಂದ ಚೌಳೂರು ಬ್ಯಾರೇಜ್‌, ಬೆಳಗೆರೆ ರಂಗನಾಥಪುರದಿಂದ ಕಲಮರಹಳ್ಳಿ, ಕುದಾಪುರ ಡಿಆರ್‌ಡಿಒ ಸಂಸ್ಥೆಯಿಂದ ಗಿಡ್ಡಾಪುರ, ಎನ್‌.ದೇವರಹಳ್ಳಿವರೆಗೆ, ಗೌರೀಪುರ, ಟಿ.ಎನ್‌.ಕೋಟೆಯಿಂದ ಮೇಲುಕೋಟೆ, ಕೋನಿಗರಹಳ್ಳಿ, ಸಾಣಿಕೆರೆಯಿಂದ ಗೋಪನಹಳ್ಳಿ, ಸಿದ್ದಾಪುರದಿಂದ ಕೆಂಚವೀರನಹಳ್ಳಿ ಮುಂತಾದ ಗ್ರಾಮೀಣ ಮಾರ್ಗದ ರಸ್ತೆಗಳು ಮಣ್ಣಿನಿಂದ ಕೂಡಿವೆ.

‘ನಗರ ಪ್ರದೇಶದಲ್ಲಿ ಗುಣಮಟ್ಟ ಹಾಗೂ ವಿಶಾಲ ರಸ್ತೆ ಇವೆ. ಆದರೆ ಗ್ರಾಮೀಣ ಭಾಗದ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿವೆ. ಮಳೆಗಾಲ ಆರಂಭವಾಗುವುದರೊಳಗೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ ಚಿಕ್ಕೇನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ.

________________

ಕುಡಿಯುವ ನೀರಿನ ಕಾಮಗಾರಿ ಉದ್ದೇಶಕ್ಕೆ ಅಗೆದ ಕೆಲವು ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಇನ್ನುಳಿದ ರಸ್ತೆ ಕಾಮಗಾರಿಯನ್ನು ಮಳೆಗಾಲದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಮಸ್ಯೆ ಗಮನಕ್ಕೆ ಬಂದ ತಕ್ಷಣ ನಿವಾರಣೆಗೆ ಕ್ರಮ ವಹಿಸಲಾಗುತ್ತದೆ.

–ವಿಜಯ ಭಾಸ್ಕರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ

________________


ಗ್ರಾಮೀಣ ಭಾಗದ ಮುಖ್ಯ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಿದ ಗ್ರಾಮದ ಒಳ ರಸ್ತೆಗಳ ದುರಸ್ತಿ ಕೆಲಸ ಶೇ 80 ರಷ್ಟು ಮಾಡಿದ್ದೇವೆ. ಉಳಿದ ಕಾರ್ಯ ಶೀಘ್ರ ಪೂರ್ಣಗೊಳಿಸುತ್ತೇವೆ.

– ತಿಪ್ಪೇಸ್ವಾಮಿ ಸಹಾಯಕ ಎಂಜಿನಿಯರ್‌ ಗ್ರಾಮೀಣ ನೀರು ಸರಬರಾಜು ಇಲಾಖೆ

________________


ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ಸುಧಾರಿಸಿದೆ. ಆದರೆ ಕುಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಬದಲಾಗಿಲ್ಲ. ರೈಲ್ವೆ ಅಂಡರ್‌ಪಾಸ್‌ಗಳಿಂದ ಕೆಲವೆಡೆ ತೀವ್ರ ಸಮಸ್ಯೆಯಾಗಿದೆ.

– ಅಶೋಕ್‌ ಬೆಳಗಟ್ಟ ವಕೀಲರು

________________


ಅರೇಹಳ್ಳಿಯಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಜಾತ್ರೆ ಇರುವುದರಿಂದ ಸಾವಿರಾರು ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹಾಗಾಗಿ ಶೀಘ್ರದಲ್ಲೇ ರಸ್ತೆ ನಿರ್ಮಾಣ ಮಾಡಬೇಕು. ಈ ಮೂಲಕ ಜನರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು.

– ಎಚ್‌.ರಘು ಅರೇಹಳ್ಳಿ

ಗ್ರಾಮೀಣ ರಸ್ತೆಗಳಿಗೆ ಬೇಕಿದೆ ಡಾಂಬರು ಭಾಗ್ಯ ! ‌

–ವಿ.ಧನಂಜಯ

ನಾಯಕನಹಟ್ಟಿ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಳಕು ಮತ್ತು ನಾಯಕನಹಟ್ಟಿ ಹೋಬಳಿಗಳಲ್ಲಿರುವ ಹಲವು ಗ್ರಾಮೀಣ ರಸ್ತೆಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ತಗ್ಗು ಗುಂಡಿಗಳು ಉಂಟಾಗಿ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ನಾಯಕನಹಟ್ಟಿ ಮತ್ತು ತಳಕು ಹೋಬಳಿ ಅತ್ಯಂತ ಹಿಂದುಳಿದ ಪ್ರದೇಶಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿವೆ.

ನಾಯಕನಹಟ್ಟಿ ಹೋಬಳಿಯ ಗಡಿಗ್ರಾಮದಿಂದ ಜಿಲ್ಲಾ ಕೇಂದ್ರ 60ರಿಂದ 70ಕಿ.ಮೀ ಹಾಗೂ ತಳಕು ಹೋಬಳಿಯ ಗಡಿಗ್ರಾಮದಿಂದ 75 ರಿಂದ 80 ಕಿ.ಮೀ. ಕ್ರಮಿಸಬೇಕಾಗಿದೆ. ಈ ಎರಡೂ ಹೋಬಳಿಗಳಿಂದ ತಾಲ್ಲೂಕು ಕೇಂದ್ರವಾದ ಚಳ್ಳಕೆರೆಯನ್ನು ಸಂಪರ್ಕ ಸಾಧಿಸಲು 40ರಿಂದ 45 ಕಿ.ಮೀ ಪಯಣಿಸಬೇಕಿದೆ. ತಮ್ಮ ಗ್ರಾಮದಿಂದ ಮತ್ತೊಂದು ಗ್ರಾಮಕ್ಕಾಗಲಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಕ್ಕಾಗಲಿ ಶಾಲಾ ಕಾಲೇಜು ಆಸ್ಪತ್ರೆ ಮಾರುಕಟ್ಟೆ ಸರ್ಕಾರಿ ಕಚೇರಿ ಸೇರಿದಂತೆ ವಿವಿಧ ಕಾರಣಗಳಿಗೆ ಸಾರ್ವಜನಿಕರು ತೆರಳಬೇಕಾದರೆ ಅವರಿಗೆ ಎದುರಾಗುವ ಮೊದಲ ಸಮಸ್ಯೆಯೇ ತಗ್ಗು ಗುಂಡಿಗಳಿಂದ ಕೂಡಿದ ಹದಗೆಟ್ಟ ಹಾಗೂ ಡಾಂಬರು ಕಾಣದ ಮಣ್ಣಿನ ರಸ್ತೆಗಳು.

ಎನ್‌.ಉಪ್ಪಾರಹಟ್ಟಿಯಿಂದ ನೆಲಗೇತನಹಟ್ಟಿ ಗ್ರಾಮ ಸಂಪರ್ಕಿಸುವ ರಸ್ತೆ ಮಣ್ಣಿನಿಂದ ಕೂಡಿದ್ದು ಇದುವರೆಗೂ ಡಾಂಬರು ಕಂಡಿಲ್ಲ. ನಿತ್ಯ ನೆಲಗೇತನಹಟ್ಟಿ ಗ್ರಾಮಪಂಚಾಯಿತಿಗೆ ಒಂದಿಲ್ಲೊಂದು ಕೆಲಸದ ನಿಮಿತ್ತ ಸಾರ್ವಜನಿಕರು ಹೋಗುತ್ತಾರೆ. ಹಾಗೇ ಮಲ್ಲೂರಹಳ್ಳಿಯಿಂದ ಬಲ್ಲನಾಯಕನಹಟ್ಟಿ ದಾಸರಮುತ್ತೇನಹಳ್ಳಿ ಓಬಯ್ಯನಹಟ್ಟಿಯ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಮಲ್ಲೂರಹಳ್ಳಿಯಿಂದ ಭರಮಸಾಗರ ಗುಡ್ಡದಕಪಿಲೆ ಗ್ರಾಮಗಳಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ವರ್ಷವಿಡೀ ಹದಗೆಟ್ಟ ರಸ್ತೆಗಳಲ್ಲಿಯೇ ಪ್ರಯಾಣಿಸುವ ದುಃಸ್ಥಿತಿಯಿದೆ.

ಮಲ್ಲೂರಹಳ್ಳಿಯಿಂದ ಹಿರೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಮಣ್ಣಿನಿಂದ ಕೂಡಿದ್ದು ಡಾಂಬರ್ ವ್ಯವಸ್ಥೆಯೇ ಇಲ್ಲವಾಗಿದೆ. ಈ ರಸ್ತೆಯು ಜಗಳೂರು ತಾಲ್ಲೂಕಿನ ಕಮಂಡಲಗೊಂದಿ ಮಲ್ಲೂರಹಟ್ಟಿ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಮಲ್ಲೂರಹಳ್ಳಿ ಹಿರೇಹಳ್ಳಿ ಮಾರ್ಗವಾಗಿ ಗೌರಸಮುದ್ರ ಗ್ರಾಮವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ಹಾದಿಯು ಸೀಮೆಜಾಲಿ ಕಳ್ಳೆ ಮುಳ್ಳು ತಗ್ಗುಗುಂಡಿಗಳಿಂದ ಕೂಡಿದ್ದು ಗೌರಸಮುದ್ರಕ್ಕೆ ತೆರಳಲು ಅನ್ಯಮಾರ್ಗವಾಗಿ ಹೆಚ್ಚುವರಿ 10 ರಿಂದ 20 ಕಿ.ಮೀ ದೂರ ಕ್ರಮಿಸಬೇಕಿದೆ.

ತಳಕು ಹೋಬಳಿಯ ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಾದಿಹಳ್ಳಿ ದೊಡ್ಡಬಾದಿಹಳ್ಳಿ ಓಬಳಾಪುರ ದಾಸರ್ಲಹಳ್ಳಿ ಕೋಡಿಹಟ್ಟಿ ಪಾತಪ್ಪನಗುಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಗ್ಗು ಗುಂಡಿಗಳದ್ದೇ ಕಾರುಬಾರು ಎಂಬಂತಾಗಿದೆ. ಕಾಟಂದೇವರಕೋಟೆಯಿಂದ ದೊಣೆಹಳ್ಳಿ ರಸ್ತೆ ಬಸಾಪುರ ರಸ್ತೆ ತಪ್ಪಗೊಂಡನಹಳ್ಳಿ ಕಸವಿಗೊಂಡನಹಳ್ಳಿ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ತುರ್ತು ಸೇವೆಯ ಆಂಬುಲೆನ್ಸ್‌ಗಳು ತಳಕು ಹೋಬಳಿಯ ಗಡಿಭಾಗದ ಹಳ್ಳಿಗಳಿಗೆ ಸಕಾಲದಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದರೂ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಉತ್ತಮ ರಸ್ತೆಗಳಿಗೆ ಟಿಪ್ಪರ್‌ ಕಂಟಕ

–ಜೆ.ತಿಮ್ಮಪ್ಪ

ಚಿಕ್ಕಜಾಜೂರು: ಹೋಬಳಿ ವ್ಯಾಪ್ತಿಯಲ್ಲಿ ರಸ್ತೆಗಳು ನಿರ್ಮಾಣವಾಗಿದ್ದರೂ ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ರೈತರ ತೋಟಗಳಿಗೆ ನಿರಂತರವಾಗಿ ಕೆರೆ ಮಣ್ಣು ಸಾಗಿಸುತ್ತಿರುವುದು ಮತ್ತು ಪೈಪ್‌ಲೈನ್‌ ಅಳವಡಿಸಲು ತೆಗೆಯುತ್ತಿರುವ ಗುಂಡಿಗಳಿಂದ ರಸ್ತೆಗಳು ಸಮಸ್ಯೆ ಎದುರಿಸುತ್ತಿವೆ. ಬೇಸಿಗೆ ಅರಂಭವಾಗುತ್ತಿದ್ದಂತೆ ಹೋಬಳಿಯ ಅನೇಕ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು ರೈತರು ತಮ್ಮ ಅಡಕೆ ಹಾಗೂ ತೆಂಗಿನ ತೋಟಗಳಿಗೆ ಮತ್ತು ಜಮೀನುಗಳಲ್ಲಿನ ತಗ್ಗು ಪ್ರದೇಶಗಳಿಗೆ ಕೆರೆ ಮಣ್ಣು ಹಾಕಿಸುತ್ತಿದ್ದಾರೆ.

ಟ್ರ್ಯಾಕ್ಟರ್‌ ಮತ್ತು ಟಿಪ್ಪರ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತುಂಬಿಸಿಕೊಂಡು ಹೋಗುತ್ತಿರುವುದು ಗ್ರಾಮೀಣ ಭಾಗದ ರಸ್ತೆಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.  ಸಮೀಪದ ಕಾಶೀಪುರ ಗ್ರಾಮದಿಂದ ಲಿಂಗದಹಳ್ಳಿಗೆ ಹೋಗುವ ಮಾರ್ಗದಲ್ಲಿ ಟ್ರ್ಯಾಕ್ಟರ್‌ ಹಾಗೂ ಟಿಪ್ಪರ್‌ಗಳಲ್ಲಿ ನಿತ್ಯ ಚನ್ನಗಿರಿ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಕೆರೆ ಮಣ್ಣನ್ನು ಹೇರಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಡಾಂಬರ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲದೆ ರಸ್ತೆಯು ದೂಳಿನಿಂದ ತುಂಬಿಕೊಂಡಿದ್ದು ದ್ವಿಚಕ್ರವಾಹನ ಚಾಲಕರು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

‘ವಾಹನ ಚಾಲಕರು ಗುಂಡಿಗಳಲ್ಲಿ ಜಾರಿ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳೂ ಸಾಮಾನ್ಯವಾಗಿವೆ. ಸಮೀಪದ ಲಿಂಗದಹಳ್ಳಿ ಟಿ. ತಿರುಮಲಾಪುರ ಕಾಶೀಪುರ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಕಾಶೀಪುರದ ಗ್ರಾಮ ಪಂಚಾಯಿತಿ ಸದಸ್ಯ ಜಿ.ಧನಂಜಯ.

ಅಸ್ತಿತ್ವ ಕಳೆದುಕೊಂಡ ಮುಖ್ಯ ರಸ್ತೆಗಳು

–ಎಚ್‌.ಡಿ.ಸಂತೋಷ್‌

ಹೊಸದುರ್ಗ: ತಾಲ್ಲೂಕಿನ ಕೆಲ ಹಳ್ಳಿಗಳ ಮುಖ್ಯ ರಸ್ತೆಗಳು ಕಚ್ಚಾ ರಸ್ತೆಯಂತಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ. ತಾಲ್ಲೂಕಿನ ಕೊಂಡಾಪುರ ಶ್ರೀರಂಗಪುರ ಅರೇಹಳ್ಳಿ ಮತ್ತೋಡು ಸೇರಿದಂತೆ ಹಲವು ಹಳ್ಳಿಗಳಲ್ಲಿ ಮುಖ್ಯ ರಸ್ತೆಗಳು ಅಸ್ತಿತ್ವ ಕಳೆದುಕೊಂಡಿವೆ. ಹೊಸದುರ್ಗ ರೋಡ್‌ ಸೇರಿದಂತೆ ಹಲವು ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಯು ಕೆಲ ವರ್ಷಗಳಿಂದ ದುರಸ್ತಿಗೆ  ಕಾಯುತ್ತಿದೆ.

ನಿತ್ಯ ಶಾಲಾ ಕಾಲೇಜು ಕಚೇರಿಗೆ ಹೋಗುವವರು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ತಾಲ್ಲೂಕಿನ ಮತ್ತೋಡು ಹೋಬಳಿಯ ಅರೆಹಳ್ಳಿ ರಸ್ತೆ ಸುಮಾರು 10 ರಿಂದ 15 ವರ್ಷ ಹಳೆಯದಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಇಲ್ಲಿ ದೂಳು ಕಸ ಹಾಗೂ ಗುಂಡಿಗಳು ಹೆಚ್ಚಾಗಿದ್ದು ವಾಹನ ಸವಾರರು ಜೀವ ಬಿಗಿ ಹಿಡಿದುಕೊಂಡು ಓಡಾಡಬೇಕು ಎಂಬುದು ಅರೇಹಳ್ಳಿ ಗ್ರಾಮಸ್ಥರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.