ADVERTISEMENT

ಚಿತ್ರದುರ್ಗ: ಸರ್ಕಾರಕ್ಕೆ ಎಸ್. ನಿಜಲಿಂಗಪ್ಪ ನಿವಾಸ– ನೋಂದಣಿ ಪ್ರಕ್ರಿಯೆ ಪೂರ್ಣ

ಸರ್ಕಾರದಿಂದ ₹ 4.18 ಕೋಟಿಗೆ ಖರೀದಿ; ರಾಜ್ಯಪಾಲರ ಹೆಸರಿಗೆ ನೋಂದಣಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 1:21 IST
Last Updated 13 ಡಿಸೆಂಬರ್ 2024, 1:21 IST
ಚಿತ್ರದುರ್ಗ ತಹಶೀಲ್ದಾರ್‌ ನಾಗವೇಣಿ ಅವರಿಗೆ ಎಸ್‌.ನಿಜಲಿಂಗಪ್ಪ ಅವರ ಮನೆಯ ದಾಖಲೆ ಪತ್ರಗಳನ್ನು ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ ಶಂಕರ್‌ ಗುರುವಾರ ಹಸ್ತಾಂತರಿಸಿದರು
ಚಿತ್ರದುರ್ಗ ತಹಶೀಲ್ದಾರ್‌ ನಾಗವೇಣಿ ಅವರಿಗೆ ಎಸ್‌.ನಿಜಲಿಂಗಪ್ಪ ಅವರ ಮನೆಯ ದಾಖಲೆ ಪತ್ರಗಳನ್ನು ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ ಶಂಕರ್‌ ಗುರುವಾರ ಹಸ್ತಾಂತರಿಸಿದರು   

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ಹೆಸರಲ್ಲಿ ಖರೀದಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿತು. ವಿ.ಪಿ. ಬಡಾವಣೆಯಲ್ಲಿರುವ ಮನೆಯನ್ನು ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ ಶಂಕರ್‌ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿದರು.

ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದಲೇ ಖರೀದಿಸುವ ಪ್ರಯತ್ನಗಳು 18 ವರ್ಷಗಳಿಂದ ಪ್ರಗತಿಯಲ್ಲಿದ್ದವು. ಆದರೆ, ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. 2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿವಾಸ ಖರೀದಿಸುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿತ್ತು.

117 X 130 ಅಡಿ ವಿಸ್ತೀರ್ಣದ ನಿವೇಶನ, ಮನೆ ಖರೀದಿಗೆ ₹ 4.24 ಕೋಟಿ, ಸ್ಮಾರಕ ಅಭಿವೃದ್ಧಿಗೆ ₹ 76 ಲಕ್ಷ ಸೇರಿ ಒಟ್ಟು ₹ 5 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಖಾತೆಯಲ್ಲಿ ಈ ಅನುದಾನದ ಮೊತ್ತ ಇತ್ತು.

ADVERTISEMENT

ಆಸ್ತಿ ನೋಂದಣಿ ವಿಚಾರದಲ್ಲಿ ತಾಂತ್ರಿಕ ತೊಡಕುಗಳು ಎದುರಾಗಿದ್ದ ಕಾರಣ ಖರೀದಿ ಪ್ರಕ್ರಿಯೆ ಅಂತಿಮಗೊಂಡಿರಲಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತಿದ್ದ ನಿಜಲಿಂಗಪ್ಪ ಅವರ ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ಶಂಕರ್‌ ಈಚೆಗೆ ‘ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕಿದೆ’ ಎಂಬುದಾಗಿ ಜಾಹೀರಾತು ನೀಡಿದ್ದರು. ಸಾರ್ವಜನಿಕ ವಲಯದಲ್ಲಿ ಈ ವಿಚಾರ ಚರ್ಚೆಗೊಳಗಾಗಿತ್ತು, ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು.

ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸರ್ಕಾರ ಅಧಿಕಾರಿಗಳ ಸಭೆ ನಡೆಸಿ ಮನೆ ಖರೀದಿಸುವ, ಸಂರಕ್ಷಿಸುವ, ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸುವ ನಿರ್ಧಾರ ಪ್ರಕಟಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಅವರು ತಿಂಗಳೊಳಗೆ ನೋಂದಣಿ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದರು. ಇದೀಗ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ನಿವಾಸ ಅಮೆರಿಕದಲ್ಲಿರುವ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್‌ ಅವರ ಹೆಸರಿನಲ್ಲಿತ್ತು. ಅವರು ತಮ್ಮ ತಂದೆ, ನಿಜಲಿಂಗಪ್ಪ ಅವರ ಪುತ್ರ ಎಸ್‌.ಎನ್‌.ಕಿರಣ್‌ ಶಂಕರ್‌ ಅವರಿಗೆ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ) ನೀಡಿದ್ದರು. ಅದನ್ನು ಪರಿಗಣಿಸಿ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪಕ್ರಿಯೆ ಪೂರ್ಣಗೊಳಿಸಲಾಯಿತು.

‘ಮಧ್ಯಾಹ್ನ 1ರಿಂದ 1.30ರ ವೇಳೆಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ತಹಶೀಲ್ದಾರ್‌ ನಾಗವೇಣಿ ಅವರಿಗೆ ನಿಜಲಿಂಗಪ್ಪ ಅವರ ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ ಶಂಕರ್‌ ಪತ್ರವನ್ನು ಹಸ್ತಾಂತರಿಸಿದರು. ಸರ್ಕಾರ ₹ 4.18 ಕೋಟಿಗೆ ಮನೆ ಖರೀದಿ ಮಾಡಿದೆ’ ಎಂದು ಎಸ್ಸೆನ್‌ ಸ್ಮಾರಕ ಟ್ರಸ್ಟ್‌ ಸಂಯೋಜಕ ಎಸ್‌.ಷಣ್ಮುಖಪ್ಪ ತಿಳಿಸಿದ್ದಾರೆ.

ನಿಜಲಿಂಗಪ್ಪ ಅವರು ವಾಸವಿದ್ದ ಮನೆಯನ್ನು ಖರೀದಿಸಿ ಸಂರಕ್ಷಿಸುವ ಉದ್ದೇಶದಿಂದ ಈ ಹಿಂದೆ ಬಿಡುಗಡೆ ಮಾಡಿದ್ದ ₹41849016 ಮೊತ್ತಕ್ಕೆ ರಾಜ್ಯ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ಖರೀದಿ ಮಾಡಲಾಗಿದೆ

–ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.