ADVERTISEMENT

ಚಿತ್ರದುರ್ಗ: ಕೋಟೆನಾಡಿನ ಬೀದಿಗಳಲ್ಲಿ ದೂರವಾದ ನೈರ್ಮಲ್ಯ

ಕೆ.ಪಿ.ಓಂಕಾರಮೂರ್ತಿ
Published 17 ಸೆಪ್ಟೆಂಬರ್ 2025, 5:47 IST
Last Updated 17 ಸೆಪ್ಟೆಂಬರ್ 2025, 5:47 IST
<div class="paragraphs"><p>ಚಿತ್ರದುರ್ಗದ ಲಕ್ಷ್ಮೀಬಜಾರ್‌ ರಸ್ತೆ ತಿರುವಿನಲ್ಲಿನ ಕಸದ ರಾಶಿ</p></div>

ಚಿತ್ರದುರ್ಗದ ಲಕ್ಷ್ಮೀಬಜಾರ್‌ ರಸ್ತೆ ತಿರುವಿನಲ್ಲಿನ ಕಸದ ರಾಶಿ

   

ಚಿತ್ರದುರ್ಗ: ನಿತ್ಯ ಮುಂಜಾನೆಯಿಂದಲೇ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕಿಳಿದರೂ ನಗರದಲ್ಲಿ ಅನೈರ್ಮಲ್ಯ ವಾತಾವರಣ ಹಾಗೂ ಕಸ ವಿಲೇವಾರಿಯಲ್ಲಿ ಮಾತ್ರ ಸುಧಾರಣೆ ಕಾಣುತ್ತಿಲ್ಲ.  ನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ಕಸದ ರಾಶಿ ಕಾಣಸಿಗುವುದು ಮೂಮೂಲಿಯಾಗಿದೆ.

ನಗರಸಭೆಯಲ್ಲಿ 106 ಕಾಯಂ ಹಾಗೂ 45 ನೇರಪಾವತಿ ಪೌರ ಕಾರ್ಮಿಕರಿದ್ದಾರೆ. ಇವರು ನಿತ್ಯ ಮುಂಜಾನೆಯಿಂದ ನಗರದ ಮುಖ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾರೆ. ಆದರೆ ಜನರು ಮಾತ್ರ ಇವರು ಕಸ ತೆಗೆದುಕೊಂಡು ಹೋದ ಕೆಲ ಹೊತ್ತಿಗೆ, ಇಲ್ಲವೇ ರಾತ್ರಿ ವೇಳೆ ರಸ್ತೆ ಬದಿ, ಖಾಲಿ ಜಾಗದಲ್ಲಿ ತ್ಯಾಜ್ಯ ಸುರಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಪರಿಣಾಮ ನಗರದ ಎಲ್ಲೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿವೆ.

ADVERTISEMENT

ವಾಣಿಜ್ಯ ಕೇಂದ್ರಗಳಾದ ಲಕ್ಷ್ಮೀ ಬಜಾರ್‌, ವಾಸವಿ ಮಹಲ್‌, ಆನೆ ಬಾಗಿಲು, ಚಿಕ್ಕಪೇಟೆ, ಸಂತೆಹೊಂಡ, ಹೊಳಲ್ಕೆರೆ ರಸ್ತೆಯಲ್ಲಿ ಕಸದ ರಾಶಿ ಸದಾ ಕಾಣುತ್ತಿದ್ದು, ಮಧ್ಯಾಹ್ನ 12 ಗಂಟೆಯಾದರೂ ರಸ್ತೆ ಬದಿಯ ಕಸ ವಿಲೇವಾರಿ ಆಗುತ್ತಿಲ್ಲ. ಉಳಿದಂತೆ ಬಸವಮಂಟಪ, ಜೋಗಿಮಟ್ಟಿ ರಸ್ತೆ, ಐಯುಡಿಪಿ, ಜೆಸಿಆರ್‌, ಬ್ಯಾಂಕ್ ಕಾಲೊನಿ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲೂ ಇದೇ ಸ್ಥಿತಿ ಮುಂದುವರೆದಿದೆ.

ಲಕ್ಷ್ಮೀಬಜಾರ್ ಪ್ರದೇಶದಲ್ಲಿನ ಕುಟುಂಬಗಳು ಕಸಕ್ಕೆ ಹೈರಾಣಾಗಿವೆ. ಆನೆಬಾಗಿಲಿನಿಂದ ಲಕ್ಷ್ಮೀ ಬಜಾರ್‌ ತಿರುವಿನಲ್ಲಿ ಹಾಕುವ ಕಸ ಹಂದಿ, ದನಗಳ ವಾಸಸ್ಥಾನವಾಗಿದೆ. ಈ ಕಸ ರಸ್ತೆ ತುಂಬೆಲ್ಲ ಹರಡಿಕೊಳ್ಳುವುದು ಸಾಮಾನ್ಯವಾಗಿದೆ.‌

‘ಸಂಜೆ 7 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೂ ಜನರು ಕಸ ತಂದು ಸುರಿಯುತ್ತಾರೆ. ಕೆಲ ಅಂಗಡಿ, ಟೀ ಸ್ಟಾಲ್‌ನವರು ತ್ಯಾಜ್ಯ ಸುರಿದು ಬೆಂಕಿ ಹಚ್ಚಿ ಹೋಗುತ್ತಾರೆ. ವಿದ್ಯುತ್ ಕಂಬದ ಸನಿಹವೇ ಬೆಂಕಿ ಹಚ್ಚುವುದರಿಂದ ಅಪಾಯವಾಗುತ್ತದೆ ಎಂಬ ಗಮನವೂ ಅವರಿಗೆ ಇರುವುದಿಲ್ಲ. ಅನೇಕ ಬಾರಿ ಮಧ್ಯರಾತ್ರಿ ವೇಳೆ ನೀರು ಹಾಕಿ ಬೆಂಕಿ ನಂದಿಸಲಾಗಿದೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ತಿಳಿಯುತ್ತಿಲ್ಲ. ತ್ಯಾಜ್ಯ ಸಾಗಣೆ ವಾಹನಕ್ಕೆ ಜನರು ಕಸ ಹಾಕದಿರುವುದು ದುರಂತ’ ಎಂದು ಬೇಸರಿಸುತ್ತಾರೆ ಸ್ಥಳೀಯ ನಿವಾಸಿಗಳು.

ಇನ್ನು ಐತಿಹಾಸಿಕ ಕೋಟೆಗೆ ಬರುವ ಪ್ರವಾಸಿಗರನ್ನು ರಸ್ತೆ ಬದಿಯ ಸಾಲು ಸಾಲು ಕಸದ ರಾಶಿ ಸ್ವಾಗತಿಸುತ್ತಿವೆ. ಜೋಗಿಮಟ್ಟಿ ರಸ್ತೆಯಿಂದ ಕೋಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸ್ವಚ್ಛತೆ ದೂರದ ಮಾತಾಗಿದೆ. ಜೋಗಿಮಟ್ಟಿ ರಸ್ತೆಯ ಸರ್ಕಾರಿ ಶಾಲೆಯ ಮುಂದೆ ಹಾಗೂ ಮೆದೇಹಳ್ಳಿ ಅಂಡರ್‌ಪಾಸ್‌ ಬಳಿ ಕಸದ ರಾಶಿ ಸರಿಯಾಗಿ ವಿಲೇವಾರಿಯಾಗದೆ ಉಳಿದಿದೆ. ಗೋಪಾಲಪುರ, ಕೆಳಗೋಟೆ, ಕಾಮನಬಾವಿ ಬಡಾವಣೆ, ಸಾದಿಕ್‌ ನಗರ, ಪಿಎನ್‌ಟಿ ಕ್ವಾರ್ಟರ್ಸ್ ಹಾಗೂ ಕೊಳಚೆ ಪ್ರದೇಶದಲ್ಲಿ ಚರಂಡಿಯಿಂದ ತೆಗೆದಿರುವ ಕಸವನ್ನು ರಸ್ತೆಬದಿ ಸುರಿಯಲಾಗಿದೆ. ಕೊಳಚೆ ನೀರು ಹರಿಯುವ ಚರಂಡಿಯಲ್ಲಿ ಕಳೆ ಗಿಡ ಬೆಳೆದಿವೆ. ಪ್ಲಾಸ್ಟಿಕ್‌, ಆಹಾರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಿದ್ದರಿಂದ ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆ ಎಂದರೆ ಏನು ಎಂದು ಪ್ರಶ್ನಿಸುವ ಮಟ್ಟಕ್ಕೆ ಪರಿಸ್ಥಿತಿ ಬಂದು ನಿಂತಿದೆ ಎನ್ನುತ್ತಾರೆ ಸಾರ್ವಜನಿಕರು. 

ನಗರದ ಸ್ವಾಮಿ ವಿವೇಕಾನಂದ ನಗರ, ಸ್ಟೇಡಿಯಂ ರಸ್ತೆ, ದರ್ಜಿ ಕಾಲೊನಿ, ಗೋಪಾಲಪುರ ರಸ್ತೆ, ಹಿಮ್ಮತ್ ನಗರ, ರಾಮ್‌ದಾಸ್‌ ಕಾಂಪೌಂಡ್‌, ನೆಹರೂ ನಗರ, ಬುರುಜನಹಟ್ಟಿ, ಕುಂಬಾರ ಬೀದಿ.. ಹೀಗೆ ಬಹುತೇಕ ಬಡಾವಣೆಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ.

ಮುಖ್ಯ ರಸ್ತೆಯ ಸ್ವಚ್ಛತೆಗೆ ಗಮನ ಹರಿಸುತ್ತಿರುವ ನಗರಸಭೆಯು ಬಡಾವಣೆಗಳನ್ನು ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಎರಡು ದಿನಕ್ಕೊಮ್ಮೆ ಕಸವನ್ನು ತೆಗೆದುಕೊಂಡು ಹೋಗಲು ವಾಹನ ಬರುತ್ತಿವೆ. ಈ ಪರಿಣಾಮ ಕಸ ರಸ್ತೆಯಲ್ಲಿಯೇ ಕೊಳೆಯುತ್ತಿದೆ. ನಗರಸಭೆಯು ಕಸ ಹಾಕಲು ಸ್ಥಳ ನಿಗದಿ ಮಾಡಿದ್ದರೂ ಜನರು ರಸ್ತೆ ಬದಿ, ಖಾಲಿ ಪ್ರದೇಶಗಳಲ್ಲಿ ಕಸವನ್ನು ಎಸೆಯುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪ.

ನಗರದ ಅನೈರ್ಮಲ್ಯ ಐತಿಹಾಸಿಕ ಊರಿನ ಬಗ್ಗೆ ಹೆಮ್ಮೆಪಡುವ ಬದಲಿಗೆ ನಿರಾಸೆ ಮೂಡಿಸಿದೆ. ಇಂತಹ ಸ್ಥಿತಿಗೆ ನಗರಸಭೆಯಷ್ಟೇ ಸ್ಥಳೀಯರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಸ್ವಚ್ಛತೆ ವಿಚಾರವಾಗಿ ಸಭೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ವಾಣಿಜ್ಯ ಪ್ರದೇಶದಲ್ಲಿ ನಿತ್ಯ ಎರಡು ಬಾರಿ ಕಸ ವಿಲೇವಾರಿಗೆ ಕ್ರಮವಹಿಸಲಾಗಿದೆ. ಜನರು ರಸ್ತೆಬದಿ ಕಸ ಸುರಿಯದೇ ನಗರಸಭೆಯ ಕಸದ ವಾಹನಕ್ಕೆ ನೀಡಬೇಕು
ಎಸ್‌.ಲಕ್ಷ್ಮೀ, ಪೌರಾಯುಕ್ತೆ
ಮುಖ್ಯರಸ್ತೆ ಹೊರತುಪಡಿಸಿ ಒಳ ರಸ್ತೆಗಳು ಸ್ವಚ್ಛತೆಯಿಂದ ದೂರವಾಗಿವೆ. ಲಕ್ಷ್ಮಿ ಬಜಾರ್ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ಈ ಬಗ್ಗೆ ನಗರಸಭೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ
ಎಸ್‌.ಶಿವಕುಮಾರ್‌, ಸ್ಥಳೀಯರು
ಸಕಾಲಕ್ಕೆ ನಗರದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ ಎಂಬುದಕ್ಕೆ ರಸ್ತೆ ಬದಿ ಬಿದ್ದ ಕಸದ ರಾಶಿ ಸಾಕ್ಷಿಯಾಗಿದೆ. ಬಡಾವಣೆಗಳಲ್ಲಿ ಸ್ವಚ್ಛತೆ ದೂರವಾಗಿದೆ. ಕಸ ಸಂಗ್ರಹಿಸುವ ವಾಹನಗಳು ನಿತ್ಯ ಬಾರದಿರುವುದೇ ಸಮಸ್ಯೆಗೆ ಕಾರಣ.
ಒ.ಪ್ರತಾಪ್‌ ಜೋಗಿ, ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.