ADVERTISEMENT

ಚಿತ್ರದುರ್ಗ|ಮ್ಯಾನ್‌ಹೋಲ್ ಅವಾಂತರ:ದುರ್ವಾಸನೆ ನಿರಂತರ;35 ವಾರ್ಡ್‌ಗಳಲ್ಲೂ ಸಮಸ್ಯೆ

ಕೆ.ಪಿ.ಓಂಕಾರಮೂರ್ತಿ
Published 19 ಜನವರಿ 2026, 6:37 IST
Last Updated 19 ಜನವರಿ 2026, 6:37 IST
ಚಿತ್ರದುರ್ಗದ ಐಯುಡಿಪಿ ಬಡಾವಣೆ ರಸ್ತೆಯಲ್ಲಿ ಮ್ಯಾನ್ ಹೋಲ್‌ ತುಂಬಿ ಹರಿಯುತ್ತಿರುವುದು
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಚಿತ್ರದುರ್ಗದ ಐಯುಡಿಪಿ ಬಡಾವಣೆ ರಸ್ತೆಯಲ್ಲಿ ಮ್ಯಾನ್ ಹೋಲ್‌ ತುಂಬಿ ಹರಿಯುತ್ತಿರುವುದು ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ   

ಚಿತ್ರದುರ್ಗ: ಅಸಮರ್ಪಕ ಒಳಚರಂಡಿ ಸಮಸ್ಯೆಯಿಂದಾಗಿ ನಗರದಲ್ಲಿ ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ರಸ್ತೆಗೆ ಹರಿಯುವುದು ನಿತ್ಯ ನಿರಂತರವಾಗಿದೆ. ಯಾವುದೇ ಬಡಾವಣೆ, ರಸ್ತೆಗೂ ಕಾಲಿಟ್ಟರು ದುರ್ವಾಸನೆ ಸಾಮಾನ್ಯವಾಗಿದೆ.

ನಗರದ ದೊಡ್ಡಪೇಟೆ, ಚಿಕ್ಕಪೇಟೆ, ಐಯುಡಿಪಿ ಬಡಾವಣೆ, ಕೆಳಗೋಟೆ, ಸಿಕೆ ಪುರ ಮುಖ್ಯ ರಸ್ತೆ, ಬಸವೇಶ್ವರ ಚಿತ್ರಮಂದಿರ ರಸ್ತೆ, ಕೋಟೆ ಪ್ರೌಢಶಾಲೆ ಆವರಣ, ರೋಟರಿ ಶಾಲೆ ರಸ್ತೆ, ಹೊಳಲ್ಕೆರೆ ರಸ್ತೆ, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನಸಂಚಾರ ಹೆಚ್ಚಿರುವ ಭಾಗ ಸೇರಿದಂತೆ ನಗರದ35 ವಾರ್ಡ್‌ಗಳ ಬಹುತೇಕ ಬಡಾವಣೆಗಳಲ್ಲಿ ತೆರೆದ ಚರಂಡಿಯಲ್ಲಿ ಮಲ–ಮೂತ್ರದೊಂದಿಗೆ ನಿತ್ಯ ಕೊಳಚೆ ನೀರು ಹರಿಯುತ್ತಿದೆ. ತ್ಯಾಜ್ಯದ ರಾಶಿಯೂ ತುಂಬಿಕೊಂಡು ಸರಾಗವಾಗಿ ಹರಿಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ 6,500ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳಿವೆ. ಯುಜಿಡಿ ಕಾಮಗಾರಿ ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಿಂದಾಗಿ ಒಳಚರಂಡಿ ಪೈಪ್‌ಲೈನ್‌ ಅಲ್ಲಲ್ಲಿ ಕಟ್ಟಿಕೊಳ್ಳುವುದು, ಮ್ಯಾನ್‌ ಹೋಲ್‌ ಮೂಲಕ ರಸ್ತೆಗಳಿಗೆ ಕೊಳಕು ನೀರು ಹರಿಯುವುದು ಸಾಮಾನ್ಯವಾಗಿದೆ.

ADVERTISEMENT

ನಗರದಲ್ಲಿ ಸಿಸಿ ರಸ್ತೆ ನಿರ್ಮಿಸುವ ವೇಳೆ ಮ್ಯಾನ್‌ಹೋಲ್‌ಗಳನ್ನು ಅಚ್ಚುಕಟ್ಟುಗೊಳಿಸದ ಕಾರಣ ರಸ್ತೆ ನಡುವೆ ಅವಾಂತರ ಸೃಷ್ಟಿಸಿವೆ. ಕೆಲವು ಕಡೆ ರಸ್ತೆ ಮೇಲೆ ಗೋಪುರದ ಆಕೃತಿಯಲ್ಲಿದ್ದರೆ ಕೆಲ ಭಾಗಗಳಲ್ಲಿ ನೆಲ ತೊಟ್ಟಿಯ ಮಾದರಿಯಲ್ಲಿವೆ. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಬಸ್ಸು, ಕಾರು ಇತರೆ ವಾಹನಗಳು ಇವುಗಳಲ್ಲಿ ಸಿಲುಕಿಕೊಳ್ಳುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ವೃದ್ಧರು ಬಿದ್ದು, ಕೈಕಾಲು ಪೆಟ್ಟು ಮಾಡಿಕೊಂಡ ನಿದರ್ಶನಗಳಿವೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರು ಸಾಕಷ್ಟು ಹೈರಾಣಾಗಿದ್ದಾರೆ.

ಚಿತ್ರದುರ್ಗದ ಕೋಟೆ ಪ್ರೌಢಶಾಲೆ ಆವರಣದಲ್ಲಿ ಮ್ಯಾನ್ ಹೋಲ್ ಹಾಳಾಗಿರುವುದು

ಕೊಳಚೆ ನೀರು ಹರಿಯುವ ಕಾರಣ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಒಳಚರಂಡಿ ಸ್ವಚ್ಛತಾ ಕಾರ್ಯ ನಡೆಯದಿರುವುದು, ಹಳೆಯ ಪೈಪ್‌ಲೈನ್‌ ವ್ಯವಸ್ಥೆ, ಅಸಮರ್ಪಕ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಕೊರತೆಯೇ ಸಮಸ್ಯೆಗೆ ಮೂಲ ಕಾರಣ ಎಂದು ನಾಗರಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಸಮಸ್ಯೆ ತೀವ್ರವಾದಾಗ ತಾತ್ಕಾಲಿಕ ಸ್ವಚ್ಛತಾ ಕಾರ್ಯ ನಡೆಸಿ ಕೈತೊಳೆಯುವ ಪ್ರವೃತ್ತಿ ಮುಂದುವರಿದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ನಾಯಕನಹಟ್ಟಿ ಪಟ್ಟಣದ 7ನೇ ವಾರ್ಡ್‌ನಲ್ಲಿರುವ ಅವೈಜ್ಞಾನಿಕ ಚರಂಡಿ

ನಗರದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುವ ಕಾರ್ಯವಾಗಬೇಕು. ಜತೆಗೆ ಹಳೆಯ ಪೈಪ್‌ಲೈನ್‌ಗಳನ್ನು ಬದಲಾವಣೆ, ಸುರಕ್ಷಿತ ಮುಚ್ಚಳ ಅಳವಡಿಕೆ, ನಿಯಮಿತ ಸ್ವಚ್ಛತಾ ಕಾರ್ಯ ಹಾಗೂ ನಿರಂತರ ಮೇಲ್ವಿಚಾರಣೆ ಕೈಗೊಳ್ಳಬೇಕಿದೆ. ಇಲ್ಲವಾದರೆ ಸಮಸ್ಯೆ ನಿತ್ಯ ನಿರಂತರವಾಗುವುದರಲ್ಲಿ ಅನುಮಾನವಿಲ್ಲ.

ಹೊಳಲ್ಕೆರೆಯ ಹಿರೇಕೆರೆ ಕೋಡಿ ಚರಂಡಿಯಲ್ಲಿ ಕೊಳಚೆ ತುಂಬಿರುವುದು
ಚಿತ್ರದುರ್ಗ ನಗರದಲ್ಲಿ ಕೊಳಚೆ ನೀರು ರಸ್ತೆಗೆ ಹರಿಯುವ ದೂರು ಬಂದ ಕೂಡಲೇ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಪೈಪ್‌ಲೈನ್‌ ಚೇಂಬರ್‌ಗಳು ಹಾಳಾಗಿದ್ದು ಶೀಘ್ರ ದುರಸ್ತಿ ಕಾರ್ಯ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ
ಎಸ್‌.ಲಕ್ಷ್ಮಿ ಪೌರಾಯುಕ್ತೆ ನಗರಸಭೆ
ಚಿತ್ರದುರ್ಗದಲ್ಲಿ ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ರಸ್ತೆಗೆ ಹರಿಯುವುದು ಮಾಮೂಲಿಯಾಗಿದೆ. ಕೋಟೆ ಪ್ರೌಢಶಾಲೆ ಆವರಣದಲ್ಲಿ ಸಮಸ್ಯೆ ಗಂಭೀರವಾಗಿದೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಆಟ ಆಡುವ ಸ್ಥಿತಿ ಬಂದಿದೆ
ಎ.ವಿ.ಮಂಜುನಾಥ್‌ ನಾಗರಿಕ
ನಾಯಕನಹಟ್ಟಿ ಪಟ್ಟಣದ 10ವಾರ್ಡ್‌ಗಳ ಚರಂಡಿ ನೀರನ್ನು ಶುದ್ಧಿಕರಣಗೊಳಿಸಿ ಜೈವಿಕ ಪರಿಸರವನ್ನು ರಕ್ಷಿಸುವ ಸಲುವಾಗಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಯೋಜನೆ ರೂಪಿಸಿಲಾಗಿದೆ. ಕೆಲ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ
ಓ.ಶ್ರೀನಿವಾಸ್ ಮುಖ್ಯಾಧಿಕಾರಿ
ಹೊಳಲ್ಕೆರೆ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು ₹ 100 ಕೋಟಿ ಅನುದಾನ ಬೇಕು. ಇದಕ್ಕೆ ಕ್ರಿಯಾಯೋಜನೆ ರಚಿಸಿದ್ದು ಅನುದಾನ ಬಿಡುಗಡೆ ಆದ ನಂತರ ಯೋಜನೆ ಜಾರಿಗೊಳಿಸಲಾಗುತ್ತದೆ
ಡಿ.ಉಮೇಶ್‌ ಮುಖ್ಯಾಧಿಕಾರಿ ಪುರಸಭೆ
ಕೊಳಚೆ ನೀರು ಹಳ್ಳಕೊಳ್ಳ ಸೇರುತ್ತಿರುವುದರಿಂದ ನಾಯಕನಹಟ್ಟಿ ಪಟ್ಟಣದ ಜಲಮೂಲಗಳು ಕಲುಷಿತವಾಗುತ್ತಿವೆ. ಕೃಷಿ ಮತ್ತು ಜೈವಿಕ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೀಘ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಬಗೆಹರಿಯಲಿದೆ
ಪಿ.ಯು.ಸುನೀಲ್‌ ಕುಮಾರ್‌ ಗ್ರಾಮಸ್ಥ

ಹಳ್ಳಕೊಳ್ಳಗಳಿಗೆ ಸೇರುತ್ತಿದೆ ಕೊಳಚೆ ನೀರು

ವಿ.ಧನಂಜಯ

ನಾಯಕನಹಟ್ಟಿ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ನಾಯಕನಹಟ್ಟಿ ಪಟ್ಟಣ ಒಳಚರಂಡಿ ವ್ಯವಸ್ಥೆಯಿಂದ ದೂರವಾಗಿದೆ. ಇದರಿಂದ ಪಟ್ಟಣದ ವ್ಯಾಪ್ತಿಯಲ್ಲಿರುವ ಚರಂಡಿ ನೀರು ಅವೈಜ್ಞಾನಿಕವಾಗಿ ಹರಿದು ಸಮೀಪದ ಹಳ್ಳಕೊಳ್ಳ ಸೇರುತ್ತಿದೆ.

ನಾಯಕನಹಟ್ಟಿ 2015ರ ಹಿಂದೆ ಗ್ರಾಮ ಪಂಚಾಯತಿ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರಿದ ನಂತರ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ. ಆರಂಭದಲ್ಲಿ 15ಸಾವಿರ ಜನಸಂಖ್ಯೆಯಿದ್ದ ಪಟ್ಟಣವು ಪ್ರಸ್ತುತ 22 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.

ಪಂಚಾಯತಿ ವ್ಯಾಪ್ತಿಯಲ್ಲಿರುವ 16ವಾರ್ಡ್‌ಗಳಲ್ಲಿ ಹಿಂದೆ ಯಾವುದೋ ಕಾಲದಲ್ಲಿ ನಿರ್ಮಿಸಿರುವ ಚರಂಡಿಗಳಿವೆ. ಕಾವಲು ಬಸವೇಶ್ವರ ನಗರ ಜಾಗನೂರಹಟ್ಟಿ ಮಾದಯ್ಯನಹಟ್ಟಿ ಗಂಗಯ್ಯನಹಟ್ಟಿ ಚನ್ನಬಸಯ್ಯನಹಟ್ಟಿಯ ಚರಂಡಿ ನೀರು ಇಳಿಜಾರಿಗೆ ಹರಿದು ಸಮೀಪದಲ್ಲೇ ಇರುವ ಚಿಕ್ಕಕೆರೆಗೆ ಬರುವ ಹಳ್ಳಕ್ಕೆ ಸೇರುತ್ತಿದೆ. ಕೊಂಡಯ್ಯನ ಕಪಿಲೆ ಮಾಳಪ್ಪನಹಟ್ಟಿ ಗ್ರಾಮದ ಚರಂಡಿ ನೀರು ದೊಡ್ಡಹಳ್ಳಕ್ಕೆ ಸೇರುತ್ತಿದೆ. ಇನ್ನೂ ಬೋಸೆದೇವರಹಟ್ಟಿ ಗ್ರಾಮದ ಚರಂಡಿ ನೀರು ನೈಸರ್ಗಿಕವಾಗಿ ಇಳಿಜಾರು ಪ್ರದೇಶಕ್ಕೆ ಹರಿದು ಶಿಡ್ಲಹಳ್ಳ ದೊಡ್ಡಕೆರೆ ಸಂಪರ್ಕಿಸುವ ಹಳ್ಳ ನಾಯಕನಹಟ್ಟಿ ಪಟ್ಟಣದ 10ವಾರ್ಡ್‌ಗಳ ನೀರು ವಿವಿಧ ಹಳ್ಳಕೊಳ್ಳಗಳಿಗೆ ಸೇರಿ ಜಲಮೂಲ ಮಾರ್ಗಗಳನ್ನು ಕಲುಷಿತಗೊಳಿಸುತ್ತಿವೆ.

ಪಟ್ಟಣದ 5 ಮತ್ತು 14 ವಾರ್ಡ್‌ನ ಹಲವು ಬೀದಿಗಳಿಗೆ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದ ನಿವಾಸಿಗಳು ಚರಂಡಿ ನೀರನ್ನು ರಸ್ತೆಗೆ ಹರಿಸುತ್ತಾರೆ. ಇಲ್ಲವಾದರೆ ಪಕ್ಕದಲ್ಲೋ ಅಥವಾ ಮನೆಯ ಹಿಂದೆ ಗುಂಡಿಗಳನ್ನು ತೆಗದು ಚರಂಡಿ ನೀರು ಬೀಡುತ್ತಿದ್ದಾರೆ. ಇದರಿಂದ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ರೋಗಗಳು ಹರಡುತ್ತಿವೆ. ವಾರ್ಡ್‌ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಹೆಚ್ಚಾಗುತ್ತಿದೆ. ಹಾಗಾಗಿ ಪಟ್ಟಣಕ್ಕೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ಪಟ್ಟಣದ ಸಾರ್ವಜನಿಕರ ಆಗ್ರಹ.

ಮರೀಚಿಕೆಯಾದ ಒಳಚರಂಡಿ ವ್ಯವಸ್ಥೆ

ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಮರೀಚಿಕೆಯಾಗಿದ್ದು ಕೆಲವು ಕಡೆ ಚರಂಡಿ ನೀರು ಮುಂದೆ ಸಾಗದೆ ಕೊಳಚೆ ತುಂಬಿದೆ. ಪಟ್ಟಣದ ಗಣಪತಿ ದೇವಸ್ಥಾನದ ಹಿಂಭಾಗದ ಚೀರನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಚರಂಡಿ ತುಂಬಿ ವರ್ಷಗಳೇ ಕಳೆದರೂ ಸ್ವಚ್ಛಗೊಳಿಸಿಲ್ಲ. ಕೋಟೆ ಪ್ರದೇಶದ ಚರಂಡಿ ನೀರೆಲ್ಲ ಇಲ್ಲಿಗೆ ಬಂದು ನಿಲ್ಲುತ್ತದೆ. ವರ್ಷಗಟ್ಟಲೆ ನೀರು ನಿಂತಿರುವುದರಿಂದ ಕೊಳಚೆ ಸೃಷ್ಠಿಯಾಗಿದ್ದು ದುರ್ವಾಸನೆ ಬೀರುತ್ತಿದೆ.

ಇದು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುವಂತಿದೆ. ಚರಂಡಿ ಪಕ್ಕದಲ್ಲೇ ಪ್ರೌಢಶಾಲೆ ಇದ್ದು ದುರ್ವಾಸನೆಯಿಂದ ವಿದ್ಯಾರ್ಥಿಗಳೂ ಸಂಕಷ್ಟ ಅನುಭವಿಸುವಂತೆ ಆಗಿದೆ. ಈ ಚರಂಡಿ ಆಳವಾಗಿರುವುದರಿಂದ ಇದರಲ್ಲಿ ಎಮ್ಮೆ ದನಗಳು ಬೀಳುವುದು ಸಾಮಾನ್ಯವಾಗಿದೆ. ಜೆಸಿಬಿ ತರಿಸಿ ಅವುಗಳನ್ನು ಮೇಲಕ್ಕೆ ಎತ್ತಲಾಗುತ್ತದೆ. ಚರಂಡಿ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟಿರುವುದರಿಂದ ಈ ಸಮಸ್ಯೆ ಆಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಪಟ್ಟಣದ ವಿವಿಧ ಬಡಾವಣೆಗಳ ಸ್ಥಿತಿಯೂ ಇದೇ ರೀತಿ ಇದೆ. ದಾವಣಗೆರೆ ರಸ್ತೆಯಲ್ಲಿರುವ ಹಿರೇಕೆರೆ ಕೋಡಿಗೆ ಚರಂಡಿ ನೀರು ಬಿಟ್ಟಿರುವುದರಿಂದ ಅವಳಿಹಟ್ಟಿ ರಸ್ತೆಯ ಅಯ್ಯನ ಕಟ್ಟೆಯಲ್ಲಿ ಕೊಳಚೆ ನೀರು ತುಂಬಿದೆ.

ಪಟ್ಟಣದ ಬಸ್ ನಿಲ್ದಾಣ ಭಾಗದ ನೀರು ಶಿವನ ಕೆರೆ ಹೊರಭಾಗದಲ್ಲಿ ಹರಿಯುತ್ತಿದ್ದು ಕೆರೆ ಏರಿ ಕೆಳಗಿನ ಜಾಗ ಕೊಳಚೆ ಪ್ರದೇಶವಾಗಿದೆ. ಹೊಸ ಬಡಾವಣೆಗಳಲ್ಲಿ ಮಾತ್ರ ಯುಜಿಡಿ ಸೌಲಭ್ಯ ಇದ್ದು ಉಳಿದ ಕಡೆ ಇಲ್ಲ. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು ಯುಜಿಡಿ ಯೋಜನೆ ಜಾರಿಯಾಗಬೇಕಿದೆ. ಪಟ್ಟಣಕ್ಕೆ ಸುಸಜ್ಜಿತ ಚರಂಡಿ ವ್ಯವಸ್ಥೆ ಬೇಕು ಎಂಬುದು ನಾಗರಿಕರ ಬೇಡಿಕೆಯಾಗಿದೆ.