ಚಿತ್ರದುರ್ಗ: ‘ಮಧ್ಯಕರ್ನಾಟಕ ಭಾಗದ ದಸರಾ ಎಂದೇ ಪ್ರಸಿದ್ಧಿ ಪಡೆದಿರುವ ಶರಣ ಸಂಸ್ಕೃತಿ ಉತ್ಸವ ಸೆ. 25ರಿಂದ ಅ. 3ರವರೆಗೆ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ನಡೆಯಲಿದೆ. ಉತ್ಸವದ ಯಶಸ್ಸಿಗಾಗಿ ಸಕಲ ಸಿದ್ಧತೆ ಆರಂಭಿಸಲಾಗಿದೆ’ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದ ಅನುಭವ ಮಂಟಪದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಕಾಯಕ, ಸಮಾನತೆ ಹಾಗು ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಪ್ರತಿ ವರ್ಷ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತದೆ. ಸೆ. 25ರಂದು ಮುರುಗಿ ಶಾಂತವೀರ ಸ್ವಾಮಿಗಳ ಸಮಗ್ರ ಕೃತಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.
‘ಸೆ. 26ರಂದು ಅಥಣಿ ಮುರುಘೇಂದ್ರ ಶಿವಯೋಗಿಗಳು ಹಾಗೂ ಚಿತ್ರದುರ್ಗ ಮುರುಘಾಮಠಕ್ಕಿರುವ ಅವಿನಾಭಾವ ಸಂಬಂಧದ ಬಗ್ಗೆ ಗೋಷ್ಠಿ ಇರಲಿದೆ. ಜತೆಗೆ ಕೃಷಿಮೇಳ, ಕೈಗಾರಿಕಾಮೇಳ, ಮಹಿಳಾ ಸಮಾವೇಶ, ಮಕ್ಕಳಗೋಷ್ಠಿ, ಸಂಗೀತ ಸಂಜೆ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ನಿವೃತ್ತ ನೌಕರರ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.
ಹಿರಿಯ ಸಂಶೋಧಕ ಬಿ.ರಾಜಶೇಖರಪ್ಪ ಮಾತನಾಡಿ, ‘1689ರಲ್ಲಿ ಚಿತ್ರದುರ್ಗದ ಸಂಸ್ಥಾನಕ್ಕೆ ಬಿಚ್ಚುಗತ್ತಿ ಬರಮಣ್ಣ ನಾಯಕರು ನಾಯಕರಾದರು. ಮೊದಲು ಅವರು ಮುರುಗಿಸ್ವಾಮಿ ಮಠವನ್ನು ಬೆಟ್ಟದಲ್ಲಿ ಕಟ್ಟಿದರು. ಆ ಸಂದರ್ಭದಲ್ಲಿ ಲಕ್ಷ್ಮಿಸಾಗರದಿಂದ ಬರಮಣ್ಣ ನಾಯಕ ಮುರುಗಿ ಶಾಂತವೀರ ಸ್ವಾಮಿಗಳನ್ನು ಕುದುರೆ ಮೇಲೆ ಕೂರಿಸಿಕೊಂಡು ವಾದ್ಯಗಳೊಂದಿಗೆ ಕರೆ ತರುತ್ತಾರೆ. ಅಲ್ಲಿಂದಲೇ ದಸರಾ ವೈಭವ ಆರಂಭವಾಗಿರಬಹುದು ಎಂಬುದು ಪ್ರತೀತಿ. ದಸರಾ ಪ್ರಾರಂಭವಾಗಿ ನಂತರ ಶರಣ ಸಂಸ್ಕೃತಿ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ’ ಎಂದರು.
ಬಸವಪ್ರಭು ಸ್ವಾಮಿಗಳು ಮಾತನಾಡಿ, ‘ಶ್ರೀಮಠದಲ್ಲಿ ಈ ಹಿಂದೆ ನಡೆಯುತ್ತಿದ್ದ ದಸರಾ ಮಹೋತ್ಸವವನ್ನು ಶರಣ ಸಂಸ್ಕೃತಿ ಉತ್ಸವವಾಗಿ ಆಚರಣೆ ಮಾಡಲಾಗುತ್ತಿದೆ. 1979ರಿಂದ ನಿರಂತರವಾಗಿ ಆಚರಣೆ ನಡೆದುಕೊಂಡು ಬಂದಿದೆ’ ಎಂದು ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ‘ಉತ್ಸವದ ಭಾಗವಾಗಿ ಚಿತ್ರದುರ್ಗ ನಗರದಲ್ಲಿಯೂ ಒಂದು ಕಾರ್ಯಕ್ರಮ ನಡೆಯಲಿ. ಕೈಗಾರಿಕೆಗಳು ಜಿಲ್ಲೆಗೆ ಕಾಲಿಡುತ್ತಿದ್ದು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವಂತಹ ವಾತಾವರಣ ನಿರ್ಮಿಸಬೇಕಿದೆ. ಕರ್ನಾಟಕ ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ಸಮಾರಂಭಕ್ಕೆ ಆಹ್ವಾನಿಸಬಹುದು’ ಎಂದು ಹೇಳಿದರು.
ಹಿರಿಯ ವಕೀಲ ಫಾತ್ಯರಾಜನ್ ಮಾತನಾಡಿ, ‘ಮೈಸೂರು ಕುಸ್ತಿ ಪಂದ್ಯಾವಳಿ ಬಿಟ್ಟರೆ ಚಿತ್ರದುರ್ಗ ಮುರುಘಾಮಠದ ಕುಸ್ತಿ ಪಂದ್ಯಗಳು ಹೆಸರುವಾಸಿಯಾಗಿವೆ. ಅಲ್ಲಿ ಭಾಗವಹಿಸುವ ಅನೇಕ ಕುಸ್ತಿಪಟುಗಳು ಇಲ್ಲಿಯೂ ಭಾಗವಹಿಸುತ್ತಾ ಬಂದಿರುವುದು ನಮ್ಮ ಹೆಮ್ಮೆ. ಕಳೆದ ಬಾರಿ ನಡೆದಂತೆ ಈ ಬಾರಿಯೂ ಮಹಿಳಾ ಕುಸ್ತಿ ಏರ್ಪಡಿಸಬೇಕು’ ಎಂದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ‘ಅರಿವು ಮೂಡಿಸುವುದೇ ಶರಣ ಸಂಸ್ಕೃತಿ ಉತ್ಸವದ ಉದ್ದೇಶವಾಗಿದೆ. ಜನರಲ್ಲಿ ಅರಿವು ಮೂಡಿಸುವಂತಹ ಚರ್ಚೆಗಳು ನಡೆಯಬೇಕು. ಮಾನವನ ಒಳ ಅರಿವು ಹಾಗೂ ಹೊರ ಅರಿವು ಇದರ ಬಗ್ಗೆಯೂ ಚರ್ಚೆ ಆಗಬೇಕು. ಉತ್ಸವದಲ್ಲಿ ಭಾಗವಹಿಸುವ ಜನರು ಋಣಾತ್ಮಕ ಅಂಶಗಳನ್ನು ಬಿಟ್ಟು ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಸೋಮವಾರಪೇಟೆ ವಿರಕ್ತಮಠದ ನಿಶ್ಚಲ ನಿರಂಜನ ಸ್ವಾಮೀಜಿ, ಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಜಿಲ್ಲಾ ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಉದ್ಯಮಿ ಶಂಕರಮೂರ್ತಿ, ಎನ್.ಜಿ. ಶ್ರೀನಿವಾಸ್, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಮಾಜಿ ನಗರಸಭಾಧ್ಯಕ್ಷ ಎಚ್.ಸಿ. ನಿರಂಜನಮೂರ್ತಿ, ನಾಗರಾಜ್, ತಿಪ್ಪೇಸ್ವಾಮಿ, ಗೌಳಿರುದ್ರಪ್ಪ, ಶೈಲಜಾ, ಮಹಮ್ಮದ್ ಸಾದತ್ ಇದ್ದರು.
ಮಠ ಬೆಳೆದಿದೆ ಭಕ್ತಿ ಇಳಿದಿದೆ:
ಮಾಜಿ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ ‘ಜಯದೇವ ಶ್ರೀಗಳ ಕಾಲದಿಂದಲೂ ನನಗೆ ಮಠದ ಸಂಪರ್ಕವಿದೆ. ಅಂದು ಶ್ರದ್ಧೆ ಭಕ್ತಿ ಪ್ರೀತಿ ವಿಶ್ವಾಸ ಹೆಚ್ಚಾಗಿತ್ತು. ಆಗಿನ ಭಕ್ತಿ ಶ್ರದ್ಧೆ ಇಂದು ಕಡಿಮೆಯಾಗಿದೆ. ಮಠ ದೊಡ್ಡದಾಗಿ ಬೆಳೆದಿದ್ದು ಭಕ್ತರೂ ಬೆಳೆದಿದ್ದಾರೆ. ಆದರೆ ಭಕ್ತಿ ಕಡಿಮೆಯಾಗಿದೆ ಎಂಬ ಭಾವನೆ ನನ್ನನ್ನ ಕಾಡುತ್ತಿದೆ’ ಎಂದು ವಿಷಾದಿಸಿದರು. ‘ಮುರುಘಾ ಮಠದಲ್ಲಿ ಮೊದಲಿದ್ದ ಭಕ್ತಿ ವಿಶ್ವಾಸ ಭರವಸೆಗಳು ಮರಳಿ ಬರಬೇಕು. ಹಿಂದಿನ ದೊಡ್ಡ ಧಾರ್ಮಿಕ ಪರಂಪರೆ ಮತ್ತೆ ಸೃಷ್ಟಿಯಾಗಬೇಕು. ಅದಕ್ಕೆ ಶರಣ ಸಂಸ್ಕೃತಿ ಉತ್ಸವ ವೇದಿಕೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.