ADVERTISEMENT

ಚಿತ್ರದುರ್ಗ: ಸರಳ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 6:42 IST
Last Updated 15 ಆಗಸ್ಟ್ 2020, 6:42 IST
ಚಿತ್ರದುರ್ಗದಲ್ಲಿ ನಡೆದ ಧ್ವಜಾರೋಹಣ
ಚಿತ್ರದುರ್ಗದಲ್ಲಿ ನಡೆದ ಧ್ವಜಾರೋಹಣ   

ಚಿತ್ರದುರ್ಗ: 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಬೆಳಿಗ್ಗೆ 9ಕ್ಕೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಸಾರಿದರು.

ADVERTISEMENT

ಪ್ರತಿ ವರ್ಷ ಒಂದು ಗಂಟೆ ನಡೆಯುತ್ತಿದ್ದ ಕಾರ್ಯಕ್ರಮ ಕೇವಲ 30 ನಿಮಿಷದಲ್ಲಿ ಮುಕ್ತಾಯವಾಯಿತು. ದೇಶ, ಹೋರಾಟಗಾರರು, ಸೈನಿಕರು ಹಾಗೂ ನಾಡು, ನುಡಿಯ ಕುರಿತು ವಿದ್ಯಾರ್ಥಿ ಸಮೂಹದಿಂದ ಅಭಿಮಾನ ಮೂಡಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಈ ಬಾರಿ ನಡೆಯಲಿಲ್ಲ. ಆದರೆ, ಇದೇ ವೇಳೆ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನಿಸಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಪರೇಡ್ ನಡೆಸಿದ ಆರು ತಂಡಗಳು ಸೇರಿ ನೆರೆದಿದ್ದ ಎಲ್ಲರೂ ಮುಖಗವಸು ಧರಿಸಿ, ಸ್ಯಾನಿಟೈಸರ್ ಬಳಸುವುದರ ಜತೆಗೆ ಅಂತರ ಕಾಯ್ದುಕೊಂಡರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ವಿತರಿಸಿದ ಮೊಪೇಡ್ ದ್ವಿಚಕ್ರ ವಾಹನ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕೊನೆಗಳಿಗೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಅಂತರ ಮರೆತರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ತಹಶೀಲ್ದಾರ್ ವೆಂಕಟೇಶಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.