ADVERTISEMENT

ಚಿತ್ರದುರ್ಗ | ಬಯಲಲ್ಲೇ ಶೌಚ; ಕಾಗದಕ್ಕಷ್ಟೇ ಸೀಮಿತವಾದ ಸ್ವಚ್ಛ ಭಾರತ್ ಮಿಷನ್‌

ಎಂ.ಎನ್.ಯೋಗೇಶ್‌
Published 16 ಫೆಬ್ರುವರಿ 2026, 6:59 IST
Last Updated 16 ಫೆಬ್ರುವರಿ 2026, 6:59 IST
   

ಚಿತ್ರದುರ್ಗ: ಸ್ವಚ್ಛ ಭಾರತ್ ಮಿಷನ್‌ ಯೋಜನೆಯಡಿ ಕೋಟೆನಾಡು ‘ಬಯಲು ಶೌಚ ಮುಕ್ತ ಜಿಲ್ಲೆ’ ಎಂದು ಘೋಷಿಸಲ್ಪಟ್ಟು ಹಲವು ವರ್ಷಗಳು ಕಳೆದಿದ್ದರೂ ಹಳ್ಳಿಗಳು ಇನ್ನೂ ಸ್ವಚ್ಛವಾಗಿಲ್ಲ. ಮಹಿಳೆಯರು ಸೇರಿದಂತೆ ಸಾರ್ವಜನಿಕರು ಮುಂಜಾನೆ ಎದ್ದೊಡನೆ ಶೌಚಕ್ಕೆ ತಂಬಿಗೆ ಹಿಡಿದು ಬಯಲಿಗೆ ತೆರಳುವ ದೃಶ್ಯಗಳು ಈಗಲೂ ಸಾಮಾನ್ಯವಾಗಿವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ಒಡಿಎಫ್‌ (ಬಯಲು ಶೌಚ ಮುಕ್ತ ಜಿಲ್ಲೆ) ಘೋಷಣೆ ಕಾಗದಕ್ಕಷ್ಟೇ ಸೀಮಿತವಾಗಿದೆ. ಸ್ವಚ್ಛ ಭಾರತ್‌ ಮಿಷನ್‌ (ಎಸ್‌ಬಿಎಂ) ಯೋಜನೆಯಡಿ 2014ರಿಂದ ಇಲ್ಲಿಯವರೆಗೆ ಸಾವಿರಾರು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನೀಡಿರುವ ಮಾಹಿತಿ ಅನುಸಾರ ಜಿಲ್ಲೆ ಶೇ 95ರಷ್ಟು ಸಾಧನೆ ಮಾಡಿದೆ. ಆದರೆ, ವಾಸ್ತವವಾಗಿ ಗ್ರಾಮೀಣ ಜನ ಆ ಶೌಚಾಲಯಗಳನ್ನು ಬಳಸದ ಕಾರಣ ಯೋಜನೆಯ ಪ್ರಗತಿಯಲ್ಲಿ ಕುಂಠಿತವಾಗಿದೆ.

ಎಸ್‌ಬಿಎಂ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ನೈರ್ಮಲ್ಯದ ಉದ್ದೇಶ ಹೊಂದಿದೆ. ದೇಶದಾದ್ಯಂತ 2ನೇ ಹಂತದ ಯೋಜನೆ ಸದ್ಯ ಪ್ರಗತಿಯಲ್ಲಿದೆ. ಆದರೆ, ಕೋಟೆನಾಡಿನಲ್ಲಿ ಸ್ಥಳೀಯ ಅಧಿಕಾರಿಗಳು ಶೌಚಾಲಯ ಕಟ್ಟಡ ನಿರ್ಮಾಣಕ್ಕಷ್ಟೇ ಆದ್ಯತೆ ನೀಡಿದ್ದು, ಅವುಗಳ ಬಳಕೆ ಕುರಿತು ಜಾಗೃತಿ ಮೂಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.

ADVERTISEMENT

ಗ್ರಾಮೀಣ ಜನರು ಕೇವಲ ಧನ ಸಹಾಯ ಪಡೆಯುವ ಉದ್ದೇಶದಿಂದಷ್ಟೇ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದಾರೆ. ಬಹುತೇಕ ಶೌಚಾಲಯಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದರೂ ಧನ ಸಹಾಯ ಪಡೆದುಕೊಂಡಿದ್ದಾರೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ಮಾಡದೇ ಹಣ ಬಿಡುಗಡೆ ಮಾಡಿದ್ದಾರೆ.

ಕೆಲವೆಡೆ ಎಸ್‌ಬಿಎಂ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ. ನೆರವಿನ ಮೊತ್ತದಲ್ಲೂ ಗ್ರಾಮ ಪಂಚಾಯಿತಿ ಹಂತದ ಅಧಿಕಾರಿಗಳಿಗೆ ಲಂಚ, ಕಮಿಷನ್‌ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಹಳ್ಳಿ ಜನ ಆರೋಪಿಸುತ್ತಾರೆ. ಸ್ವಚ್ಛ ಭಾರತ್ ಮಿಷನ್‌ ನಗರ ಯೋಜನೆ ಅಡಿಯಲ್ಲೂ ಇದೇ ಪರಿಸ್ಥಿತಿ ಇದ್ದು, ನಗರದ ಹೊರವಲಯಗಳ ಬಡಾವಣೆಯ ಜನ ಈಗಲೂ ಶೌಚಕ್ಕೆ ತಂಬಿಗೆ ಹಿಡಿದು ತೆರಳುತ್ತಾರೆ. ಕೆಲವರು ರೈಲ್ವೆ ಹಳಿಯನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾರ್ಯ ಶೇ 95ರಷ್ಟು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ‘ಮಾದರಿ ಗ್ರಾಮ’ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಶೇ 34ರಷ್ಟು ಸಾಧನೆಯಾಗಿದೆ.
ಎಸ್‌.ಆಕಾಶ್‌, ಜಿಲ್ಲಾ ಪಂಚಾಯಿತಿ ಸಿಇಒ

ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಬಹುತೇಕ ಜನ ಅವುಗಳನ್ನು ಮನೆಯ ವಸ್ತುಗಳನ್ನು, ಕೃಷಿ ಪರಿಕರಗಳನ್ನು ತುಂಬಿ ಇಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶೇ 50ಕ್ಕೂ ಹೆಚ್ಚು ಕುಟುಂಬಗಳ ಶೌಚಾಲಯ ಕೊಠಡಿಗಳು ಸ್ಟೋರ್‌ ರೂಮ್‌ಗಳಾಗಿವೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗ ಅಧಿಕಾರಿಗಳು ಎಸ್‌ಬಿಎಂ ಯೋಜನೆಯಡಿ ಒಡಿಎಫ್‌ ಪ್ಲಸ್‌ ಮಾದರಿ ಹಳ್ಳಿಗಳ ನಿರ್ಮಾಣದ ಗುರಿ ಇಟ್ಟುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಶೌಚಾಲಯ ಬಳಕೆಯಾಗದೇ ಹಳ್ಳಿಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಅನುಸಾರ ಎಸ್‌ಬಿಎಂ ಯೋಜನೆಯಡಿ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಶೇ 100ರಷ್ಟು ಸಾಧನೆ ಮಾಡಲಾಗಿದೆ. ಆದರೆ, ವಾಸ್ತವವಾಗಿ ಹೊಳಲ್ಕೆರೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನ ಮುಂಜಾನೆ ಶೌಚಕ್ಕೆ ತಂಬಿಗೆ ಹಿಡಿದು ಬಯಲಿಗೆ ಹೋಗುತ್ತಿದ್ದಾರೆ. ಶೇ 100ರಷ್ಟು ಸಾಧನೆ ಎಂಬುದು ಕೇವಲ ಕಡತಕ್ಕೆ ಸೀಮಿತವಾಗಿದೆ. ಚಳ್ಳಕೆರೆ ತಾಲ್ಲೂಕು ಶೇ 89.19, ಚಿತ್ರದುರ್ಗ ಶೇ 98.22, ಹಿರಿಯೂರು ಶೇ 93.16, ಹೊಸದುರ್ಗ ಶೇ 93.12, ಮೊಳಕಾಲ್ಮುರು ತಾಲ್ಲೂಕು ಶೇ 92.69ರಷ್ಟು ಸಾಧನೆ ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ಒಟ್ಟು 12,251 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿತ್ತು. ಅದರಲ್ಲಿ 11,609 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲಾಗಿದ್ದು, ಶೇ 95ರಷ್ಟು ಸಾಧನೆಯಾಗಿದೆ. 642 ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವುದು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ. ಆದರೆ, ವಾಸ್ತವವಾಗಿ ಎಷ್ಟು ಶೌಚಾಲಯಗಳು ಬಳಕೆಯಲ್ಲಿವೆ, ಎಷ್ಟು ವ್ಯರ್ಥವಾಗಿವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಅರ್ಧದಷ್ಟು ಶೌಚಾಲಯಗಳಿಗೆ ನೀರಿನ ಪೂರೈಕೆಯೇ ಇಲ್ಲ ಎಂಬುದು ಅಧಿಕಾರಿಗಳಿಗೆ ತಿಳಿಯದಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಹೋದರೆ ವ್ಯರ್ಥ ಸಾಮೂಹಿಕ ಶೌಚಾಲಯಗಳೇ ಕಾಣ ಸಿಗುತ್ತವೆ. ಸ್ಥಳೀಯ ಮುಖಂಡರು ₹ 5 ಲಕ್ಷದಿಂದ ₹ 10 ಲಕ್ಷ ಅನುದಾನ ಪಡೆದು ಅವಶ್ಯಕತೆ ಮತ್ತು ಬೇಡಿಕೆ ಇಲ್ಲದಿದ್ದರೂ ಸಾಮೂಹಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಬಹುತೇಕ ಕಟ್ಟಡಗಳು ಉದ್ಘಾಟನೆಯನ್ನೇ ಕಂಡಿಲ್ಲ.

ಹಿರಿಯೂರು ಸಮೀಪದ ಎಕೆ ಕಾಲೊನಿ, ಕಟುಗರಹಳ್ಳ, ಗೋಪಾಲಪುರ, ಮಾಂಸ ಮಾರುಕಟ್ಟೆ ಹಿಂಭಾಗದ ಪ್ರದೇಶ, ಮಿರ್ಜಾ ಬಡಾವಣೆ, ಆಜಾದ್ ನಗರ ಪ್ರದೇಶದಲ್ಲಿ ಇಂದಿಗೂ ಶೇ 10 ರಷ್ಟು ಜನ ಶೌಚ ಕ್ರಿಯೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ವೇದಾವತಿ ನದಿಯ ದಂಡೆಯನ್ನು, ಹಳ್ಳದ ತಗ್ಗು ಪ್ರದೇಶವನ್ನು ತಮ್ಮ ನಿತ್ಯ ಕರ್ಮಕ್ಕೆ ಬಳಸುತ್ತಾರೆ.

ಹೊಸದುರ್ಗ ತಾಲ್ಲೂಕಿನ ಐಲಾಪುರ, ಶ್ರೀರಂಗಾಪುರ, ಬಾಗೂರು, ನೀರಗುಂದ, ನಾಗೇನಹಳ್ಳಿ, ದೇವಪುರ, ಹೊನ್ನೇನಹಳ್ಳಿ ಸೇರಿದಂತೆ ಕೆರೆಕಟ್ಟೆ ಸಮೀಪವಿರುವ ಗ್ರಾಮಗಳಲ್ಲಿ ಶೌಚಾಲಯದ ಬಳಕೆ ವಿರಳವಾಗಿದೆ. ‘ಶೌಚಾಲಯ ಬಳಸಲು ಬಹಳ ನೀರು ಬೇಕು. ಅದರ ಅಭಾವದ ಕಾರಣದಿಂದಲೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಿಟ್ ಬೇಗ ತುಂಬುತ್ತದೆ ಎಂಬ ಭಯದಿಂದ ಬಳಸುತ್ತಿಲ್ಲ’ ಎಂದು ಹಳ್ಳಿ ಜನ ಹೇಳುತ್ತಾರೆ.

ಪೂರಕ ಮಾಹಿತಿ: ಸುವರ್ಣಾ ಬಸವರಾಜ್‌, ಕೊಂಡ್ಲಹಳ್ಳಿ ಜಯಪ್ರಕಾಶ್‌, ಸಂತೋಷ್‌ ಎಚ್‌.ಡಿ, ಸಾಂತೇನಹಳ್ಳಿ ಸಂದೇಶ್‌ಗೌಡ, ವೆಂಕಟಚಲಪತಿ. 

ಮೊಳಕಾಲ್ಮುರು ತಾಲ್ಲೂಕಿನ ಶಾಲೆಯೊಂದರ ಶೌಚಾಲಯದ ದುಃಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.