ಚಿತ್ರದುರ್ಗ: ‘ಪ್ರಶಿಕ್ಷಣಾರ್ಥಿಗಳು ಪಠ್ಯ ಬೋಧನೆಯಲ್ಲಿ ರಂಗಭೂಮಿಯ ಕೌಶಲಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು’ ಎಂದು ಶರಣ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಂ.ವೀರೇಶ್ ತಿಳಿಸಿದರು.
ನಗರದ ಬಾಪೂಜಿ ಸಮೂಹ ಸಂಸ್ಥೆ ಕಾಲೇಜು ಆವರಣದಲ್ಲಿ ರಂಗಸೌರಭ ಕಲಾ ಸಂಘದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಈಚೆಗೆ ಆಯೋಜಿಸಿದ್ದ ಬಿ.ಇಡಿ ಪ್ರಶಿಕ್ಷಣಾಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಣಾಮಕಾರಿ ಬೋಧನೆಗೆ ರಂಗಭೂಮಿ ಉತ್ತಮ ಮಾರ್ಗದರ್ಶನವಾಗಿದೆ’ ಎಂದರು.
‘ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಗುರಿಯಾಗಬೇಕು. ದುಶ್ಚಟಗಳಿಂದ ದೂರವಿದ್ದು ಸಾಧನೆಯ ಪಥದತ್ತ ಸಾಗುವ ಮಕ್ಕಳ ಉನ್ನತಿಗೆ ಶ್ರಮಿಸಬೇಕು. ಜಾತಿಮತ ಪಂಥಗಳನ್ನು ತೊರೆದು, ಮೇಲುಕೀಳು ಎಂಬ ಬೇಧ–ಭಾವವಿಲ್ಲದೆ ಪ್ರವಚನದಲ್ಲಿ ತೊಡಗಬೇಕು. ಇದಕ್ಕಾಗಿ ರಂಗಭೂಮಿ ಬಗ್ಗೆ ಅಧ್ಯಯನ ಮಾಡಬೇಕು’ ಎಂದು ಹೇಳಿದರು.
‘ಭಾರತೀಯ ರಂಗ ಪರಂಪರೆ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ. ಸಾಂಸ್ಕೃತಿಕವಾಗಿ ಮನರಂಜನೆ ನೀಡುವ ಜೊತೆಗೆ ಶಿಸ್ತು, ಏಕಾಗ್ರತೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ತಿಳಿಸಿದರು.
ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಪ್ರಶಿಕ್ಷಣಾರ್ಥಿಗಳಿಗೆ ರಂಗ ತರಬೇತಿ ನೀಡಿದರು. ಪ್ರಾಂಶುಪಾಲೆ ಎಂ.ಆರ್.ಜಯಲಕ್ಷ್ಮೀ, ಆಹಾರ ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಕೆ.ಮೋಹನ್‍ಕುಮಾರ್, ಉಪ ಪ್ರಾಂಶುಪಾಲ ಎಚ್.ಎನ್.ಶಿವಕುಮಾರ್, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.