
ಚಿತ್ರದುರ್ಗ: ‘ಕೋಟೆನಾಡು ಬುಡಕಟ್ಟು ಸಂಸ್ಕೃತಿಯ ತವರೂರು. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಈಗಲೂ ಬುಡಕಟ್ಟು ಕಲೆ, ಸಂಸ್ಕೃತಿ ಜೀವಂತವಾಗಿದೆ’ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದರು.
ತಾಲ್ಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದಲ್ಲಿ ಶುಕ್ರವಾರ ನಡೆದ ಸೂರ್ಯಯರಘಟ್ಟ ಸ್ವಾಮಿಯ ಎತ್ತಿನ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರೈತರ ಬದುಕು ಹಸನಾಗಲಿ ಮತ್ತು ಉತ್ತಮ ಮಳೆ ಬೆಳೆಗಾಗಿ ಪ್ರತಿ ವರ್ಷ ಸೂರ್ಯಯರಘಟ್ಟ ಸ್ವಾಮಿ ದೇವರಿಗೆ ಮತ್ತು ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಘಟ್ಟ ಗ್ರಾಮ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿ ಜಾತ್ರೆ ಆಚರಿಸುತ್ತಾರೆ. ತಮ್ಮ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ದೀಪಾವಳಿ ನಂತರ ಈ ಜಾತ್ರೆ ಮಾಡಲಾಗುತ್ತಿದೆ. ದೇವರ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ ಈ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ’ ಎಂದರು.
‘ಇಂದಿನ ಆಧುನಿಕ ಯುಗದಲ್ಲಿಯೂ ತಮ್ಮದೇ ಆದ ವಿಶಿಷ್ಟ ಆಚರಣೆಗಳನ್ನು ಮತ್ತು ಪರಂಪರೆಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವೇ ಆಗಿದೆ. ಪಶುಪಾಲಕರೇ ಹೆಚ್ಚಿರುವ ಈ ಸಮುದಾಯದಲ್ಲಿ ಪಶುಗಳಿಗೆ ವಿಶೇಷವಾಗಿ ದೇವರ ಸ್ಥಾನ ನೀಡಲಾಗುತ್ತದೆ. ಆದ್ದರಿಂದ ಯಾವುದೇ ಹಬ್ಬ ಆಚರಣೆಗಳು ನಡೆಯುವಾಗ ದೇವರ ಎತ್ತುಗಳಿಗೆ ವಿಶೇಷ ಮನ್ನಣೆ ಇರುತ್ತದೆ. ದೇವರ ಎತ್ತುಗಳನ್ನು ಪೂಜನೀಯ ಭಾವನೆಯೊಂದಿಗೆ ನೋಡುವ ಸಂಪ್ರದಾಯವಿದೆ’ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಮ್ಮ, ನಾಗೇಶ್ ಮತ್ತು ಮುಖಂಡರಾದ ಬೋರೇಶ್, ತಿಪ್ಪೇಸ್ವಾಮಿ, ವಿನಾಯಕ, ಜಿ.ಕಾಟಯ್ಯ, ಹಟ್ಟಿ ಯಜಮಾನ ಜಗದೀಶ್, ಕಾಟಯ್ಯ, ದಾಸರ ಪಾಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.