
ಚಿತ್ರದುರ್ಗ: ಜಿಲ್ಲೆಯಾದ್ಯಂತ ಭಾನುವಾರ ತುಳಸಿ ಮಾತೆಯ ಕಲ್ಯಾಣೋತ್ಸವ ‘ತುಳಸಿ ಹಬ್ಬ’ವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಬೆಳಿಗ್ಗೆಯೇ ತುಳಸಿ ಕಟ್ಟೆಗಳನ್ನು ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧತೆ ನಡೆಸಿದ್ದರು.
ಕಿರು ದೀಪಾವಳಿ ಎಂಬ ಹೆಸರಿನಿಂದಲೂ ಈ ಹಬ್ಬವನ್ನು ಆಚರಿಸುವುದು ರೂಢಿಯಾಗಿದೆ. ಸಂಜೆ ತುಳಸಿ ಕಟ್ಟೆಯ ಎದುರು ವರ್ಣಮಯ ರಂಗೋಲಿ ಬಿಸಿ, ತುಳಸಿ–ಧಾತ್ರಿಯೊಂದಿಗೆ (ಬೆಟ್ಟದ ನಲ್ಲಿಕಾಯಿ) ಗಿಡವನ್ನು ಜತೆಗೂಡಿಸಿ, ಶುಭ್ರ ಸೀರೆ–ರವಿಕೆ ಹೊದಿಸುವುದರ ಜತೆ ವಿವಿಧ ಪುಷ್ಪಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು. ಸುತ್ತಲೂ ದೀಪಗಳನ್ನು ಸಾಲಾಗಿ ಇಟ್ಟು ಪೂಜಿಸಿದರು.
ಸ್ತ್ರೀಯರು ಕುಟುಂಬದ ಒಳಿತಿಗಾಗಿ, ಮಕ್ಕಳ ಆರೋಗ್ಯಕ್ಕಾಗಿ ನಿತ್ಯ ತುಳಸಿ ಗಿಡವನ್ನು ಪೂಜಿಸುತ್ತಾರೆ. ಈ ಬಾರಿಯ ಹಬ್ಬವನ್ನು ಮಾಸದ ಉತ್ಥಾನ ದ್ವಾದಶಿ ದಿನವಾದ ಭಾನುವಾರ ಮಹಾವಿಷ್ಣುವಿಗೆ ಷೋಡಶೋಪಚಾರಗಳೊಂದಿಗೆ ವಿಶೇಷ ಪೂಜೆ ಅರ್ಪಿಸಿ, ತುಳಸಿ ಹಬ್ಬವನ್ನು ವ್ರತಾಚರಣೆಯೊಂದಿಗೆ ಮಡಿಯಿಂದ ವಿಶೇಷವಾಗಿ ಆಚರಿಸಿದರು.
ಅವಲಕ್ಕಿ ಸೇರಿದಂತೆ ಖಾದ್ಯಗಳನ್ನು ಅರ್ಪಿಸಿದರು. ಸ್ತ್ರೀಯರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.