ADVERTISEMENT

ಚಿತ್ರದುರ್ಗ| ರಾತ್ರೋರಾತ್ರಿ ರಸ್ತೆ ಉಬ್ಬುಗಳು ಉದ್ಭವ

ಕೆ.ಪಿ.ಓಂಕಾರಮೂರ್ತಿ
Published 29 ಸೆಪ್ಟೆಂಬರ್ 2025, 6:39 IST
Last Updated 29 ಸೆಪ್ಟೆಂಬರ್ 2025, 6:39 IST
ಚಿತ್ರದುರ್ಗದ ಐಯುಡಿಪಿ ಬಡಾವಣೆ ರಸ್ತೆಯಲ್ಲಿ ಹಾಕಿರುವ ಕಾಂಕ್ರಿಟ್ ಉಬ್ಬು
ಚಿತ್ರದುರ್ಗದ ಐಯುಡಿಪಿ ಬಡಾವಣೆ ರಸ್ತೆಯಲ್ಲಿ ಹಾಕಿರುವ ಕಾಂಕ್ರಿಟ್ ಉಬ್ಬು   

ಚಿತ್ರದುರ್ಗ: ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಸಂಚಾರ ಸಮಸ್ಯೆ ದಿನದಿಂದ ಹೆಚ್ಚಾಗುತ್ತಿದೆ. ಯಾವ ರಸ್ತೆಯಲ್ಲೂ ಧೈರ್ಯದಿಂದ ವಾಹನ ಚಲಾಯಿಸಿಕೊಂಡು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.

ವಾಹನಗಳ ವೇಗ ನಿಯಂತ್ರಣದ ಜತೆಗೆ ರಸ್ತೆ ಅಪಘಾತ ತಪ್ಪಿಸಲೆಂದು ನಗರದ ಎಲ್ಲ ರಸ್ತೆಗಳ ಅಲ್ಲಲ್ಲಿ ರಸ್ತೆಉಬ್ಬು ಅಳವಡಿಸಲಾಗಿದೆ. ಆದರೆ ಇವುಗಳನ್ನು ನಿಯಮ ಪ್ರಕಾರ ನಿರ್ಮಿಸದೇ ರಸ್ತೆ ಉಬ್ಬುಗಳಿಂದಲೇ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ.

ಭಾರೀ ತುರ್ತ ಸಮಯದಲ್ಲಿ ವಾಹನ ಚಲಾಯಿಸುವಾಗಲೋ, ಬೀದಿದೀಪ ಕೆಟ್ಟು ಹೋದ ರಸ್ತೆಗಳಲ್ಲಿ, ಕೆಲವೇ ಕ್ಷಣ ರಸ್ತೆಯಿಂದ ದೃಷ್ಟಿ ತೆಗೆದು ಮೈಮರೆತರೂ ಏಕಾಏಕಿ ನಮ್ಮ ವಾಹಗಳನ್ನು ಹಾರಿಸಿಬಿಡುತ್ತವೆ ಈ ಅವೈಜ್ಞಾನಿಕ ಉಬ್ಬುಗಳು. ಸ್ವಲ್ಪ ನಿಯಂತ್ರಣ ತಪ್ಪಿದರು ಸಹ ಅಪಘಾತ ಖಚಿತ ಎನ್ನುವ ಸ್ಥಿತಿ ನಗರದಲ್ಲಿದೆ.

ADVERTISEMENT

ನಗರದ ಯಾವುದೇ ಬಡಾವಣೆ, ರಸ್ತೆಗೆ ಕಾಲಿಟ್ಟಿರು ಸಹ ಅವೈಜ್ಞಾನಿಕ ಉಬ್ಬುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಸಲಿಗೆ ಈ ರೀತಿ ಅವೈಜ್ಞಾನಿಕ ಉಬ್ಬುಗಳನ್ನು ಸ್ಥಳೀಯ ಸಂಸ್ಥೆ ಅಥವಾ ಸಂಚಾರಿ ಪೊಲೀಸರ ಸೂಚನೆ ಮೇಲೆ ಎಲ್ಲಿಯೂ ಹಾಕಿಲ್ಲ. ರಸ್ತೆ ನಿರ್ಮಾಣದ ವೇಳೆ ಜನರೇ ನಮ್ಮ ಮನೆ ಮುಂದೆಯೂ ಉಬ್ಬು ಹಾಕಿ, ಅಂಗಡಿ ಮುಂದೆ ಜನ ನಿಲ್ಲುವಂತಾಗ್ಲಿ ಎಂದು ಅಲ್ಲೊಂದು ಉಬ್ಬು, ಹೀಗೆ ಅಲ್ಲಲ್ಲಿ ಒತ್ತಡ ಹಾಕಿ ರಸ್ತೆ ಉಬ್ಬುಗಳನ್ನು ಹಾಕಿಸಿಕೊಂಡಿದ್ದಾರೆ. ಇವೆಲ್ಲವೂ ಅಕ್ರಮವಾಗಿ ಸ್ಥಳೀಯ ನಿವಾಸಿಗಳು ಸ್ಥಾಪಿಸಿರುವ ಉಬ್ಬುಗಳು.

ನಗರದಲ್ಲಿ ದಿನೇ ದಿನೆ ಜನಸಂಖ್ಯೆಯೊಂದಿಗೆ ವಾಹನಗಳ ದಟ್ಟಣೆ ಹೆಚ್ಚಿದೆ. ಅದರಲ್ಲೂ ಬಿ.ಡಿ.ರಸ್ತೆ, ಜೆಸಿಆರ್, ಮೇದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು, ಈ ಹಿನ್ನೆಲೆಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಅಲ್ಲಲ್ಲಿ ಅಳವಡಿಸಲಾಗಿದ್ದ ಉಬ್ಬುಗಳನ್ನು ಹಾಕಲಾಗಿದೆ. ಆದರೆ ಅವೈಜ್ಞಾನಿಕವಾಗಿ ಹಾಕಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಕೆಲವು ಕಡೆ ಕಾಂಕ್ರೀಟ್, ರಬ್ಬರ್‌, ಫೈಬರ್ ಮಿಶ್ರಿತ ಉಬ್ಬುಗಳನ್ನು ಹಾಕಲಾಗಿದೆ. ಇವುಗಳಲ್ಲಿ ಚೆನ್ನಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಉಳಿದ ಎಲ್ಲ ಕಡೆ ಕಿತ್ತು ಬಂದಿವೆ. ಇನ್ನು ಕೆಲವನ್ನು ಪುಂಡರು ಕಿತ್ತು ಬಿಸಾಡಿದ್ದಾರೆ.

ಜೆಸಿಆರ್‌ ಮುಖ್ಯ ರಸ್ತೆಯಲ್ಲಿ ಸಿಸಿ ರಸ್ತೆಯ ಉಬ್ಬು ಹಾಕಿದ ಜಾಗಗಳು ಗುಂಡಿಗಳಾಗಿವೆ. ಬಡಾವಣೆಗಳ ರಸ್ತೆಗಳ ಸ್ಥಿತಿ ಹೇಳ ತೀರದಾಗಿದೆ. ರಾತ್ರೋರಾತ್ರಿ ರಸ್ತೆಗೆ ಕಾಂಕ್ರಿಟ್‌ ಹಾಕಿ ಸೇತುವೆ ಮಾದರಿಯಲ್ಲಿ ಉಬ್ಬುಗಳನ್ನು ಸ್ಥಳೀಯರೇ ಹಾಕುತ್ತಿದ್ದಾರೆ. ಕಾರು ಚಾಲಕರು, ಬೈಕ್ ಸವಾರರು ಇವರ ಕಾಟಕ್ಕೆ ಹೈರಾಣಾಗಿದ್ದಾರೆ. ಈ ರೀತಿಯ ಉಬ್ಬುಗಳಿಂದ ಸಮಸ್ಯೆ ತಪ್ಪುವ ಬದಲು ಸಮಸ್ಯೆ ಸೃಷ್ಟಿಯಾಗುತ್ತಿದೆ.

ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ)ನ ಎಲ್ಲಾ ಮಾನದಂಡ, ನಿಯಮಗಳನ್ನು ಗಾಳಿಗೆ ತೂರಿ, ನಗರದ ಪ್ರತೀ ಅಡ್ಡ ರಸ್ತೆ, ಮುಖ್ಯರಸ್ತೆ, ಮನೆ ಮುಂದಿನ ರಸ್ತೆ, ಓಣಿಗಳಲ್ಲಿಯೂ ಬೆಂಗಳೂರಲ್ಲಿ ರಸ್ತೆ ಉಬ್ಬುಗಳು ಕಾಣಸಿಗುತ್ತವೆ.

ಇದರಿಂದಾಗಿ ರಾತ್ರಿ ಸಮಯದಲ್ಲಿ ಸಂಚರಿಸುವ ಸವಾರರು ಅದರಲ್ಲಿಯೂ ಬೈಕ್‌, ಸ್ಕೂಟರ್ ಸವಾರರು ಉಬ್ಬುಗಳನ್ನು ಗುರುತಿಸಲಾಗದೆ, ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ದಿಢೀರ್‌ ಎದುರಾಗುವ ಉಬ್ಬುಗಳು ಹಲವು ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿವೆ. ಇನ್ನೇನು ಹತ್ತಿರ ಹತ್ತಿರ ಬರುವಾಗ ರಸ್ತೆಯ ಉಬ್ಬು ಗೋಚರವಾಗುವುದರಿಂದ ಏಕಾಏಕಿ ಬ್ರೇಕ್‌ ಹಾಕಿದಾಗ ಆಗುವ ಅನಾಹುತಗಳನ್ನು ಊಹಿಸುವುದೂ ಅಸಾಧ್ಯ.

ಚಿತ್ರದುರ್ಗದ ಕೆಳಗೋಟೆ ಸರ್ವೀಸ್ ರಸ್ತೆಯಲ್ಲಿ ಉಬ್ಬಿಗೆ ಹೊಂದಿಕೊಂಡಿರುವ ಗುಂಡಿಗಳು

ಇನ್ನಾದರೂ ನಗರಸಭೆ ಎಚ್ಚೆತ್ತು ರಸ್ತೆ ಸುರಕ್ಷತೆಗಾಗಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು. ಜತೆಗೆ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳಿಗೆ ಬಣ್ಣದ ಮಾರ್ಕಿಂಗ್‌, ರ‍್ಯಾಂಬ್ಲರ್‌ ಸ್ಟ್ರಿಪ್‌ಗಳಿಗೆ ಥರ್ಮೋ ಪ್ಲಾಸ್ಟಿಕ್‌ ಪೇಂಟಿಂಗ್‌, ಜಂಕ್ಷನ್‌, ತಿರುವು ಮಾರ್ಗಗಳನ್ನು ಗುರುತಿಸಬೇಕಿದೆ.

ರಸ್ತೆಗಳಲ್ಲಿ ಜನರೇ ಕಾಂಕ್ರಿಟ್‌ ಉಬ್ಬುಗಳನ್ನು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರ ಪರಿಶೀಲಿಸಿ ಅವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗುತ್ತದೆ.
ಎಸ್‌.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ಚಳ್ಳಕೆರೆಯ ಗೊರಲಕಟ್ಟೆ ಗ್ರಾಮದ ರಸ್ತೆಯಲ್ಲಿ ಅವೈಜ್ಞಾನಿಕ ಉಬ್ಬು
ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು ಹೆಚ್ಚಾಗಿವೆ. ಮೇದೇಹಳ್ಳಿ ರಸ್ತೆಯಲ್ಲಿ ಉಬ್ಬುಗಳ ಮುಂದೆ ಗುಂಡಿಗಳು ಸೃಷ್ಠಿಯಾಗಿವೆ. ಬೈಕ್ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕೆ.ಎಂ.ಜಗದೀಶ್ ನಿವಾಸಿ ಚಿತ್ರದುರ್ಗ
Quote - ನಗರಸಭೆಯವರು ಯಾರದ್ದೋ ಒತ್ತಡಕ್ಕೆ ಮಣಿದು ನಿರ್ಮಿಸಿರುವ ರಸ್ತೆ ಡುಬ್ಬಗಳನ್ನು ತೆರವುಗೊಳಿಸಬೇಕು. ಇಲ್ಲವೇ ಇವುಗಳನ್ನು ಹಾಕಿದ ಕಡೆದ ಕಡೆ ಎಚ್ಚರಿಕೆ ಫಲಕ ಬಿಳಿಯ ಪಟ್ಟಿ ವ್ಯವಸ್ಥೆ ಮಾಡಬೇಕು.
ಎಂ.ಓ.ಮಂಜುನಾಥ್ ಮಾಜಿ ಸದಸ್ಯ ಎಪಿಎಂಸಿ
ರಸ್ತೆ ಉಬ್ಬು ನಿಯಮ ಪ್ರಕಾರ ಹೇಗಿರಬೇಕು?
ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ನಿಗದಿಪಡಿಸಿದ ಮಾನದಂಡಗಳ ಪ್ರಕಾರವೇ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕಾಗುತ್ತದೆ. ಉಬ್ಬುಗಳು 17 ಮೀಟರ್‌ ಅಗಲ 3.7 ಮಿಟರ್ ಉದ್ದ ಹಾಗೂ 0.10 ಮೀಟರ್ ಎತ್ತರ ಹಾಗೂ ವಾಹನಗಳ ಚಕ್ರಗಳ ಅಗಲಕ್ಕಿಂತ ಹೆಚ್ಚಿಗೆ ಇರಬೇಕು ಎಂಬ ನಿಯಮ ಇದೆ. ಅಲ್ಲದೆ ಈ ಉಬ್ಬುಗಳ ಮೇಲೆ ಕಪ್ಪು ಬಿಳಿ ಹಾಗೂ ಕತ್ತಲಿನಲ್ಲಿ ಸ್ವಯಂ ಪ್ರತಿಫಲನಗೊಳ್ಳುವ ಬಣ್ಣ ಬಳಸಿ ಪಟ್ಟಿ ಬಳಿದಿರಬೇಕು. ರಾತ್ರಿಯಲ್ಲಿ ಸ್ಪಷ್ಟವಾಗಿ ಕಾಣಿಸುವ ಸಲುವಾಗಿ ಕ್ಯಾಟ್‌ ಐಗಳು ಇರಬೇಕು ಇರಬೇಕು ಎಂಬ ನಿಯಮ ಇದೆ. ಇಷ್ಟೇ ಅಲ್ಲದೆ ರಸ್ತೆ ಉಬ್ಬು ಹಾಕಿರುವ 40 ಮೀಟರ್‌ ಮೊದಲೇ ಮುಂದೆ ರಸ್ತೆ ಉಬ್ಬು ಇದೆ ಎಂಬ ಎಚ್ಚರಿಕೆಯ ಫಲಕ ರಸ್ತೆ ಬದಿಯಲ್ಲಿ ಇರಬೇಕು.
ರಸ್ತೆ ಉಬ್ಬು ನಿರ್ಮಾಣಕ್ಕೆ ಎಲ್ಲೆಲ್ಲಿ ಅವಕಾಶ?
ಐಆರ್‌ಸಿ ನಿಗದಿಪಡಿಸಿದ ಮಾನದಂಡದ ಪ್ರಕಾರ ಚಿಕ್ಕ ರಸ್ತೆಗಳಲ್ಲಿ ಉಬ್ಬು ನಿರ್ಮಾಣ ಮಾಡುವುದಾದರೆ ಪರಸ್ಪರ ಉಖಾಮುಖಿಯಾಗುವ ಚಿಕ್ಕ ರಸ್ತೆಗಳಲ್ಲಿ ಅಥವಾ ಕಡಿಮೆ ವಾಹನ ಓಡಾಟದ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ವಿಲೀನವಾಗುವ ರಸ್ತೆಗಳಲ್ಲಿ ಹಾಕಬಹುದಾಗಿದೆ. ಅಲ್ಲದೆ ಜನವಸತಿ ಪ್ರದೇಶದಲ್ಲಿರುವ ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರದೇಶಗಳಲ್ಲಿ ವಾಹನಗಳ ವೇಗದಿಂದ ಅಪಘಾತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಉಬ್ಬು ನಿರ್ಮಾಣ ಮಾಡಬಹುದು. ಇನ್ನು ಚಿಕ್ಕ ಹಾಗೂ ಹಳೆಯ ಸೇತುವೆಗೆ ಸಂಪರ್ಕ ಹೊಂದುವ ರಸ್ತೆಗಳಲ್ಲಿ ರೈಲ್ವೆ ಲೆವಲ್‌ ಕ್ರಾಸಿಂಗ್ ಹತ್ತಿರ ತೀವ್ರ ತಿರುವು ಇರುವ ಮುಂದಿನ ರಸ್ತೆ ಸರಿಯಾಗಿ ಕಾಣಿಸದಿರುವ ರಸ್ತೆಗಳಲ್ಲಿ ಹಾಗೂ ಗಂಟೆಗೆ 25 ಕಿ.ಮೀ. ವೇಗವಾಗಿ ಚಲಿಸಬಹುದಾದ ರಸ್ತೆಗಳಲ್ಲಿ ಮಾತ್ರವೇ ಉಬ್ಬುಗಳನ್ನು ನಿರ್ಮಿಸಬಹುದು.

ರಸ್ತೆಯಲ್ಲಿ ವಾಹನ ಚಾಲಕರಿಗೆ ಕಿರಿ ಕಿರಿ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ವಾಹನ ನಿಲುಗಡೆ ಮತ್ತು ಅಪಘಾತ ಪ್ರಕರಣ ತಡೆಯುವ ಸಲುವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲೆ ಮುಖ್ಯ ರಸ್ತೆ ಸಿಸಿ ರಸ್ತೆಗಳನ್ನು ಅಗೆದು ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ವಾಹನ ಚಾಲಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ನನ್ನಿವಾಳ ಗೊರ್ಲಕಟ್ಟೆ ಕುರುಡಿಹಳ್ಳಿ ಲಂಬಾಣಿಹಟ್ಟಿ ಮೀರಾಸಾಬಿಹಳ್ಳಿ ರಾಮಜೋಗಿಹಳ್ಳಿ ರೆಡ್ಡಿಹಳ್ಳಿ ಚಿಕ್ಕೇನಹಳ್ಳಿ ದೇವರಮರಿಕುಂಟೆ ದ್ಯಾವರನಹಳ್ಳಿ ಪುರ್ಲೆಹಳ್ಳಿ ದೊಡ್ಡೇರಿ ನೇರಲಗುಂಟೆ ಪಿ.ಮಹದೇವಪುರ ಪರಶುರಾಂಪುರ ಕೆಂಚವೀರನಹಳ್ಳಿ ಗ್ರಾಮದ ಡಾಂಬರ್‌ ಸಿಸಿರಸ್ತೆ ಮತ್ತು ನಗರಪ್ರದೇಶದ ಗಾಂಧಿನಗರ ಶಾಂತಿನಗರ ಅಂಬೇಡ್ಕರ್‌ನಗರ ವೆಂಕಟೇಶ್ವರನಗರ ಸೂಜಿ ಮಲ್ಲೇಶ್ವರನಗರ ಜನತಾ ಕಾಲನಿ ಮುಂತಾದ ವಾರ್ಡ್‌ನಲ್ಲಿ 50 ಮೀಟರ್‌ಗೊಂದು ಅವೈಜ್ಞಾನಿಕವಾಗಿ ರಸ್ತೆ ಡುಬ್ಬು ನಿರ್ಮಿಸಲಾಗಿದೆ.

ರಸ್ತೆ ನಿರ್ಮಾಣದ ವೇಳೆ ಯಾವುದೇ ಡುಬ್ಬುಗಳು ಇರುವುದಿಲ್ಲ. ಆದರೆ ಕೆಲ ದಿನಕ್ಕೆ ಪ್ರತ್ಯಕ್ಷವಾಗಿ ಬಿಡುತ್ತವೆ. ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮೈನ್ಸ್‌ ಲಾರಿ ಓಡಾಡುತ್ತಿರುವ ಕಾರಣ ಪಾವಗಡ ರಸ್ತೆ ರೈಲ್ವೇಗೇಟ್‌ ಬಳಿ ಮತ್ತು ರಹೀಂನಗರದಲ್ಲಿ ದೊಡ್ಡ ದೊಡ್ಡ ರಸ್ತೆ ಉಬ್ಬು ನಿರ್ಮಿಸಲಾಗಿದೆ. ಇದರಿಂದ ದ್ವಿಚಕ್ರ ವಾಹನಗಳು ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿವೆ.

ನಿಯಮ ಉಲ್ಲಂಘಿಸಿ ರಸ್ತೆ ಉಬ್ಬು

ಬಿ.ಸುವರ್ಣ ಬಸವರಾಜ್‌

ಹಿರಿಯೂರು: ನಗರದ ಪ್ರಧಾನ ರಸ್ತೆಯಲ್ಲಿ ಕಾಣದ ರಸ್ತೆ ಉಬ್ಬುಗಳನ್ನು ನಿವಾಸಿಗಳ ಒತ್ತಡಕ್ಕೆ ಮಣಿದು ಬಡಾವಣೆಗಳ ಚಿಕ್ಕಚಿಕ್ಕ ರಸ್ತೆಗಳಲ್ಲಿ ನಿರ್ಮಿಸಿರುವ ಕಾರಣ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಪ್ರಧಾನ ರಸ್ತೆಯಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮೂರು ಕಡೆ ಹಾಗೂ ಹುಳಿಯಾರು ರಸ್ತೆಯಲ್ಲಿ ರಾಷ್ಟ್ರೀಯ ಅಕಾಡೆಮಿ ಶಾಲೆ ತಿರುವಿನಲ್ಲಿ ಉಬ್ಬು ಹಾಕಲಾಗಿದೆ. ಆದರೆ ಬಡಾವಣೆಗಳ ಒಳಗಿನ ರಸ್ತೆಗಳಲ್ಲಿ ಹೊಸದಾಗಿ ರಸ್ತೆ ನಿರ್ಮಿಸುವಾಗ ಎಲ್ಲೆಂದರಲ್ಲಿ ರಸ್ತೆ ಉಬ್ಬು ನಿರ್ಮಿಸಿರುವುದು ಅವೈಜ್ಞಾನಿಕ ಎಂಬ ಟೀಕೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ವಾಣಿವಿಲಾಸ ಬಲನಾಲೆಯಿಂದ ಆರ್‌ಎನ್‌ಎಸ್‌ ಬಡಾವಣೆ ಸಾಯಿ ಲೇಔಟ್ ಗೆ ಹೋಗುವ ರಸ್ತೆಯಲ್ಲಿ ಕೇವಲ 200 ಮೀಟರ್‌ ಅಂತರದಲ್ಲಿ ಐದು ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.

ತಮ್ಮ ಮನೆಗಳ ಮುಂದೆ ರಸ್ತೆ ಡುಬ್ಬು ಹಾಕಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತ ಎಂದು ನಿವಾಸಿಗಳು ಭಾವಿಸಿದಂತಿದೆ. ಜಯನಗರ ಮತ್ತು ಬಸವೇಶ್ವರ ಬಡಾವಣೆಗಳಲ್ಲಿಯೂ ಇಂತಹದ್ದೇ ಸ್ಥಿತಿ ಇದೆ. ರಸ್ತೆ ಹಾಳಾಗಿರುವ ಕಾರಣ ಇವುಗಳು ಕೂಡ ಅಸ್ಥಿತ್ವ ಕಳೆದುಕೊಂಡಿವೆ. ವಾಟರ್‌ ಟ್ಯಾಂಕ್‌ ರಸ್ತೆಯಲ್ಲಿ ಎರಡು ಕಡೆ ವಲ್ಲಭಬಾಯಿ ಪಟೇಲ್ ರಸ್ತೆಯಲ್ಲಿ ಎರಡು ಕಡೆ ಇಂತಹ ಅವೈಜ್ಞಾನಿಕ ಉಬ್ಬುಗಳನ್ನು ಕಾಣಬಹುದು. ರಸ್ತೆ ಉಬ್ಬು ಇರುವ ಬಗ್ಗೆ ಫಲಕ ಅಳವಡಿಸದಿರುವುದು ಉಬ್ಬು ಇರುವ ಕಡೆ ಬಿಳಿಯ ಬಣ್ಣದ ಪಟ್ಟಿ ಹಾಕದಿರುವುದು ವಾಹನಗಳ ಅಪಘಾತಕ್ಕೆ ಹಾದಿ ಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.