ಚಿತ್ರದುರ್ಗ: ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾದ ಕಾನೂನು ರೂಪಿಸಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಬುಧವಾರ ಕರೆ ನೀಡಿದ ಅಖಿಲ ಭಾರತ ಮುಷ್ಕರಕ್ಕೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.
ಸಂಯುಕ್ತ ಹೋರಾಟ ಸಮಿತಿ, ಸಿಪಿಐ, ಸಿಐಟಿಯು, ಆಶಾ ಕಾರ್ಯಕರ್ತೆರು, ಬಿಸಿಯೂಟ ಕಾರ್ಯಕರ್ತೆಯರು ನಗರದ ಯೂನ್‌ಯನ್ ಪಾರ್ಕ್‌ನಿಂದ ಒನಕೆ ಓಬವ್ವ ಸರ್ಕಲ್‌ವರೆಗೂ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗಿಂತ ಹೆಚ್ಚಳ ಮಾಡಬಾರದು. ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮವನ್ನು ತಕ್ಷಣವೇ ಜಾರಿಗೊಳಿಸಬೇಕು. ಕಾರ್ಮಿಕರ ನೌಕರಿಯನ್ನು ಕಾಯಂಗೊಳಿಸಬೇಕು. ಕನಿಷ್ಠ ತಿಂಗಳಿಗೆ ₹ 36,000 ವೇತನ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
‘ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ. ಕಾರ್ಮಿಕರ ಸುರಕ್ಷತೆ, ನೌಕರಿ ಭದ್ರತೆಯನ್ನು ಕಡೆಗಣಿಸಿದೆ. ಶೇ 70ರಷ್ಟು ಕಾರ್ಮಿಕರು ಈ ಕಾರ್ಮಿಕ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ನೀತಿಗಳು ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿವೆ. ಕಾರ್ಮಿಕರ ವೇತನ, ಮುಷ್ಕರ, ಹೋರಾಟ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಇಂತಹ ನೀತಿಗಳನ್ನು ಒಪ್ಪಲು ಸಾಧ್ಯವಿಲ್ಲ’ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪಿಂಚಣಿಯನ್ನೇ ಮುಂದುವರಿಸಬೇಕು. ಇಎಸ್ಐ, ಪಿ.ಎಫ್. ಬೋನಸ್ ಪಾವತಿಗಿರುವ ಮಿತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಮಾಡಬೇಕು. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಕಾರ್ಮಿಕರು ಕಂಗಾಲಾಗಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶಿಕ್ಷಣ, ಆಹಾರ, ಔಷಧ, ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು ಎಂದು ಒತ್ತಾಯಿಸಿದರು.
ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ₹9,000 ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ₹600ಕ್ಕೆ ಹೆಚ್ಚಿಸಬೇಕು. ದುಡಿಮೆಯ ದಿನಗಳನ್ನು 200ಕ್ಕೆ ಏರಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯ, ವಸತಿ ಒದಗಿಸಬೇಕು. ರೈತ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ಯಾದವ ರೆಡ್ಡಿ, ಹಂಪಯ್ಯನಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಸಿಪಿಐ ಮುಖಂಡ ಸುರೇಶ್ ಬಾಬು, ಕರ್ನಾಟಕ ಜನಶಕ್ತಿ ಮುಖಂಡ ಕುಮಾರ್ ಸಮತಳ, ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ಎಐಯುಟಿಯುಸಿ ಮುಖಂಡ ರವಿಕುಮಾರ್, ಗಿರಿಜಮ್ಮ, ಮಂಜುಳಮ್ಮ, ನಾಗವೇಣಿ ಇದ್ದರು.
ಅಖಿಲ ಭಾರತ ಮುಷ್ಕರಕ್ಕೆ ಸಂಘಟನೆಗಳ ಬೆಂಬಲ ಬಂಡವಾಳಶಾಹಿಗಳ ಪರ ನಿಲ್ಲುತ್ತಿರುವ ಕೇಂದ್ರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.