ಹೊಸದುರ್ಗ: ಪಟ್ಟಣದ ವಿವಿದೆಡೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿರುವ ಕಾರಣ ಮಳಿಗೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ.
ಪಟ್ಟಣ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಪುರಸಭೆಗೆ, ಕ್ರೀಡಾ ಇಲಾಖೆಗೆ, ಎಪಿಎಂಸಿ ವ್ಯಾಪ್ತಿಗೆ ಸೇರಿದ ಮಳಿಗೆಗಳು ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಇಲ್ಲಿಯವರೆಗೂ ಹರಾಜು ಹಾಕಿಲ್ಲ. ಮಳಿಗೆಗಳ ನಿರ್ಮಾಣ ಮಾಡುವಾಗ ಅಧಿಕಾರಿಗಳಿಗೆ ಇದ್ದ ಉತ್ಸಾಹ ನಿರ್ವಹಣೆಯಲ್ಲಿ ಕಾಣುತ್ತಿಲ್ಲ.
ಕ್ರೀಡಾ ಇಲಾಖೆಗೆ ಸೇರಿದ ವಾಣಿಜ್ಯ ಮಳಿಗೆಗಳಂತೂ ಅವ್ಯವಸ್ಥೆಯಿಂದ ಕೂಡಿವೆ. 44 ಮಳಿಗೆಗಳಿದ್ದು, ಇಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಮಳಿಗೆಗಳು ಬಣ್ಣ ಕಾಣದೆ ಎಷ್ಟೋ ವರ್ಷಗಳೇ ಆಗಿವೆ. ಇನ್ನೂ ಮಳೆ ಬಂದಾಗಲಂತೂ ಇಲ್ಲಿ ಬಾಡಿಗೆ ಇರುವವರ ಅವಸ್ಥೆ ಹೇಳತೀರದು. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಖಾಸಗಿ ಬಸ್ ನಿಲ್ದಾಣದ ಸಮೀಪ ಪುರಸಭೆ ವತಿಯಿಂದ ನಗರೋತ್ಥಾನ ಯೋಜನೆಯಡಿ ₹1.18 ಕೋಟಿ ವೆಚ್ಚದಲ್ಲಿ 21 ಮಳಿಗೆಗಳನ್ನು ನಿರ್ಮಿಸಲಾಗಿದೆ. ಜುಲೈ 2024ರಂದು ಉದ್ಘಾಟಿಸಿದ್ದರೂ, ಹರಾಜು ಪ್ರಕ್ರಿಯೆ ಮಾತ್ರ ನಡೆದಿಲ್ಲ. ಮಳಿಗೆಗಳ ಬಾಗಿಲಿಗೆ ಬೀಗ ಇಲ್ಲ. ಕುಡುಕರ ತಾಣವಾಗಿದೆ. ಅಲ್ಲಲ್ಲಿ ಕಸದ ರಾಶಿಯಿದೆ. ಶೌಚಾಲಯ ನಿರ್ಮಿಸಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಮಳಿಗೆಗಳ ನಿರ್ಮಾಣ ಮಾಡಿದರೆ, ಅದರ ನಿರ್ವಹಣೆ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆಯಿದೆ.
ʼಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ತಿಮ್ಮರಾಜು ಅವರು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮಳಿಗೆ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದರು. ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಮಳಿಗೆಗಳನ್ನು ಹರಾಜಿನಲ್ಲಿ ಪಡೆಯಲು ಉತ್ಸುಕರಾಗಿದ್ದೇವೆ. ಆದರೆ ಪುರಸಭೆ ವತಿಯಿಂದ ಪ್ರತಿಕ್ರಿಯೆ ದೊರೆತಿಲ್ಲ. ಹರಾಜು ಪ್ರಕ್ರಿಯೆ ನಡೆದಿಲ್ಲ, ಜಿಲ್ಲಾಧಿಕಾರಿಗಳ ಅನುಮತಿ ಬೇಕು ಎಂಬುದಾಗಿ ನೀರಸ ಪ್ರತಿಕ್ರಿಯೆ ನೀಡುತ್ತಾರೆ’ ಎಂದು ವ್ಯಾಪಾರಸ್ಥ ಕುಮಾರ್ ಬೇಸರ ವ್ಯಕ್ತಪಡಿಸಿದರು.ʼ
ಎಪಿಎಂಸಿ ಮಳಿಗೆಗಳು: ಪಟ್ಟಣದ ಕಲ್ಲೇಶ್ವರ ಬಡಾವಣೆಯಲ್ಲಿ ಎಪಿಎಂಸಿ ವ್ಯಾಪ್ತಿಯಲ್ಲಿ ₹75 ಲಕ್ಷ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಿದ್ದು, ಮಾರ್ಚ್ 2024 ರಂದು ಉದ್ಘಾಟನೆ ಮಾಡಿದ್ದರೂ ಬಾಡಿಗೆಗೆ ಮಾತ್ರ ನೀಡಿಲ್ಲ. ಹೀಗಾಗಿ ಬರುವ ಬಾಡಿಗೆಗೂ ಕತ್ತರಿ ಬಿದ್ದಿದೆ.
'ಮಳಿಗೆ ಬಾಡಿಗೆ ಪಡೆದವರಿಗೆ ಮೂಲಸೌಕರ್ಯಗಳಾದ ಶೌಚಾಲಯ ಹಾಗೂ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಈಗಾಗಲೇ ಸ್ಥಳ ಗುರುತಿಸಿ, ನೀಲಿ ನಕ್ಷೆ ತಯಾರಿಸಲಾಗಿದೆ. ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಹಾಯಕ ಯುವಜನ ಕ್ರೀಡಾಧಿಕಾರಿ ಮಹಾಂತೇಶ್ ಮಾಹಿತಿ ನೀಡಿದರು.
‘ಪುರಸಭೆ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಮಳಿಗೆಗಳ ಹರಾಜು ನಡೆಯುವವರೆಗೂ ಬೀಗ ಹಾಕುವ ವ್ಯವಸ್ಥೆ ಮಾಡಬೇಕು. ಮಳಿಗೆಯಲ್ಲಿಯೇ ಮಲಗುತ್ತಿದ್ದಾರೆ. ರಾತ್ರಿ ವೇಳೆ ಕುಡುಕರ ಮಾಯವಾಗಿರುತ್ತದೆ. ಮಳಿಗೆ ಒಳಗೆ ಕಸದ ರಾಶಿಯಿದೆ. ದುರ್ವಾಸನೆ ಸುತ್ತಮುತ್ತಲೂ ಹರಡಿದೆ’ ಎಂದು ವ್ಯಾಪಾರಿ ಶಂಕರಪ್ಪ ಒತ್ತಾಯಿಸಿದರು.
ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿರುವ ಮಳಿಗೆಗಳ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಶೀಘ್ರದಲ್ಲಿಯೇ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಸ್ವಚ್ಛತೆಗೂ ಆದ್ಯತೆ ನೀಡಲಾಗುವುದುಜಿ.ಎನ್. ಕುಮಾರ್ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.