ADVERTISEMENT

ನುರಿತ ಸಂಸದೀಯ ಪಟು ಇನ್ನಿಲ್ಲ

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕಂಬನಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 16:30 IST
Last Updated 12 ನವೆಂಬರ್ 2018, 16:30 IST
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಅನಂತಕುಮಾರ್‌ ಅವರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪುಷ್ಪನಮನ ಸಲ್ಲಿಸಿದರು.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಅನಂತಕುಮಾರ್‌ ಅವರಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪುಷ್ಪನಮನ ಸಲ್ಲಿಸಿದರು.   

ಚಿತ್ರದುರ್ಗ: ‘ಲೋಕಸಭೆಗೆ ಆರು ಬಾರಿ ಆಯ್ಕೆಯಾಗಿದ್ದ ಅನಂತಕುಮಾರ್‌ ನುರಿತ ಸಂಸದೀಯ ಪಟುವಾಗಿದ್ದರು. ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಮುಜುಗುರ ಉಂಟಾಗದಂತೆ ಎಚ್ಚರ ವಹಿಸಿದ್ದರು. ದಕ್ಷ ಆಡಳಿತಗಾರ, ಶೇಷ್ಠ ಸಂಸದೀಯ ಪಟು ಇಲ್ಲದ ಪಕ್ಷವನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ...’

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಅನಂತಕುಮಾರ್‌ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾಗ ಪಕ್ಷದ ಕಾರ್ಯಕರ್ತರ ಕಣ್ಣುಗಳು ಒದ್ದೆಯಾಗಿದ್ದವು. ಭಾರವಾದ ಮನಸ್ಸಿನಿಂದ ಮೌನಕ್ಕೆ ಶರಣಾಗಿದ್ದವರನ್ನು ಹಿರಿಯ ನಾಯಕನ ಅಕಾಲಿಕ ಮರಣ ಕಾಡುತ್ತಿತ್ತು.

ವೆಂಕಯ್ಯನಾಯ್ಡು ಅವರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಾಗ ಸಂಸದೀಯ ಖಾತೆ ನಿರ್ವಹಿಸುವುದು ಕಷ್ಟವಾಗಿತ್ತು. ಆಗ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅನಂತಕುಮಾರ್. ಎಲ್ಲ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ಘನತೆಯನ್ನು ಹೆಚ್ಚಿಸಿದರು ಎಂದರು.

ADVERTISEMENT

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕ್ರಿಯಾಶೀಲ ನಾಯಕರಾಗಿದ್ದ ಅನಂತಕುಮಾರ್‌, ಬಿಜೆಪಿಯ ನೇತೃತ್ವ ವಹಿಸಿದ್ದಾಗ ರಾಜ್ಯದಲ್ಲಿ ಪಕ್ಷ ಸಂಕಷ್ಟ ಎದುರಿಸುತ್ತಿತ್ತು. ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ರಾಜ್ಯದಲ್ಲಿ ಬಿಜೆಪಿ ಕಟ್ಟಿದರು. ಚಿಕ್ಕ ವಯಸ್ಸಿನಲ್ಲಿಯೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು ಎಂದು ನೆನಪು ಮಾಡಿಕೊಂಡರು.

ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್‌, ಅತ್ಯುತ್ತಮ ವಸತಿ ಯೋಜನೆ ರೂಪಿಸಿದರು. ಕೊಳಚೆ ಪ್ರದೇಶದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರು. ಎಲ್‌.ಕೆ. ಅಡ್ವಾಣಿ ಅವರ ಮಾರ್ಗದರ್ಶನದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದರು ಎಂದರು.

ಮುಂಗಾರು ಹಂಗಾಮಿನಲ್ಲಿ ಉಂಟಾಗುತ್ತಿದ್ದ ರಸಗೊಬ್ಬರ ಕೊರತೆಯನ್ನು ನಿವಾರಿಸಿದರು. ಯೂರಿಯಾ ಗೊಬ್ಬರ ಎಲ್ಲ ರೈತರಿಗೂ ಸುಲಭವಾಗಿ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸಿದರು. ಬಡವರಿಗೆ ತುಟ್ಟಿಯಾಗಿದ್ದ ಹೃದಯದ ಸ್ಟಂಟ್‌ಗಳ ಬೆಲೆ ಇಳಿಕೆಯಲ್ಲಿ ಇವರ ಪಾತ್ರವಿದೆ. ಜನರಿಕ್‌ ಔಷಧ ನೀತಿ ಅನುಷ್ಠಾನದಲ್ಲಿಯೂ ಇವರ ಶ್ರಮವಿದೆ ಎಂದು ಸ್ಮರಿಸಿದರು.

ವಿಭಾಗೀಯ ಸಹ ಪ್ರಮುಖ ಜಿ.ಎಂ.ಸುರೇಶ್‌, ‘36 ವರ್ಷಗಳಿಂದ ಅನಂತಕುಮಾರ್‌ ಜೊತೆ ಒಡನಾಟವಿತ್ತು. ಎಬಿವಿಪಿ ನಾಯಕತ್ವ ವಹಿಸಿಕೊಂಡ ಸಂದರ್ಭದಿಂದಲೂ ಚಿರಪರಿಚಿತರು. ಪ್ಲಾಸ್ಟಿಕ್‌ ಚಪ್ಪಲಿ, ಜುಬ್ಬಾ ಧರಿಸುತ್ತಿದ್ದ ಅವರು ತುಂಬಾ ಸರಳವಾಗಿದ್ದರು. ಕೇಂದ್ರ ಸಚಿವರಾಗಿದ್ದರೂ ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು’ ಎಂದರು.

ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿದರೂ ಅನಂತಕುಮಾರ್‌ ರಾಜ್ಯದ ಪರವಾಗಿ ಕೆಲಸ ಮಾಡುತ್ತಿದ್ದರು. ಕಾವೇರಿ ನದಿ ನೀರು ಹಂಚಿಕೆ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ತಂದುಕೊಡುವ ನಿಟ್ಟಿನಲ್ಲಿ ನಡೆದ ಹೋರಾಟದಲ್ಲಿ ಕರ್ನಾಟಕದ ಪರವಾಗಿ ದೃಢವಾಗಿ ನಿಂತಿದ್ದರು ಎಂದು ನೆನಪು ಮಾಡಿಕೊಂಡರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಮುರುಳಿ, ನಗರ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಹರೀಶ್‌, ಮುಖಂಡರಾದ ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.