ADVERTISEMENT

ಅವಧಿಗೂ ಮುನ್ನ ಟಿಕೆಟ್‌ಗೆ ಲಾಬಿ

ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ-, ಮುಖಂಡನ ಮಧ್ಯೆ ಪೈಪೋಟಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 16 ಫೆಬ್ರುವರಿ 2022, 6:10 IST
Last Updated 16 ಫೆಬ್ರುವರಿ 2022, 6:10 IST
ಡಾ. ಯೋಗೇಶ್ ಬಾಬು
ಡಾ. ಯೋಗೇಶ್ ಬಾಬು   

ಮೊಳಕಾಲ್ಮುರು: ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇರುವಾಗಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಕಿತ್ತಾಟ ಆರಂಭವಾಗಿದೆ.

ಕಳೆದ ಬಾರಿಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಬಿ. ಯೋಗೇಶ್ ಬಾಬು ಮತ್ತು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟಿದ್ದು, ಇಬ್ಬರೂ ಬಹಿರಂಗವಾಗಿ ಟಿಕೆಟ್ ಲಾಬಿ ಮಾಡುತ್ತಿರುವ ಬಗ್ಗೆ ಮತ್ತು ನನಗೆ ಟಿಕೆಟ್ ದೊರೆಯಲಿದೆ ಎಂಬ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ ನಂತರ ಚಿತ್ರದುರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರು ಚುನಾವಣೆಯಲ್ಲಿ ಕೆಲಸ ಮಾಡದ ಕೆಲವರು ಗೆದ್ದ ನಂತರ ನನ್ನಿಂದಲೇ ಗೆದ್ದಿದ್ದು ಎಂದು ವಿಜಯೋತ್ಸವ ಮಾಡುತ್ತಾರೆ’ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಇದು ನನ್ನನ್ನು ಉದ್ದೇಶಿಸಿ ಹೇಳಿಕೆ ನೀಡಲಾಗಿದೆ ಎಂದು ಭಾವಿಸಿ ಯೋಗೇಶ್ ಬಾಬು ಮರುದಿನ ಎಸ್. ತಿಪ್ಪೇಸ್ವಾಮಿ ವಿರುದ್ಧ ಪತ್ರಿಕಾ ಹೇಳಿಕೆಯನ್ನು ನೀಡಿದರು. ಇಲ್ಲಿಂದ ಆರಂಭವಾದ ಆರೋಪ, ಪ್ರತ್ಯಾರೋಪಗಳು ದಿನೇ, ದಿನೇ ತಾರಕ್ಕೇರಿದ್ದು, ಇಬ್ಬರೂ ಅಂದಿನಿಂದ ಒಂದೇ ವೇದಿಕೆಯಲ್ಲಿ ಕಾಣಸಿಕ್ಕಿಲ್ಲ.

ADVERTISEMENT

ಬಿಎಸ್ ಆರ್ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿ ಬಿಜೆಪಿ ಸೇರಿ ನಂತರ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಪರಿಣಾಮ ಎಸ್. ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಬಾಬು ಯುವ ಕೋಟದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಬಿಜೆಪಿಯ ಬಿ. ಶ್ರೀರಾಮುಲು ಹೊರಗಿನವರು ಎಂಬ ಮಧ್ಯೆಯೂ ಗೆದ್ದರು. ನಂತರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಸಂಸತ್ ಸದಸ್ಯ ಬಿ.ಎನ್. ಚಂದ್ರಪ್ಪ ಎಸ್. ತಿಪ್ಪೇಸ್ವಾಮಿ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಸುವಲ್ಲಿ ಯಶಸ್ವಿಯಾದರು.

ಶ್ರೀರಾಮುಲು ಸಚಿವರಾಗಿರುವ ಕಾರಣ ಹೆಚ್ಚಾಗಿ ಕ್ಷೇತ್ರ ಭೇಟಿ ಮಾಡುತ್ತಿಲ್ಲ, ಇದರಿಂದ ಜನರು ಅಸಮಧಾನಗೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಜತೆಗೆ ಮೊಳಕಾಲ್ಮುರು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಟಿಕೆಟ್ ಸಿಕ್ಕಲ್ಲಿ ಗೆಲುವು ಸುಲಭವಾಗಲಿದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿದೆ. ನಾಯಕನಹಟ್ಟಿ ಪಂಚಾಯಿತಿ ಚುನಾವಣೆ ನಂತರ ಈ ಆಸೆ ಹೆಚ್ಚಳವಾಗಿದೆ. ಇದಕ್ಕಾಗಿಯೇ ಅವಧಿಗೂ ಮುನ್ನ ಕಾಂಗ್ರೆಸ್ ಟಿಕೆಟ್ ಪೈಪೋಟಿಗೆ ಮುಂದಾಗಿದ್ದಾರೆ ಎಂದು ಕೆಲ ಮುಖಂಡರು ಹೇಳುತ್ತಾರೆ.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕವಾಗಿ ಈ ಇಬ್ಬರ ಪರ ಹೇಳಿಕೆಗಳನ್ನು ಹಂಚಿಕೊಳ್ಳುವುದು, ಮುಂದಿನ ಶಾಸಕ ಅಭ್ಯರ್ಥಿ ಎಂದು ಬರೆದುಕೊಳ್ಳುವುದು, ಜತೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಹ ಗೊಂದಲಕ್ಕೆ ಪುಷ್ಠಿ ನೀಡುತ್ತಿದೆ.

ಸೋಲಿನಲ್ಲೂ ಗೆದ್ದ ಬಿಜೆಪಿ...!

‘ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆಯ ಸೋಲಿನಿಂದ ಬಿಜೆಪಿಗೆ ಹಾನಿಯಾಯಿತು ಎಂಬ ಆತಂಕವನ್ನು ಇದೇ ವಿಷಯದಲ್ಲಿ ಕಾಂಗ್ರೆಸ್ ನಾಯಕರ ವೈಮನಸ್ಸಿಗೆ ನಾಂದಿ ಹಾಡಿರುವುದು ಬಿಜೆಪಿಗೆ ಸೋಲಿನ ನೋವು ಮರೆಸಿದೆ. ಈ ಬೆಳವಣಿಗೆ ಬೆಳೆದಷ್ಟು ನಮಗೆ ಲಾಭವಾಗಲಿದೆ. ಚುನಾವಣೆ ಹೊತ್ತಿಗೆ ಮಿತಿಮೀರಲಿದೆ’ ಎಂಬ ನಿರೀಕ್ಷೆಯಲ್ಲಿದ್ದೇವೆ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.