ADVERTISEMENT

ಇಂಧನ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಎತ್ತಿನ ಗಾಡಿ ಮೇಲೆ ದ್ವಿಚಕ್ರ ವಾಹನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 10:55 IST
Last Updated 29 ಜೂನ್ 2020, 10:55 IST
ಇಂಧನ ಬೆಲೆ ಏರಿಕೆ ವಿರೋಧಿಸಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್‌ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಇಂಧನ ಬೆಲೆ ಏರಿಕೆ ವಿರೋಧಿಸಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್‌ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.   

ಚಿತ್ರದುರ್ಗ: ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಎತ್ತಿನ ಗಾಡಿಯ ಮೇಲೆ ದ್ವಿಚಕ್ರ ವಾಹನದ ಮೆರವಣಿಗೆ ನಡೆಸಿ ಅಣಕು ಪ್ರದರ್ಶನ ಮಾಡಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಹಾಗೂ ಕೋವಿಡ್‌ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಜೂನ್‌ 24ರ ಕಚ್ಚಾ ತೈಲದ ಬೆಲೆ ಲೀಟರ್‌ಗೆ ₹ 20 ಇದೆ. ಆದರೆ, ದೇಶದ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ₹ 80ರ ಸನಿಹಕ್ಕೆ ತಲುಪಿದೆ. 2014 ಮೇ ತಿಂಗಳಲ್ಲಿ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕ ₹ 9 ಹಾಗೂ ಡೀಸೆಲ್‌ ಮೇಲಿನ ಸುಂಕ ₹ 3 ಇತ್ತು. 2020ಕ್ಕೆ ಪೆಟ್ರೋಲ್‌ ಮೇಲಿನ ಸುಂಕ ₹ 23 ಹಾಗೂ ಡೀಸೆಲ್‌ ಮೇಲಿನ ಸುಂಕ ₹ 28ಕ್ಕೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.

ADVERTISEMENT

ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೊ ಚಾಲಕರು, ಟ್ಯಾಕ್ಸಿ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ವಿಮೆ ಮತ್ತು ಸಾಲದ ಕಂತು ಪಾವತಿ ಹಾಗೂ ತೆರಿಗೆ ಕಟ್ಟಲು ಪರದಾಡುವಂತಾಗಿದೆ. ವಿಮೆ ಹಾಗೂ ತೆರಿಗೆಗೆ ಆರು ತಿಂಗಳು ವಿನಾಯಿತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆಗೆ ಕಡಿವಾಣ ಹಾಕುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಹಣದುಬ್ಬರಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆರೋಪಿಸಿದರು.

‘ಇಂಧನ ಬೆಲೆ ಏರಿಕೆ ಮಾಡಿದ್ದರಿಂದ ತರಕಾರಿ ಹಾಗೂ ಆಹಾರ ಧಾನ್ಯದ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದೆ. 2014ರಲ್ಲಿ ಅಡುಗೆ ಅನಿಲದ ಬೆಲೆ ₹ 392 ಇತ್ತು. 2020ಕ್ಕೆ ಇದು ₹ 600ರ ಗಡಿ ದಾಟಿದೆ. ಸಾಮಾನ್ಯ ಜನರ ಜೀವನ ಇನ್ನಷ್ಟು ದುರ್ಬರವಾಗುವ ಸಾಧ್ಯತೆ ಇದೆ. ದೇಶ ಹಾಗೂ ಬಡವರ ಬಗ್ಗೆ ಕಳಕಳಿ ಇದ್ದರೆ ಬೆಲೆ ಏರಿಕೆಗೆ ಕಡಿವಾಣ ಹಾಕಿ’ ಎಂದು ಸವಾಲು ಹಾಕಿದರು.

‘ಇಂದಿರಾ ಗಾಂಧಿ ಅವರು ಉಳುವವನಿಗೆ ಭೂಮಿಯ ಒಡೆತನ ನೀಡಿದರು. ಬಿಜೆಪಿ ಸರ್ಕಾರ ಹಣ ಇದ್ದವರಿಗೆ ಭೂಮಿ ಕೊಡುತ್ತಿದೆ. ಇದರಿಂದ ಆಹಾರ ಧಾನ್ಯ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌,ಮಾಜಿ ಸಂಸದಬಿ.ಎನ್‌.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಉಮಾಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶಮೂರ್ತಿ, ಮುಖಂಡರಾದ ಜಿ.ಎಸ್‌.ಮಂಜುನಾಥ್‌, ಬಿ.ಟಿ.ಜಗದೀಶ, ಸಂಪತ್‌ಕುಮಾರ್, ಎನ್‌.ಡಿ.ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.