ADVERTISEMENT

ಸಂವಿಧಾನ ಅರ್ಥೈಸಿಕೊಳ್ಳಲು ದೇಶ ಅರಿಯಿರಿ

ಸಂವಿಧಾನ ಓದು ಕಾನೂನು ಕಾರ್ಯಾಗಾರದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 12:15 IST
Last Updated 4 ಏಪ್ರಿಲ್ 2019, 12:15 IST
ಸಂವಿಧಾನ ಓದು ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್, ಬಿಲ್ಲಪ್ಪ ಉದ್ಘಾಟಿಸಿದರು.
ಸಂವಿಧಾನ ಓದು ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್, ಬಿಲ್ಲಪ್ಪ ಉದ್ಘಾಟಿಸಿದರು.   

ಚಿತ್ರದುರ್ಗ: ‘ಭಾರತವನ್ನು ಅರ್ಥ ಮಾಡಿಕೊಳ್ಳದೇ ಸಂವಿಧಾನ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ದೇಶ, ಜನತೆ, ಅವರ ಮೂಲ, ಪರಸ್ಪರ ಸಂಬಂಧ, ಸಂಸ್ಕೃತಿ ತಿಳಿಯಬೇಕು’ ಎಂದುಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಓದು ಕಾನೂನು ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಮಹತ್ವವನ್ನು 1950ರಿಂದ ಈವರೆಗೂ ನಮ್ಮ ಸರ್ಕಾರಗಳು ಜನತೆಗೆ ಸಮರ್ಪಕವಾಗಿ ತಿಳಿಸಿಲ್ಲ. ದಶಕದಿಂದೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಂವಿಧಾನವನ್ನು ಒಂದು ವಿಷಯವಾಗಿ ಪರಿಗಣಿಸಲಾಗಿದೆ. ಕೆಲವರ್ಷಗಳಿಂದ ಈಚೆಗೆ 100 ಅಂಕಗಳ ಪರೀಕ್ಷೆಯೂ ನಡೆಯುತ್ತಿದ್ದು, ಅನೇಕರು ಉತ್ತೀರ್ಣರಾಗಲಿಕ್ಕೆ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ’ ಎಂದು ವಿಷಾದಿಸಿದರು.

ADVERTISEMENT

‘ಒಂದು ಕಾಲದಲ್ಲಿ ಸಂಪೂರ್ಣ ಅಧಿಕಾರ ರಾಜರ, ಪಾಳೇಗಾರರ ಕೈಯಲ್ಲಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಉತ್ತಮ ಸಮಾಜಕ್ಕೆ ಬೇಕಾಗುವಂತಹ ಕಾನೂನು ರಚನೆಗಾಗಿ ಶಾಸಕಾಂಗ, ಅವುಗಳನ್ನು ಜಾರಿಗೆ ತರಲಿಕ್ಕಾಗಿ ಕಾರ್ಯಾಂಗ, ಉಲ್ಲಂಘಿಸಿದಲ್ಲಿ ಶಿಕ್ಷೆ ವಿಧಿಸಲು ನ್ಯಾಯಾಂಗ ವ್ಯವಸ್ಥೆಯ ಒಟ್ಟು ಸೇವೆಯೇ ರಾಜಕೀಯ ಅಧಿಕಾರವಾಯಿತು. ಈ ಬದಲಾವಣೆಗೆಸಂವಿಧಾನ ಕಾರಣ’ ಎಂದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸ್ವೇಚ್ಛಾಚಾರ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆದರೆ, ಅವುಗಳನ್ನು ನಿಯಂತ್ರಿಸುವ ಚಿಂತನೆಯೂ ಬಂದಿತು. ಅದಕ್ಕಾಗಿ ಸಂವಿಧಾನದಡಿ ನಿಯಮಗಳನ್ನೂ ರೂಪಿಸಲಾಯಿತು’ ಎಂದು ತಿಳಿಸಿದರು.

‘ರಾಷ್ಟ್ರದಲ್ಲಿ ನಾವಾಗಿ ಜಾತಿ ಕಟ್ಟಿಕೊಂಡಿದ್ದಲ್ಲ. ಹುಟ್ಟಿನಿಂದ ಜಾತಿ ಕಟ್ಟಲಾಗಿದೆ. ಸಹ ಭೋಜನ, ಸಮಾನವಾಗಿ ಬದುಕಲು ಸಾಧ್ಯವಿಲ್ಲದ ವಾತಾವರಣ ಇತ್ತು. ದೇಶದಲ್ಲಿ ಈಗಲೂ ಜಾತಿ ವ್ಯವಸ್ಥೆಯನ್ನು ಹೇರಲಾಗುತ್ತಿದೆ. ಅದನ್ನು ಸ್ವಲ್ಪಮಟ್ಟಿಗೆ ಧ್ವಂಸ ಮಾಡಿ, ದಲಿತ ಸಮುದಾಯದ ಒಬ್ಬರು ರಾಷ್ಟ್ರಪತಿಯಾಗಿದ್ದಾರೆ. ಇಂಥ ಸಮುದಾಯವೊಂದರಲ್ಲಿ ಜನಿಸಿ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಟೀ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಇದು ಸಾಧ್ಯವಾಗಿದ್ದು, ಸಂವಿಧಾನದಿಂದ ಎಂಬುದನ್ನು ಮರೆಯಬೇಡಿ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಹಸಿವಿತ್ತು, ಅನಾರೋಗ್ಯವಿತ್ತು, ಅನಕ್ಷರತೆ ಇತ್ತು, ಭೀಕರ ಬರಗಾಲವಿತ್ತು. ಇನ್ನೂ ಅನೇಕ ತೊಂದರೆ ಅನುಭವಿಸುವಂತಾಯಿತು.ಸಂವಿಧಾನ ಜಾರಿ ನಂತರ ಪಾಳೇಗಾರ ಪದ್ಧತಿ ರದ್ದುಗೊಳಿಸಿ, ವಸಹಾತುಶಾಹಿ ಒದ್ದೊಡಿಸಲಾಯಿತು’ ಎಂದರು.

‘ಈ ಎಪ್ಪತ್ತು ವರ್ಷಗಳಲ್ಲಿ ಅನೇಕರಿಗೆ ಶಿಕ್ಷಣ, ಆರೋಗ್ಯ, ವಸತಿ, ಆಹಾರ ಉತ್ಪಾದನೆ, ವಿದೇಶಕ್ಕೆ ವಸ್ತುಗಳ ರಫ್ತು ಹೀಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಒಂದಿಷ್ಟು ಸಾಧನೆಯನ್ನೂ ಮಾಡಿದ್ದೇವೆ. ಇದು ಸಾಧ್ಯವಾಗಿದ್ದು, ಸಂವಿಧಾನದಿಂದ. ಬುಡಕಟ್ಟು ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು ತಲೆ ಎತ್ತಿ ದೇಶದಲ್ಲಿ ಬಾಳುವೆ ನಡೆಸಲು ಅವಕಾಶ ನೀಡಿರುವುದು ನಮ್ಮ ಸಂವಿಧಾನ’ ಎಂದು ವಿವರಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ದಿಂಡಲಕೊಪ್ಪ, ಸಂಪನ್ಮೂಲ ವ್ಯಕ್ತಿ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ, ಕಾರ್ಯದರ್ಶಿ ಶಿವುಯಾದವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜು, ಪ್ರಾಚಾರ್ಯೆ ಸುಧಾದೇವಿ ಅವರೂ ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸರಸ್ವತಿ ಕಾನೂನು ಕಾಲೇಜು, ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.