ಚಿತ್ರದುರ್ಗ: ‘ನಿತ್ಯದ ಜೀವನ ಕ್ರಮದಲ್ಲಿ ಒಂದು ಗಂಟೆಯಾದರೂ ದೇಹದ ಆರೋಗ್ಯದ ಕಡೆಗೆ ಗಮನಹರಿಸಬೇಕು. ಜತೆಗೆ ನಿರಂತರ ಯೋಗ ಬದ್ಧತೆಯಿಂದ ಕೂಡಿರಬೇಕು’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಗುರುವಾರ ರಾಷ್ಟ್ರೀಯ ಯೋಗ ಶಿಕ್ಷಣ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಉಚಿತ ಯೋಗ ಪ್ರಾಣಾಯಾಮ ನಿರಂತರ ತರಗತಿ ಉದ್ಘಾಟಿಸಿ ಮಾತನಾಡಿದರು.
‘ಒಮ್ಮೊಮ್ಮೆ ಜೀವನದಲ್ಲಿ ಯಾವುದನ್ನು ಅಮುಖ್ಯ ಎಂದು ಪರಿಗಣಿಸುತ್ತೇವೆಯೋ ಅದು ಮುಖ್ಯವಾಗುತ್ತದೆ. ಅದರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ’ ಎಂದರು.
‘ಇಂದಿನ ಪರಿಸ್ಥಿತಿ ಗಮನಿಸಿದರೆ ಕೆಲ ವರ್ಷದಲ್ಲಿ ಪ್ರಪಂಚ ಸಂಪೂರ್ಣ ಯೋಗದ ಕಡೆ ಮುಖ ಮಾಡುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಎಲ್ಲರೂ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕಾಗಿದೆ. ಆರೋಗ್ಯ ಸುಧಾರಿಸಿಕೊಳ್ಳುವ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು’ ಎಂದು ತಿಳಿಸಿದರು.
‘ಆರೋಗ್ಯ ಸುಧಾರಣೆ ಮೂಲಕ ಆರೋಗ್ಯವಂತ ಸಮಾಜಕ್ಕೆ ಸಹಕರಿಸಬೇಕು. ಆರೋಗ್ಯ ಕಡೆಗಣಿಸಿ ಹಣ, ಅಧಿಕಾರ ಮತ್ತು ಭೌತಿಕ ವಸ್ತುಗಳ ಕಡೆಗೆ ಗಮನಹರಿಸಿದರೆ ಯಾವುದೇ ಪ್ರಯೋಜನವಿಲ್ಲ. ನಿರ್ಲಕ್ಷ್ಯವಹಿಸಿ ತೀವ್ರ ತರಹದ ಕಾಯಿಲೆಗೆ ತುತ್ತಾದರೆ ಆಯುಷ್ಯ ಕಡಿಮೆಯಾಗುತ್ತದೆ’ ಎಂದು ಎಚ್ಚರಿಸಿದರು.
‘ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಂತ ವಿಶ್ವಯೋಗ ಆರಂಭವಾಗಿ ಹತ್ತು ವರ್ಷ ಕಳೆದಿದೆ. ಯೋಗದ ಮಹತ್ವವನ್ನು ಪ್ರಪಂಚದ ನಾನಾ ದೇಶಗಳು ಬೆಂಬಲಿಸಿ ಅನುಷ್ಠಾನಕ್ಕೆ ತರಲು ಮುಂದಾಗಿವೆ’ ಎಂದು ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ತಿಳಿಸಿದರು.
‘ನೂರಾರು ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದರೆ ದೇಹಕ್ಕೆ ಒಂದೇ ಒಂದು ಜಾಡ್ಯ ಬಂತೆಂದರೆ ಅದರ ಕಡೆಗೆ ನಮ್ಮ ಚಿಂತೆ ಇರುತ್ತದೆ. ದೇಹ ಗಟ್ಟಿಯಾಗಿದ್ದರೆ ಮಾತ್ರ ಏನಾದರೂ ಸಾಧನೆ ಸಾಧ್ಯ. ಅಂತಹ ಸದೃಢ ದೇಹ ಸಂಪಾದಿಸಲು ಯೋಗದಿಂದ ಸಾಧ್ಯವಿದೆ’ ಎಂದರು.
‘ಸರಿಯಾದ ಆಹಾರ, ನಿದ್ದೆ ಇತ್ಯಾದಿ ಉಪಕ್ರಮಗಳಿಂದ ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯವಿದೆ. ಹಾಗೇ ಚಿಕಿತ್ಸೆ ದೊಡ್ಡದಲ್ಲ ಆರೋಗ್ಯ ದೊಡ್ಡದು. ಈ ಸರಳ ಸತ್ಯವನ್ನು ಅರ್ಥ ಮಾಡಿಕೊಂಡರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದು ತಿಳಿಸಿದರು.
‘ಆನಂದ ಯಾವುದೇ ಭೌತಿಕ ವಸ್ತುಗಳಲ್ಲಿಲ್ಲ. ಅದು ಆರೋಗ್ಯದಲ್ಲಿದೆ. ಅದನ್ನು ಸಂಪಾದಿಸಿದರೆ ಎಲ್ಲವನ್ನು ಸಂಪಾದಿಸಬಹುದು. ಬೇರೆಯವರ ಬಲವಂತಕ್ಕೆ ಯೋಗ ಮಾಡದೆ ವೈಯಕ್ತಿಕ ಹಿತಾಸಕ್ತಿಗೆ ಅಭ್ಯಾಸ ಮಾಡಬೇಕು’ ಎಂದು ಯೋಗಗುರು ಎಲ್.ಎಸ್.ಚಿನ್ಮಯಾನಂದ ಸಲಹೆ ನೀಡಿದರು.
‘ಯೋಗದಿಂದ ಮಾನಸಿಕ ಸದೃಢತೆ ಸಾಧ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಚಿಕ್ಕ ಕಾರಣಕ್ಕೂ ಆತ್ಮಹತ್ಯೆ ಹಾದಿ ಹಿಡಿದಿರುವುದು ನೋವಿನ ಸಂಗತಿ. ಈ ಎಲ್ಲದಕ್ಕೂ ಯೋಗ ಮದ್ದಾಗಿದೆ’ ಎಂದು ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ತಿಳಿಸಿದರು.
‘ಆರೋಗ್ಯದಿಂದಲೇ ಎಲ್ಲವೂ ಸಾಧ್ಯವಿದೆ. ನಾವು ವಸ್ತುಗಳಿಗೆ ಆದ್ಯತೆ ನೀಡಿ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ನಮ್ಮ ಬದುಕು ಪರಿಸರಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಇದೇ ಅಸಮತೋಲನಕ್ಕೆ ಕಾರಣವಾಗಿ ಅನಾರೋಗ್ಯ ಹೆಚ್ಚಾಗಿದೆ’ ಎಂದರು.
ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಬಸವರಾಜ್, ಉಪನ್ಯಾಸಕ ಎಂ.ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.