ADVERTISEMENT

ಚಂದ್ರ ದರ್ಶನದಲ್ಲಿ ಕೊರೊನಾ ಜಾಗೃತಿ

ಕಾಲಿಗೆ ಬೀಳದಂತೆ ಡಂಗೂರ; ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 5:21 IST
Last Updated 15 ಏಪ್ರಿಲ್ 2021, 5:21 IST
ಯುಗಾದಿ ಚಂದ್ರ ದರ್ಶನ ನಂತರ ಬೀಳಬಾರದು ಎಂದು ಗ್ರಾಮವೊಂದರಲ್ಲಿ ಡಂಗೂರ ಸಾರಲಾಯಿತು
ಯುಗಾದಿ ಚಂದ್ರ ದರ್ಶನ ನಂತರ ಬೀಳಬಾರದು ಎಂದು ಗ್ರಾಮವೊಂದರಲ್ಲಿ ಡಂಗೂರ ಸಾರಲಾಯಿತು   

ಹೊಸದುರ್ಗ: ಈ ಬಾರಿ ಯುಗಾದಿ ಚಂದ್ರ ದರ್ಶನದ ನಂತರ ಯಾರೂ ಕಾಲಿಗೂ ಬೀಳಬಾರದು, ಕೈ ಕೊಡಬಾರದು ಎಂದು ಗ್ರಾಮವೊಂದರಲ್ಲಿ ಡಂಗೂರ ಸಾರಿದ್ದ ವಿಡಿಯೊ ಹರಿದಾಡಿದ್ದು, ತಾಲ್ಲೂಕಿನ ಗ್ರಾಮಸ್ಥರು ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾಗೃತರಾದರು.

ಕೊರೊನಾ 2ನೇ ಅಲೆಯ ಸೋಂಕು ಭೀತಿಯ ನಡುವೆಯೂ ತಾಲ್ಲೂಕಿನ ಕೆಲವೆಡೆ ಯುಗಾದಿ ಹಬ್ಬವನ್ನು ಹಿಂದಿನಂತೆ ಅದ್ದೂರಿಯಾಗಿ ಆಚರಿಸಿದರು. ಮತ್ತೆ ಹಲವೆಡೆ ಕೊರೊನಾ ಕಾರಣ ಸರಳವಾಗಿ ಆಚರಿಸಿದರು. ಮಂಗಳವಾರ ಬೆಳಿಗ್ಗೆಯೇ ಮನೆಯ ಅಂಗಳ ಶುಚಿಗೊಳಿಸಿ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಲಾಯಿತು.

ಮೈಗೆ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು. ಮನೆಗಳಲ್ಲಿ ಬಗೆ, ಬಗೆಯ ಸಿಹಿ ಅಡುಗೆ ತಯಾರಿಸಿದರು. ನಂತರ ಇಷ್ಟದೇವರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿ ಹಾಗೂ ಕೊರೊನಾ ಮುಕ್ತಿಗೆ ಭಕ್ತಿಯಿಂದ ಪ್ರಾರ್ಥಿಸಿದರು. ನಂತರದಲ್ಲಿ ಸಿಹಿ ಭೋಜನ ಸವಿದರು. ಹಲವೆಡೆ ಮಂಗಳವಾರ ಚಂದ್ರ ದರ್ಶನ ಮಾಡಿದರು. ಮತ್ತೆ ಕೆಲವೆಡೆ ಬುಧವಾರ ಚಂದ್ರ ದರ್ಶನ ಮಾಡಿ ಪುನೀತರಾದರು. ಹಲವೆಡೆ ಜೂಜಾಟ ಭರ್ಜರಿಯಾಗಿ ನಡೆಯಿತು.

ADVERTISEMENT

ವರ್ಷದ ತೊಡಕು ಆಚರಣೆ: ಯುಗಾದಿ ಚಂದ್ರ ದರ್ಶನದ ನಂತರದಲ್ಲಿ ಪ್ರತಿವರ್ಷದಂತೆ ಬಹುತೇಕ ಕಡೆ ಮಾಂಸಪ್ರಿಯರು ವರ್ಷದ ತೊಡಕು ಆಚರಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮಾಂಸ, ಮೀನು ಮಾರಾಟದ ಅಂಗಡಿ ಬಂದ್ ಆಗಿದ್ದವು. ಇದರಿಂದಾಗಿ ಮಾಂಸ ಪ್ರಿಯರು ಮೀನು ಹಿಡಿಯಲು ಕೆರೆ ಹಾಗೂ ಮಾಂಸದ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು. ಹಲವೆಡೆ ನೂಕುನುಗ್ಗಲು ಉಂಟಾಯಿತು.

ಬೇಡಿಕೆ ಹೆಚ್ಚಾಗಿದ್ದರಿಂದ ಕೆಲವರು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರು. ಕೊತ್ತಂಬರಿ ಸೊಪ್ಪು, ಹಸಿಶುಂಠಿ, ನಿಂಬೆಹಣ್ಣು, ಬೆಳ್ಳುಳ್ಳಿ, ಸೌತೆಕಾಯಿ, ಮಸಾಲೆ ಮಾರಾಟ ಜೋರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.