ADVERTISEMENT

ಚಿತ್ರದುರ್ಗ | ಕಾಲೇಜು ಪ್ರವೇಶಕ್ಕೆ ಕೋವಿಡ್‌ ಅಡ್ಡಿ, ವಿದ್ಯಾರ್ಥಿಗಳ ನಿರಾಸಕ್ತಿ

ಜಿ.ಬಿ.ನಾಗರಾಜ್
Published 24 ಜುಲೈ 2020, 3:14 IST
Last Updated 24 ಜುಲೈ 2020, 3:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಪದವಿ ಪೂರ್ವ ಕಾಲೇಜು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಅರ್ಜಿ ಪಡೆಯಲು ವಿದ್ಯಾರ್ಥಿಗಳು ಕಾಲೇಜು ಬಳಿ ಸುಳಿಯುತ್ತಿಲ್ಲ. ಕೊರೊನಾ ಸೋಂಕಿನ ಆತಂಕದ ನಡುವೆ ಪ್ರವೇಶಾತಿ ಪಡೆಯುವುದು ಸವಾಲಾಗಿ ಪರಿಣಮಿಸಿದೆ.

ಜುಲೈ 14ರಂದು ಪದವಿ ಪೂರ್ವ ಕಾಲೇಜು ಫಲಿತಾಂಶ ಹೊರಬಿದ್ದಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಪದವಿ ಕಾಲೇಜು ಪ್ರವೇಶಕ್ಕೆ ಮುಂದಾಗುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ನಿತ್ಯ ಬೆರಳೆಣಿಕೆಯ ಅರ್ಜಿಗಳು ಮಾತ್ರ ಕಾಲೇಜಿನಿಂದ ವಿತರಣೆಯಾಗುತ್ತಿವೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರುವುದು ದುಸ್ತರವಾಗಿದೆ. ಸಾರಿಗೆ ಸಂಪರ್ಕವೂ ಸ್ಥಗಿತಗೊಂಡಿದ್ದು ಸಮಸ್ಯೆಯನ್ನು ಹೆಚ್ಚಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಹಾಗೂ ಪಟ್ಟಣಕ್ಕೆ ಬರಲು ಕಷ್ಟವಾಗಿದೆ. ಇದು ಪ್ರವೇಶ ಪ್ರಕ್ರಿಯೆ ಮೇಲೆಯೂ ಪರಿಣಾಮ ಬೀರಿದೆ.

ADVERTISEMENT

ಕಾಲೇಜು ಶಿಕ್ಷಣ ಇಲಾಖೆ ಪ್ರವೇಶ ಪ್ರಕ್ರಿಯೆಗೆ ಅನುಮತಿ ನೀಡಿದೆ. ಅರ್ಜಿಗಳನ್ನು ವಿತರಿಸುವಂತೆ ಕಾಲೇಜುಗಳಿಗೆ ಸೂಚನೆ ನೀಡಿದೆ. ಸೆಪ್ಟೆಂಬರ್‌ ತಿಂಗಳಿಂದ ಪದವಿ ಕಾಲೇಜು ಪುನರಾರಂಭವಾಗುವ ನಿರೀಕ್ಷೆ ಇದೆ. ಆ.15ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ದಾವಣಗೆರೆ ವಿಶ್ವವಿದ್ಯಾಲಯ ಸೂಚನೆ ನೀಡಿದೆ.

ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳು ಜಿಲ್ಲೆಯಲ್ಲಿವೆ. ಬಿ.ಎ, ಬಿ.ಕಾಂ, ಬಿಎಸ್ಸಿ, ಬಿಬಿಎಂ ಸೇರಿ ಹಲವು ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳ ಗುರಿ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ಚಿತ್ರದುರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೂರದೂರಿನಿಂದ ಕಾಲೇಜಿಗೆ ಬರುವುದು ಕಷ್ಟವಾಗಿದೆ.

‘ಸಾಮಾನ್ಯವಾಗಿ ಪಿಯು ಫಲಿತಾಂಶ ಪ್ರಕಟವಾದ ಮರುದಿನವೇ ಪದವಿ ಕಾಲೇಜುಗಳ ಅರ್ಜಿಗೆ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದರು. ಆದರೆ, ಈಗ ಅರ್ಜಿ ವಿತರಣೆ ಮಾಡುತ್ತಿದ್ದರೂ ವಿದ್ಯಾರ್ಥಿಗಳು ಬರುತ್ತಿಲ್ಲ. ಪೋಷಕರು, ಸಂಬಂಧಿಕರು ಅರ್ಜಿ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿನ ಭೀತಿ ಹಾಗೂ ಶಿಕ್ಷಣದ ಬಗೆಗಿನ ಗೊಂದಲದಿಂದ ಈ ಸಮಸ್ಯೆ ಉಂಟಾಗಿದೆ’ ಎಂಬುದು ಪದವಿ ಕಾಲೇಜು ಪ್ರಾಧ್ಯಾಪಕರೊಬ್ಬರ ವಿಶ್ಲೇಷಣೆ.

ಪದವಿ ಕಾಲೇಜುಗಳಿಗೆ ಇನ್ನೂ ಪರೀಕ್ಷೆ ಪ್ರಾರಂಭವಾಗಿಲ್ಲ. ತೃತಿಯ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಕಾಲೇಜು ಪ್ರಾರಂಭವಾಗುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಇದು ಕೂಡ ಪ್ರವೇಶಾತಿ ಪಡೆಯಲು ಹಿಂದೇಟು ಹಾಕುವಂತೆ ಮಾಡಿರುವ ಸಾಧ್ಯತೆ ಇದೆ.

ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ. ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಸೋಂಕು ತಗುಲಬಹುದು ಎಂಬ ಆತಂಕವೂ ಕಾಡುತ್ತಿದೆ. ಇದು ವಿದ್ಯಾರ್ಥಿಗಳನ್ನು ಕಾಲೇಜುಗಳತ್ತ ಸುಳಿಯದಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.