ADVERTISEMENT

ಚಿತ್ರದುರ್ಗ | ಕೋವಿಡ್‌–19ರಿಂದ ಗುಣಮುಖರಾಗಿ ಮರಳಿದ ನಾಲ್ವರು

ಗುಜರಾತಿನಿಂದ ಮರಳಿದ ತಬ್ಲಿಗಿ ಜಮಾತ್‌ ತಂಡ, ನಿಯಮಾವಳಿ ಉಲ್ಲಂಘಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2020, 5:15 IST
Last Updated 7 ಮೇ 2020, 5:15 IST
ವಿನೋತ್ ಪ್ರಿಯಾ
ವಿನೋತ್ ಪ್ರಿಯಾ   

ಚಿತ್ರದುರ್ಗ: ಗುಜರಾತಿನ ಅಹಮದಾಬಾದಿನಿಂದ ಮರಳಿದ ತಬ್ಲಿಗಿ ಜಮಾತ್‌ನ 15 ಸದಸ್ಯರಲ್ಲಿ ನಾಲ್ವರು ‘ಕೋವಿಡ್‌–19’ ಕಾಯಿಲೆಯಿಂದ ಗುಣಮುಖರಾಗಿರುವವರು ಎಂಬ ಸಂಗತಿ ಬುಧವಾರ ಹೊರಬಿದ್ದಿದೆ. ಕೊರೊನಾ ಸೋಂಕು ಪರೀಕ್ಷೆಗೆ ಇವರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ.

‘ಗುಜರಾತಿನಿಂದ ಹಿಂದುರುಗಿದವರಲ್ಲಿ ನಾಲ್ವರಿಗೆ ಏಪ್ರೀಲ್‌ನಲ್ಲಿ ಕೊರೊನಾ ಸೋಂಕು ಅಂಟಿತ್ತು. ಸಕಾಲಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರ ಮೇಲೆ ಇನ್ನಷ್ಟು ದಿನ ನಿಗಾ ಇಡುವ ಅಗತ್ಯವಿದೆ. ಬಸ್ಸಿನಲ್ಲಿ ಅಂತರ ಕಾಯ್ದುಕೊಳ್ಳದ ಇವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಹಮದಾಬಾದ್‌ ಜಿಲ್ಲಾಡಳಿತದ ಅನುಮತಿ ಪಡೆದು ಹೊರಟ ಈ ತಂಡ ಸೂರತ್‌, ನಾಸಿಕ್‌, ಸೊಲ್ಲಾಪುರ, ವಿಜಯಪುರ ಹಾಗೂ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದಿದೆ. ಜಿಲ್ಲಾ ಗಡಿಯಲ್ಲಿ ಸ್ಥಾಪಿಸಿದ ಚೆಕ್‌ಪೋಸ್ಟ್‌ನಲ್ಲಿ ಇವರನ್ನು ತಡೆಯಲಾಗಿತ್ತು. ಅಂತರರಾಜ್ಯ ಪ್ರಯಾಣ ಬೆಳೆಸಲು ನಿಗದಿಪಡಿಸಿದ ನಿಯಮಾವಳಿಯನ್ನು ಇವರು ಪಾಲಿಸಿಲ್ಲ. ಚಿತ್ರದುರ್ಗ ಜಿಲ್ಲಾಡಳಿತದ ಅನುಮತಿ ಪಡೆಯದೇ ಬಂದಿದ್ದು ತಪ್ಪು’ ಎಂದು ಹೇಳಿದರು.

ADVERTISEMENT

‘ಮಾರ್ಚ್‌ 8ರಂದು ಚಿತ್ರದುರ್ಗದಿಂದ ಹೊರಟಿದ್ದ ಈ ತಂಡ ಅಹಮದಾಬಾದಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ತುಮಕೂರು ಜಿಲ್ಲೆಯ ಪಾವಗಡದ 18 ಜನರೂ ಇದ್ದರು. ಏ.14ರಂದು ಇವರು ರಾಜ್ಯಕ್ಕೆ ಮರಳಬೇಕಿತ್ತು. ಆ ವೇಳೆಗಾಗಲೇ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಅನಿವಾರ್ಯವಾಗಿ ಅಲ್ಲಿಯೇ ಉಳಿದಿದ್ದರು. ಅಹಮದ್‍ಬಾದ್‍ನ ಜಿನಾತ್‍ಪುರ ತರ್ಕೇಜ್ ಮಸೀದಿಯಲ್ಲಿ ಇವರು ವಾಸ್ತವ್ಯ ಹೂಡಿದ್ದರು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ‘ನಿತ್ಯ ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಕರ್ಫ್ಯೂ ಮಾದರಿಯ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಸಮಯದಲ್ಲಿ ಔಷಧದಂಗಡಿ ಸೇರಿ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಜನಸಂಚಾರ ಹಾಗೂ ವಾಣಿಜ್ಯ ವಹಿವಾಟಿಗೆ ಅವಕಾಶವಿದೆ. ಅಂಗಡಿ ತೆರೆಯಲು ಸಮಯ ನಿಗದಿಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣದ ಮೇಲೆ ನಿಗಾ

ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ಪತ್ತೆಗೆ ಪೊಲೀಸರ ತಂಡವೊಂದು ಸಕ್ರಿಯವಾಗಿದೆ. ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದೆ.

‘ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲು ಸೋಷಿಯಲ್‌ ಮಿಡಿಯಾ ಮಾನಿಟರಿಂಗ್‌ ತಂಡ ರಚಿಸಲಾಗಿದೆ. ಐದು ಸಿಬ್ಬಂದಿ ತಂಡದಲ್ಲಿದ್ದಾರೆ. ತಬ್ಲಿಗಿ ಜಮಾತ್‌ ಸದಸ್ಯರಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳನ್ನು ತಂಡ ಪತ್ತೆ ಮಾಡಿದೆ. ನೈಜತೆಯನ್ನು ತಿರುಚಿ ಅಪಪ್ರಚಾರ ಮಾಡಿ ಜನರನ್ನು ಆತಂಕಕ್ಕೆ ದೂಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಕೆ ನೀಡಿದರು.

ಪ್ರವಾಸ ತೆರಳಿ ಸಮಸ್ಯೆಗೆ ಸಿಲುಕಿದರು

ಸೂಕ್ತ ಅನುಮತಿ ಪಡೆಯದೇ ರಾಜಸ್ಥಾನದಿಂದ ಬೆಂಗಳೂರಿಗೆ ತೆರಳುತ್ತಿದ್ದ 21 ಪ್ರವಾಸಿಗರು ಚಿತ್ರದುರ್ಗ ತಾಲ್ಲೂಕಿನ ಬೋಗಳೇರಹಟ್ಟಿ ಚೆಕ್‌ಪೋಸ್ಟ್‌ ಬಳಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಹೊರರಾಜ್ಯದವರೂ ಇದ್ದಾರೆ.

ಲಾಕ್‌ಡೌನ್‌ಗೂ ಮೊದಲೇ ಇವರು ರಾಜಸ್ಥಾನದ ಅಜ್ಮೀರಕ್ಕೆ ಪ್ರವಾಸ ತೆರಳಿದ್ದರು. ತವರು ರಾಜ್ಯಕ್ಕೆ ಮರಳಲು ಅನುಮತಿ ಸಿಕ್ಕ ಬಳಿಕ ಖಾಸಗಿ ಬಸ್‌ನಲ್ಲಿ ಮರಳುತ್ತಿದ್ದರು. ಸರ್ಕಾರ ನಿಗದಿಪಡಿಸಿದ ನಿಯಮಾವಳಿಯ ಪ್ರಕಾರ ಇವರು ಪಾಸ್‌ ಪಡೆದಿರಲಿಲ್ಲ.

‘ನಿಯಮಾವಳಿ ಪಾಲಿಸದ ಇವರನ್ನು ಹಾಸ್ಟೆಲ್‌ನಲ್ಲಿ ಇಡಲಾಗಿದೆ. ಪಾಸ್‌ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.