ADVERTISEMENT

ಚಿತ್ರದುರ್ಗ: ಆಹಾರದ ಕಿಟ್‌ನಲ್ಲಿ ಶಾಸಕರ ಹಸ್ತಕ್ಷೇಪ

ಕಾರ್ಮಿಕ ಸಂಘಟನೆಗಳ ಆರೋಪ, ಅನ್ಯಾಯ ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 15:01 IST
Last Updated 19 ಜುಲೈ 2021, 15:01 IST

ಚಿತ್ರದುರ್ಗ: ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಒದಗಿಸಿದ ಆಹಾರ ಧಾನ್ಯದ ಕಿಟ್‌ಗಳ ವಿತರಣೆಯಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ನೈಜ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

‘ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಆಹಾರ ಧಾನ್ಯದ ಕಿಟ್‌ಗಳನ್ನು ನೀಡಲಾಗುತ್ತಿದೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಇದು ತಲುಪಬೇಕಿತ್ತು. ಇದಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರೇ ಅಡ್ಡಗಾಲು ಆಗಿದ್ದಾರೆ’ ಎಂದು ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಕಾರ್ಮಿಕರಿಗೆ ಸರಿಯಾಗಿ ಕಿಟ್‍ ತಲುಪುತ್ತಿವೆ. ಆದರೆ, ಚಿತ್ರದುರ್ಗ ತಾಲ್ಲೂಕಿನಲ್ಲಿ ಮಾತ್ರ ಈ ಅನ್ಯಾಯವಾಗುತ್ತಿದೆ. ಈ ಕಿಟ್‌ಗಳನ್ನು ಶಾಸಕರು, ಸಂಸದರು, ಸಚಿವರ ನಿಧಿಯಿಂದ ನೀಡುತ್ತಿಲ್ಲ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯಿಂದ ಆಹಾರ ಧಾನ್ಯದ ಕಿಟ್‌ ಒದಗಿಸಲಾಗುತ್ತಿದೆ. ಇದು ನಿಜವಾದ ಕಾರ್ಮಿಕರಿಗೆ ತಲುಪಲಿ’ ಎಂದು ಒತ್ತಾಯಿಸಿದರು.

ADVERTISEMENT

ಕಟ್ಟಡ ಕಾರ್ಮಿಕರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ನಾಗರಾಜಚಾರಿ, ಪ್ರಧಾನ ಕಾರ್ಯದರ್ಶಿ ಕೆ.ಇ.ಸತೀಶ್, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವೈ.ತಿಪ್ಪೇಸ್ವಾಮಿ ಇದ್ದರು.

***

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹತ್ತು ಸಾವಿರ ಕೋಟಿ ಸೆಸ್‌ ಹಣವಿದೆ. ಸರ್ಕಾರಕ್ಕೆ ಸರಿಯಾಗಿ ಸೆಸ್ ಪಾವತಿಸುವ ನೈಜ ಕಾರ್ಮಿಕರಿಗೆ ಕೋವಿಡ್‌ ಸಂಕಷ್ಟ ಕಾಲದಲ್ಲಿ ಆಹಾರ ಧಾನ್ಯದ ಕಿಟ್ ತಲುಪಲಿ.
-ಜಿ.ಸಿ.ಸುರೇಶ್‍ಬಾಬು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

***

ಚಿತ್ರದುರ್ಗ ತಾಲ್ಲೂಕಿನಲ್ಲಿ ಹತ್ತು ಸಾವಿರ ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. ನಕಲಿ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳು ಸಿಗಬಾರದು. ನೈಜ ಕಾರ್ಮಿಕರನ್ನು ಗುರುತಿಸಿ.
-ವೈ.ಕುಮಾರ್‌, ಪ್ರಧಾನ ಕಾರ್ಯದರ್ಶಿ
ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.