ADVERTISEMENT

ರಾಂಪುರದಲ್ಲಿ ನೆಗೆಟಿವ್‌, ಬಳ್ಳಾರಿಯಲ್ಲಿ ಪಾಸಿಟಿವ್ ವರದಿ: ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 3 ಮೇ 2021, 2:55 IST
Last Updated 3 ಮೇ 2021, 2:55 IST
ಮಲ್ಲಿಕಾರ್ಜುನ್
ಮಲ್ಲಿಕಾರ್ಜುನ್   

ಮೊಳಕಾಲ್ಮುರು: ಕೊರೊನಾ ಫಲಿತಾಂಶ ಗೊಂದಲದಿಂದಾಗಿ ತಾಲ್ಲೂಕಿನ ರಾಂಪುರದಲ್ಲಿ ಟಿಎಪಿಸಿಎಂಎಸ್ ನೌಕರರೊಬ್ಬರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಗ್ರಾಮದಲ್ಲಿ ಟಿಎಪಿಸಿಎಂಎಸ್ ವತಿಯಿಂದ ನಡೆಸುತ್ತಿರುವ ನ್ಯಾಯಬೆಲೆ ಅಂಗಡಿ ನೌಕರ ಕೆ.ಆರ್. ಮಲ್ಲಿಕಾರ್ಜುನ್ ಅವರಿಗೆ ಕೋವಿಡ್ ಲಕ್ಷಣಗಳು ಇದ್ದ ಕಾರಣ ಕಳೆದ ಸೋಮವಾರ ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಿದ್ದರು. ಫಲಿತಾಂಶ ನೆಗೆಟಿವ್ ಬಂದಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ. ನಂತರ ಲಕ್ಷಣಗಳು ಹೆಚ್ಚಿದ ಕಾರಣ ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಟೆಸ್ಟ್ ವರದಿ ನೆಗೆಟಿವ್ ಎಂಬ ಕಾರಣ ಕೋವಿಡ್ ಕೇಂದ್ರದ ಬದಲು ಜನರಲ್ ವಾರ್ಡ್‌ನಲ್ಲಿ ದಾಖಲಿಸಿಕೊಂಡಿದ್ದರು’ ಎಂದು ಗ್ರಾಮದ ಹಿರಿಯ ವಕೀಲ ಆರ್.ಎಂ. ಅಶೋಕ್ ತಿಳಿಸಿದ್ದಾರೆ.

‘ಗಂಟಲುದ್ರವ ಮಾದರಿಯ ಪರೀಕ್ಷಾ ವರದಿ ಬರುವುದು ತಡವಾಗುತ್ತಿದೆ. ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಕೋವಿಡ್ ಕೇಂದ್ರಕ್ಕೆ ದಾಖಲಿಸಿಕೊಳ್ಳಿ ಎಂದು ಸ್ಥಳೀಯ ವೈದ್ಯರನ್ನು ಹಲವು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ಶುಕ್ರವಾರ ಪರೀಕ್ಷೆಯ ವರದಿ ಬಂದರೂ ನೆಗೆಟಿವ್ ಆಗಿತ್ತು. ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ಬಳ್ಳಾರಿ ವಿಮ್ಸ್‌ಗೆ ದಾಖಲು ಮಾಡಲಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

‘ವಿಮ್ಸ್‌ನಲ್ಲಿ ಶನಿವಾರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು. ಆದರೆ, ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಭಾನುವಾರ ಬೆಳಗಿನ ಜಾವ ಮೃತಪಟ್ಟರು’ ಎಂದು ಹೇಳಿದರು.

‘ಘಟನೆಗೆ ಆರೋಗ್ಯ ವ್ಯವಸ್ಥೆ ನಿರ್ಲಕ್ಷ್ಯ ಕಾರಣ. ಫಲಿತಾಂಶವನ್ನು ಶೀಘ್ರವಾಗಿ ನೀಡುವುದಿಲ್ಲ. ಜತೆಗೆ ತೀವ್ರ ಲಕ್ಷಣಗಳಿದ್ದರೂ ಚಿಕಿತ್ಸೆಯನ್ನು ನೀಡುವುದಿಲ್ಲ. ಇಲ್ಲಿ ವರದಿ ನೆಗೆಟಿವ್ ಬಂದು ಬಳ್ಳಾರಿಯಲ್ಲಿ ಪಾಸಿಟಿವ್ ಬರುತ್ತದೆ ಎಂದರೆ ಏನರ್ಥ? ಮುಂದಿನ ದಿನಗಳಲ್ಲಿಯಾದರೂ ಇಂತಹ ಗೊಂದಲಕ್ಕೆ ಅವಕಾಶ ನೀಡದೇ ಶೀಘ್ರ ಫಲಿತಾಂಶ ಮತ್ತು ಚಿಕಿತ್ಸೆ ನೀಡಬೇಕು’ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.