ADVERTISEMENT

ಕೋವಿಡ್‌ ಲಸಿಕೆ: ಕೋಟೆನಾಡಲ್ಲಿ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:42 IST
Last Updated 6 ಏಪ್ರಿಲ್ 2021, 14:42 IST

ಚಿತ್ರದುರ್ಗ: ಜಿಲ್ಲೆಯ ಜನರು ಕೋವಿಡ್ ಲಸಿಕೆ ಪಡೆಯುವಲ್ಲಿ ಉತ್ಸಾಹ ತೋರುತ್ತಿದ್ದು, ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯದ ಮೊದಲ ಐದು ಜಿಲ್ಲೆಗಳಲ್ಲಿ ಚಿತ್ರದುರ್ಗ ಸ್ಥಾನ ಪಡೆದಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕ ಆವರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕೋವಿಡ್‌ ಲಸಿಕೆ ವಿತರಣೆಯಲ್ಲಿ ಪ್ರಗತಿ ಕಾಣುತ್ತಿದೆ. ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕೋವಿಡ್‌ ಪ್ರಕರಣಗಳು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿವೆ.

ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ 103 ಲಸಿಕಾ ಕೇಂದ್ರಗಳಿವೆ. 71 ಉಪ ಕೇಂದ್ರಗಳು ಹಾಗೂ 6 ಆಯುರ್ವೇದಿಕ್ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಚಿತ್ರದುರ್ಗ ರಾಜ್ಯದ ಮೊದಲ ಸ್ಥಾನದಲ್ಲಿದೆ.

ADVERTISEMENT

ಕೋವಿಡ್‌ ಲಸಿಕೆ ವಿತರಣೆ ಜ.16ರಿಂದ ಆರಂಭವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಎಲ್ಲ ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಈವರೆಗೆ 1.18 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.

ಪ್ರಾದೇಶಿಕ ಲಸಿಕಾ ಕೇಂದ್ರದಲ್ಲಿ ಅಗತ್ಯ ಲಸಿಕೆ ದಾಸ್ತಾನು ಮಾಡಲಾಗಿದೆ. ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಇಲ್ಲಿಂದಲೇ ಲಸಿಕೆ ಸರಬರಾಜು ಆಗುತ್ತಿದೆ. ಚಿತ್ರದುರ್ಗ ಜಿಲ್ಲೆಗೆ 40 ಸಾವಿರ ಡೋಸ್ ಲಸಿಕೆ ಸಂಗ್ರಹವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಹಿರಿಯೂರಿನಲ್ಲಿ ಸೋಂಕು ಹೆಚ್ಚಳ

ಜಿಲ್ಲೆಯ 20 ಜನರಲ್ಲಿ ಮಂಗಳವಾರದ ಕೋವಿಡ್‌ ಇರುವುದು ಖಚಿತವಾಗಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 15,238ಕ್ಕೆ ಏರಿಕೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಒಂದೇ ದಿನ 12 ಪ್ರಕರಣ ಬೆಳಕಿಗೆ ಬಂದಿವೆ.

ಮಂಗಳವಾರ 1,673 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇನ್ನೂ 485 ಜನರ ವರದಿ ಬರುವುದು ಬಾಕಿ ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.

ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 11ಜನರು ಮಂಗಳವಾರ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 15,079 ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. 70 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.