ADVERTISEMENT

ಚಿತ್ರದುರ್ಗ | ನರಕದಂತಾದ ಮಹಿಳಾ ಹಮಾಲರ ಕಾಲೊನಿ: ಕುಡಿಯುವ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:05 IST
Last Updated 22 ಸೆಪ್ಟೆಂಬರ್ 2025, 6:05 IST
ಚಿತ್ರದುರ್ಗದ ಎ‍ಪಿಎಂಸಿ ಪ್ರಾಂಗಣದಲ್ಲಿರುವ ಮಹಿಳಾ ಹಮಾಲರ ಕಾಲೊನಿಯಲ್ಲಿ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಚಿತ್ರದುರ್ಗದ ಎ‍ಪಿಎಂಸಿ ಪ್ರಾಂಗಣದಲ್ಲಿರುವ ಮಹಿಳಾ ಹಮಾಲರ ಕಾಲೊನಿಯಲ್ಲಿ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಚಿತ್ರದುರ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಕೆಲಸ ಮಾಡುವ ಮಹಿಳಾ ಹಮಾಲರಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕಾಲೊನಿಯೊಂದನ್ನು ನಿರ್ಮಿಸಲಾಗಿದೆ. ಆದರೆ, ಅಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರು ಸೇರಿದಂತೆ ಅವಶ್ಯವಿರುವ ಕನಿಷ್ಠ ಸೌಲಭ್ಯ ಒದಗಿಸದ ಕಾರಣ ಹಮಾಲರು, ಅವರ ಕುಟುಂಬ ಸದಸ್ಯರು ನರಕ ಸದೃಶವಾದ ಜೀವನ ನಡೆಸುವಂತಾಗಿದೆ. 

ರಾಜ್ಯದ ಯಾವ ಮಾರುಕಟ್ಟೆಯಲ್ಲೂ ಮಹಿಳಾ ಹಮಾಲರಿಗೆ ಪ್ರತ್ಯೇಕ ಕಾಲೊನಿ ರೂಪಿಸಿದ ಉದಾಹರಣೆಗಳಿಲ್ಲ. ಆದರೆ ನಗರದ ಮಾರುಕಟ್ಟೆಯಲ್ಲಿ ಪುರುಷ ಹಾಗೂ ಮಹಿಳಾ ಹಮಾಲರಿಗೆ ಪ್ರತ್ಯೇಕ ಕಾಲೊನಿ ನಿರ್ಮಿಸಲಾಗಿದೆ. ಎಪಿಎಂಸಿ ಪ್ರಾಂಗಣದ ಕುರಿ ಮಾರುಕಟ್ಟೆ ಸಮೀಪದಲ್ಲೇ ಇರುವ ಈ ಜಾಗದಲ್ಲಿ 134 ಮಹಿಳಾ ಹಮಾಲರಿಗೆ ಜಾಗ ನೀಡಿ ಅವರಿಗೆ ಹಕ್ಕುಪತ್ರ ಒದಗಿಸಲಾಗಿದೆ. ಜಿ.ಎಚ್‌.ತಿಪ್ಪಾರೆಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮಹಿಳಾ ಹಮಾಲರಿಗೂ ಸೂರಿನ ಭಾಗ್ಯ ಕಲ್ಪಿಸಲಾಗಿದೆ.

ಬಡಾವಣೆ ನಿರ್ವಹಣೆ ಸಂಬಂಧ ಎಪಿಎಂಸಿ ಆಡಳಿತ ಮಂಡಳಿ ಹಾಗೂ ನಗರಸಭೆ ನಡುವೆ ಗೊಂದಲಗಳಿರುವ ಕಾರಣ ಅಲ್ಲಿಯ ನಿವಾಸಿಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲಿಗೆ ಕುಡಿಯುವ ನೀರಿನ ಸರಬರಾಜು ಇಲ್ಲದ ಕಾರಣ ನಿವಾಸಿಗಳು  ಪರದಾಡುವಂತಾಗಿದೆ. ವೈಯಕ್ತಿಕವಾಗಿ ಹಣ ಹಾಕಿ ಟ್ಯಾಂಕರ್‌ ಕರೆಸಿಕೊಂಡರೆ ಮಾತ್ರ ನೀರು ದೊರೆಯುತ್ತದೆ.

ADVERTISEMENT

ಬಡಾವಣೆ ನಿರ್ಮಾಣದ ವೇಳೆ ಕೊಳವೆ ಬಾವಿ ಹಾಕಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈಗ ಅಲ್ಲಿ ಕೊಳವೆ ಬಾವಿಯ ಮೋಟರ್‌, ವೈರ್‌ಗಳು ನಾಪತ್ತೆಯಾಗಿದ್ದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೀದಿ ದೀಪ, ಚರಂಡಿ, ಸ್ವಚ್ಛತೆ ಮರೀಚಿಕೆಯಾಗಿದ್ದು ನಿವಾಸಿಗಳು ಭಯದಿಂದ ಬದುಕುತ್ತಿದ್ದಾರೆ. ಆಳೆತ್ತರಕ್ಕೆ ಬೆಳೆದ ಗಿಡ ಗಂಟಿಗಳಿಂದಾಗಿ ಹಾವು, ಹಲ್ಲಿ ಸೇರಿದಂತೆ ವಿಷ ಜಂತುಗಳ ಹಾವಳಿ ವಿಪರೀತವಾಗಿದೆ.

4 ಎಕರೆ ವಿಶಾಲ ಜಾಗದಲ್ಲಿ ಹಮಾಲರ ಕಾಲೊನಿ ನಿರ್ಮಾಣ ಮಾಡಲಾಗಿದೆ. 20X 30 ಅಡಿ ಅಳತೆಯ ನಿವೇಶನಗಳಲ್ಲಿ ಮನೆಗಳಿವೆ. ಹಳೇ ರಾಷ್ಟ್ರೀಯ ಹೆದ್ದಾರಿ, ಪ್ರತಿಷ್ಠಿತ ಜಿಎಚ್‌ಆರ್‌ ಬಡಾವಣೆಗೆ ಹೊಂದಿಕೊಂಡಂತಿರುವ ಕಾರಣ ಈ ಬಡಾವಣೆಯ ನಿವೇಶನಗಳ ಮೌಲ್ಯ ಹೆಚ್ಚಾಗಿದೆ. ಆ ಭಾಗದಲ್ಲಿ ನಿವೇಶನಗಳ ಬೆಲೆ ಚದರ ಅಡಿಗೆ ₹5,000 ಇದೆ. ಇಂತಹ ಬಡಾವಣೆಯಲ್ಲಿರುವ ಹಮಾಲರ ಕಾಲೊನಿಗೆ ಎಪಿಎಂಸಿಯಾಗಲೀ, ನಗರಸಭೆಯಾಗಲೀ ಸೌಲಭ್ಯ ನೀಡದ ಕಾರಣ ನಿವಾಸಿಗಳು ಕೊಳೆಗೇರಿಗಿಂತಲೂ ಕೀಳಾದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. 

ಮಾರುಕಟ್ಟೆಗೆ ನಸುಕಿನಲ್ಲೇ ಮಾಲು ಬರುವ ಕಾರಣ ಮಹಿಳಾ ಹಮಾಲಿಗಳು ಬೆಳಿಗ್ಗೆ 4 ಗಂಟೆಗೇ ಮಾರುಕಟ್ಟೆಗೆ ತೆರಳುತ್ತಾರೆ. ಜೊತೆಗೆ ಕತ್ತಲಾದ ನಂತರ ಮನೆಗೆ ಹಿಂದಿರುಗುತ್ತಾರೆ. ಬಡಾವಣೆಯಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲದ ಕಾರಣ ಕತ್ತಲಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಮೀಪದ ಹೆದ್ದಾರಿ, ಕುರಿ ಮಾರುಕಟ್ಟೆಯಲ್ಲಿ ಕಿಡಿಗೇಡಿಗಳು, ಕುಡುಕರ ಹಾವಳಿ ವಿಪರೀತವಾಗಿದ್ದು ಆತಂಕದ ವಾತಾವರಣದಲ್ಲೇ ಜೀವನ ನಡೆಸುತ್ತಿದ್ದಾರೆ.

ಭೂತದ ಮನೆಗಳು: 134 ನಿವೇಶನಗಳಿದ್ದರೂ 34 ಕುಟುಂಬಗಳು ಮಾತ್ರ ಅಲ್ಲಿ ಜೀವನ ಮಾಡುತ್ತಿವೆ. 80ಕ್ಕೂ ಹೆಚ್ಚು ಮನೆಗಳನ್ನು ಅರ್ಧಕ್ಕೆ ಕಟ್ಟಿ ಕೈಬಿಡಲಾಗಿದೆ. ದಶಕದ ಹಿಂದೆಯೇ ಆರ್‌ಸಿಸಿ ಹಂತದವರೆಗೆ ಗೋಡೆ ಕಟ್ಟಿ ಹಾಗೆಯೇ ಬಿಡಲಾಗಿದೆ. ಗಿಡಗಂಟಿಗಳು ಗೋಡೆಗಿಂತಲೂ ಎತ್ತರಕ್ಕೆ ಬೆಳೆದಿದ್ದು ಅವು ಭೂತದ ಮನೆಗಳಂತೆ ಕಾಣುತ್ತವೆ. ಹಂದಿ ಹಾಗೂ ವಿಷಜಂತುಗಳ ಆವಾಸ ಸ್ಥಾನವಾಗಿವೆ.  

ಬಡಾವಣೆಗೆ ರಸ್ತೆ ಸೌಲಭ್ಯವೂ ಇಲ್ಲ, ಒಳಚರಂಡಿಯನ್ನೂ ನಿರ್ಮಾಣ ಮಾಡಿಲ್ಲ. ಕೊಳಚೆ ನೀರು ಮನೆಗಳ ಮುಂದೆಯೇ ಹರಿಯುತ್ತಿದ್ದು ಅಲ್ಲಿಯ ಮಕ್ಕಳಿಗೆ ರೋಗ, ರುಜಿನಗಳು ಸಾಮಾನ್ಯವಾಗಿವೆ. ಮಳೆ ಬಂದರೆ ಇಡೀ ಕಾಲೊನಿಗೆ ಕಾಲಿಡಲೂ ಸಾಧ್ಯವಾಗುವುದಿಲ್ಲ. ಕೊಳಚೆ ನೀರು, ಮಳೆನೀರು ಮನೆ ಮುಂದೆಯೇ ನಿಲ್ಲುತ್ತದೆ. ಸಮೀಪದಲ್ಲಿ ಅಂಗನವಾಡಿ, ಶಾಲೆಗಳೂ ಇಲ್ಲದ ಕಾರಣ ಮಕ್ಕಳ ಕಲಿಕೆಗೂ ತೊಡಕಾಗಿದೆ.

ನಿರ್ಮಿತಿ ಕೇಂದ್ರ ಈ ಮನೆಗಳನ್ನು ನಿರ್ಮಿಸಿ ನಂತರ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದೆ. ವಸತಿ ಯೋಜನೆ ಅಡಿ ಮನೆ ನಿರ್ಮಿಸಿದ್ದು ಫಲಾನುಭವಿಗಳಿಂದ ವಂತಿಕೆ ಕಟ್ಟಿಸಿಕೊಳ್ಳಲಾಗಿದೆ. ಅರ್ಧಕ್ಕೆ ನಿಂತಿರುವ ಮನೆಗಳಿಗೂ ಫಲಾನುಭವಿಗಳು ವಂತಿಕೆ ಕಟ್ಟಿದ್ದಾರೆ. ಆದರೆ ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ಣಗೊಳಿಸದ ಕಾರಣ ಆ ನಿವೇಶನದ ಮಾಲೀಕರು ಮನೆಗೆ ಬಾರದಂತಾಗಿದೆ. ದಶಕದಿಂದಲೂ ಅವರ ಸೂರಿನ ಕನಸು ಕನಸಾಗಿಯೇ ಉಳಿಯುವಂತಾಗಿದೆ.

‘ಅಧಿಕಾರಿಗಳು ಮನೆ ನಿರ್ಮಾಣ ಕಾಮಗಾರಿ ಪೂರ್ಣ ಮಾಡಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಎತ್ತಿಕೊಂಡಿದ್ದಾರೆ. ಮನೆಗಳನ್ನು ಅರ್ಧಕ್ಕೆ ಬಿಟ್ಟು ನಮಗೆ ಅನ್ಯಾಯ ಮಾಡಿದ್ದಾರೆ. ನಾವು ಕಟ್ಟಿದ್ದ ವಂತಿಕೆಯ ಹಣವೂ ವ್ಯರ್ಥವಾಗಿದೆ. ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಬಳಿ ಹಣ, ಶಕ್ತಿ ಇಲ್ಲ. ಹೀಗಾಗಿ ಕಟ್ಟಡಗಳು ಭೂತ ಬಂಗಲೆಯಂತೆ ಹಾಗೆಯೇ ಉಳಿದಿವೆ’ ಎಂದು ಅಲ್ಲಿಯ ನಿವಾಸಿಗಳು ಹೇಳುತ್ತಾರೆ.

‘ನಿರ್ಮಿತಿ ಕೇಂದ್ರದಲ್ಲಿ, ನಗರಸಭೆಯಲ್ಲಿ ಕೇಳಿದರೆ ಮನೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ. ಆನ್‌ಲೈನ್‌ನಲ್ಲಿ ಮಾಹಿತಿ ಲಾಕ್‌ ಆಗಿದೆ ಎಂದು ಹೇಳುತ್ತಾರೆ. ಜಿ.ಎಚ್‌.ತಿಪ್ಪಾರೆಡ್ಡಿ ಅವರು ನಮಗೆ ಮನೆ ಭಾಗ್ಯ ನೀಡಿದ್ದರು. ಆದರೆ ಅಧಿಕಾರಿಗಳು ಬಡಾವಣೆಗೆ ಸೌಲಭ್ಯ ನೀಡದ ಕಾರಣ ನಾವು ನರಕದಲ್ಲಿ ಬದುಕುವಂತಾಗಿದೆ’ ಎಂದು ಹಮಾಲರಾದ ಅನಿಲಮ್ಮ, ಸರೋಜಮ್ಮ, ಲಲಿತಮ್ಮ, ನಾಗರತ್ನಮ್ಮ, ನಾಗಮ್ಮ, ಪಾರ್ವತಮ್ಮ, ಶಾಂತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸೌಲಭ್ಯ ವಂಚಿತ ಹಮಾಲರ ಕಾಲೊನಿ ನಿವಾಸಿಗಳು
ಮೈಲಮ್ಮ
ಲಕ್ಷ್ಮಕ್ಕ
ಗಂಗಮ್ಮ
ನಿವಾಸಿಗಳ ನೋವು ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದೇವೆ. ಬಡಾವಣೆಯಲ್ಲಿ ಗಿಡಗಂಟಿಗಳು ಬೆಳೆದಿರುವ ಕಾರಣ ಹಾವುಗಳ ಕಾಟ ಹೆಚ್ಚಾಗಿದೆ. ನಿತ್ಯವೂ ರಸ್ತೆಯಲ್ಲಿ ಹಾವುಗಳನ್ನು ನೋಡುತ್ತೇವೆ. ಸಣ್ಣ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ ಮೈಲಮ್ಮ, ನಿವಾಸಿ ನಮ್ಮ ಬಡಾವಣೆಗೆ ಕನಿಷ್ಠ ಸೌಲಭ್ಯ ಒದಗಿಸುವಂತೆ ಹಲವು ವರ್ಷಗಳಿಂದಲೂ ಒತ್ತಾಯ ಮಾಡುತ್ತಿದ್ದೇವೆ. ಯಾರೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ. ನಗರಸಭೆ ಅಧಿಕಾರಿಗಳು ಈಗಲಾದರೂ ನಮ್ಮ ಕಾಲೊನಿಗೆ ಸೌಲಭ್ಯ ಒದಗಿಸಬೇಕು ಲಕ್ಷ್ಮಕ್ಕ ಶುದ್ಧ ಕುಡಿಯುವ ನೀರು ನಮಗೆ ದೊರೆಯುತ್ತಿಲ್ಲ, ಟ್ಯಾಂಕರ್‌ ನೀರೂ ಶುದ್ಧವಾಗಿಲ್ಲ. ಒಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡುವಂತೆ ಒತ್ತಾಯ ಮಾಡುತ್ತಿದ್ದರೂ ನಮ್ಮ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ.
ಗಂಗಮ್ಮ
ಮಹಿಳಾ ಹಮಾಲರ ಕಾಲೊನಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಕಾನೂನು ವ್ಯಾಪ್ತಿಯಲ್ಲಿ ಕಾಲೊನಿಯನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಎಸ್‌.ಲಕ್ಷ್ಮಿ ನಗರಸಭೆ ಪೌರಾಯುಕ್ತೆ

ಕಂದಾಯ ಕಟ್ಟಿದರೂ ಸೌಲಭ್ಯವಿಲ್ಲ ಹಮಾಲರ ಕಾಲೊನಿ ನಿವಾಸಿಗಳು ನಿಯಮಿತವಾಗಿ ನಗರಸಭೆಗೆ ಮನೆ ಕಂದಾಯ ನೀರಿನ ತೆರಿಗೆ ಪಾವತಿ ಮಾಡುತ್ತಾ ಬಂದಿದ್ದಾರೆ. ಹಣ ಕಟ್ಟಿಸಿಕೊಳ್ಳುವ ಅಧಿಕಾರಿಗಳು ಅಲ್ಲಿಗೆ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಇಡೀ ಬಡಾವಣೆ ನಗರಸಭೆಗೆ ಸೇರಿಯೇ ಇಲ್ಲ ಎಂದು ಅವರು ಹೇಳಿದರೂ ಕಂದಾಯ ಮಾತ್ರ ಕಟ್ಟಿಸಿಕೊಳ್ಳುತ್ತಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ. ‘ಎಪಿಎಂಸಿ ಆಡಳಿತ ಮಂಡಳಿಯು ಬಡಾವಣೆಯನ್ನು ನಗರಸಭೆಗೆ ಸೇರಿಸಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ ನಗರಸಭೆ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿಲ್ಲ. ಸ್ಥಳೀಯ ಪೊಲೀಸ್‌ ಠಾಣೆ ಕೂಡ ನಮ್ಮ ದೂರುಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ನಿವಾಸಿಗಳು ನೋವು ವ್ಯಕ್ತಪಡಿಸುತ್ತಾರೆ.

ಬಯಲೇ ಶೌಚಾಲಯ ಹಮಾಲರ ಕಾಲೊನಿಯ ಯಾವ ಮನೆಯಲ್ಲೂ ಶೌಚಾಲಯಗಳಿಲ್ಲದ ಕಾರಣ ಮಕ್ಕಳು ಮಹಿಳೆಯರು ಸಮೀಪದ ಬಯಲಿಗೇ ಶೌಚಕ್ಕೆ ತೆರಳುತ್ತಾರೆ. ಮಹಿಳೆಯರು ಶೌಚಕ್ಕೆ ತೆರಳಲು ಕತ್ತಲಾಗುವುದನ್ನೇ ಕಾಯುತ್ತಾರೆ. ಕತ್ತಲು ವಿಷ ಜಂತು ಕಿಡಿಗೇಡಿಗಳ ಕಾಟ ಶೌಚಕ್ಕೆ ತೆರಳುವ ಮಹಿಳೆಯರಿಗೆ ಅಡ್ಡಿಯಾಗಿವೆ. ‘ಹಲವು ವರ್ಷಗಳಿಂದ ಸಮುದಾಯ ಶೌಚಾಲಯ ನಿರ್ಮಿಸಿಕೊಡುವಂತೆ ನಗರಸಭೆ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ’ ಎಂದು ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.