ADVERTISEMENT

ಸಿರಿಗೆರೆ: ಸೇತುವೆ ಕುಸಿದರೂ ನಿಲ್ಲದ ಗಣಿ ಲಾರಿಗಳ ಸಂಚಾರ!

ಅದಿರು ಸಾಗಣೆ ವಾಹನಗಳ ದೂಳಿನಿಂದ ಕಂಗೆಟ್ಟ ನಾಗರಿಕರು, ಜನರ ಪ್ರಾಣಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:37 IST
Last Updated 14 ಡಿಸೆಂಬರ್ 2025, 7:37 IST
ಗಣಿ ಲಾರಿಗಳ ಓಡಾಟದಿಂದ ಸಿರಿಗೆರೆ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ಅದಕ್ಕೆ ಬ್ಯಾರಿಕೇಡ್‌ ಹಾಕಿರುವುದು
ಗಣಿ ಲಾರಿಗಳ ಓಡಾಟದಿಂದ ಸಿರಿಗೆರೆ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ಅದಕ್ಕೆ ಬ್ಯಾರಿಕೇಡ್‌ ಹಾಕಿರುವುದು   

ಸಿರಿಗೆರೆ: ಗ್ರಾಮದ ಸುತ್ತಮುತ್ತ ಗಣಿ ಲಾರಿಗಳ ಸಂಚಾರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ಗುಂಡಿಗಳ ಕಾರುಬಾರು ಜೋರಾಗಿದೆ. ಹಲವೆಡೆ ಸೇತುವೆ ಕುಸಿದರೂ ಗಣಿ ಲಾರಿಗಳ ಸಂಚಾರ ನಿಲ್ಲದಿರುವುದು ಸ್ಥಳೀಯ ನಾಗರಿಕರನ್ನು ಕಂಗೆಡಿಸಿದೆ.

ಸಮೀಪದ ಗಾದರಿಗುಡ್ಡದಲ್ಲಿ ಹಲವು ಕಂಪನಿಗಳು ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸುತ್ತಿವೆ. ಅದಿರು ತುಂಬಿಕೊಂಡು ರಾಜ್ಯ, ಹೊರರಾಜ್ಯಗಳಿಗೆ ಸಾಗಿಸುವ ನೂರಾರು ಲಾರಿಗಳು ಕಳೆದೊಂದು ತಿಂಗಳಿನಿಂದ ಏಕಾಏಕಿ ಸಿರಿಗೆರೆ ಕಡೆಯ ರಸ್ತೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ. ಮಿತಿ ಮೀರಿದ ಭಾರದ ಅದಿರನ್ನು ಹೊತ್ತು ಸಾಗುವ ಈ ಲಾರಿಗಳ ಓಡಾಟದಿಂದಾಗಿ ಗ್ರಾಮದಲ್ಲಿ ಸೇತುವೆಯೊಂದು ಕುಸಿದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಆದರೂ ಸೇತುವೆ ಗುಂಡಿಯ ಸುತ್ತ ಕಲ್ಲುಗಳನ್ನಿಟ್ಟು, ತಾತ್ಕಾಲಿಕ ಬ್ಯಾರಿಕೇಡ್‌ ಅಳವಡಿಸಿ ಲಾರಿಗಳ ಓಡಾಟ ಮುಂದುವರಿಸಲಾಗಿದೆ. ಕುಸಿದಿರುವ ಸೇತುವೆ ಮೇಲೆ ಹತ್ತಾರು ವಾಹನಗಳು ಓಡಾಡುತ್ತವೆ. ಕುಸಿದ ಸೇತುವೆಗಳಿಂದಾಗಿ ಜನರ ಜೀವ ಅಪಾಯದಲ್ಲಿದೆ ಎಂಬುದು ಸ್ಥಳೀಯರ ಆರೋಪ.

ADVERTISEMENT

ಗ್ರಾಮದ ಸಮೀಪದಲ್ಲೇ ರಸ್ತೆ ಸಾರಿಗೆ ಬಸ್‌ ನಿಲ್ದಾಣ, ಗ್ರಾಮ ದೇವತೆಯ ದೇವಾಲಯಗಳು ಇವೆ. ರಸ್ತೆಗಳ ಎರಡೂ ಬದಿಗೆ ವಾಣಿಜ್ಯ ಮಳಿಗೆಗಳು ಇವೆ. ಇಂತಹ ಇಕ್ಕಟ್ಟಿನ ರಸ್ತೆಯಲ್ಲಿ ಅದಿರು ಲಾರಿಗಳು ಬರುವ ವೇಳೆ ಇಡೀ ವಾತಾವರಣವೇ ದೂಳುಮಯವಾಗುತ್ತದೆ. ಸ್ವಚ್ಛವಾದ ಶುಭ್ರ ನೀಲಿಯಾಗಸ ಗಣಿ ದೂಳಿಗೆ ಕೆಂಪೇರುತ್ತಿದೆ.

ರಸ್ತೆಯುದ್ದಕ್ಕೂ ಇರುವ ಮನೆಗಳ ಮೇಲೆ ಕೆಂಪು ದೂಳು ಕೂರುತ್ತಿದೆ. ರಸ್ತೆಯಲ್ಲಿ ಓಡಾಡುವ ಜನರ ಮೂಗಿಗೆ ದೂಳು ಅಡರಿ ಶ್ವಾಸಕೋಶದ ತೊಂದರೆ ಉಂಟು ಮಾಡುತ್ತಿದೆ. ರಸ್ತೆ ಬದಿಯಲ್ಲಿನ ಹೋಟೆಲ್‌ಗಳು, ಬೇಕರಿ ತಿನಿಸು ಮಾರಾಟ ಮಳಿಗೆಗಳ ಪದಾರ್ಥಗಳ ಮೇಲೆ ಕೆಂಪು ದೂಳು ಅಡರಿಕೊಳ್ಳುತ್ತದೆ. ಅಂಗನವಾಡಿಯಲ್ಲಿ ಕಲಿಯುವ ಪುಟಾಣಿ ಮಕ್ಕಳು ಗಣಿ ಲಾರಿಗಳ ದೂಳಿಗೆ ಹೈರಾಣಾಗಿವೆ.  

ದೂಳು ಏಳಬಾರದೆಂದು ಲಾರಿಗಳು ಓಡಾಡುವ ರಸ್ತೆಗಳ ಮೇಲೆ ಅಳತೆ ಮೀರಿ ಸುರಿಯುವ ನೀರಿನಿಂದ ರಸ್ತೆಗಳು ಕೆಸರಿನ ಗದ್ದೆಯಂತಾಗುತ್ತಿವೆ. ನೀರು ಸುರಿಯುವ ವೇಳೆ ನಾಗರಿಕರು ರಸ್ತೆಗಳಲ್ಲಿ ಉಸಿರು ಬಿಗಿ ಹಿಡಿದು ಓಡಾಡಬೇಕು. ಆ ವೇಳೆ ಇತರೆ ವಾಹನಗಳು ಬಂದರೆ ಅವರ ಮೈಮೇಲೆ ಕೆಂಪು ರಾಡಿ ಮೆತ್ತಿಕೊಳ್ಳುತ್ತಿದೆ. ಈ ರಸ್ತೆಗಳನ್ನು ಬಳಸಿಕೊಂಡು ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸಮವಸ್ತ್ರವೂ ಹಾಳಾಗುತ್ತಿದೆ.

‘ಇಡೀ ವಾತಾವರಣವನ್ನೇ ಕೆಡಿಸುವ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅದಿರು ಸಾಗಣೆ ಲಾರಿಗಳ ಓಡಾಟಕ್ಕೆ ಸ್ಥಳೀಯ ಆಡಳಿತ ತಡೆ ಒಡ್ಡಬೇಕು. ಆದರೆ ಇದಾವುದರ ಅರಿವೇ ಇಲ್ಲದಂತೆ ಮೌನ ವಹಿಸಲಾಗಿದೆ’ ಎಂಬುದು ಸ್ಥಳೀಯರ ದೂರು.

‘ಗಣಿ ಲಾರಿಗಳ ಓಡಾಟದಿಂದ ನಾಗರಿಕರಿಗೆ ತೊಂದರೆಯಾಗಿದೆ. ಲಾರಿಗಳ ಓಡಾಟ ತಡೆದರೆ ಒತ್ತಡ ಬರುತ್ತದೆ. ಜನರ ಆರೋಗ್ಯದ ಕಡೆಗೆ ಯಾರ ಗಮನವೂ ಇದ್ದಂತಿಲ್ಲ’ ಎಂದು ಗ್ರಾಮದ ಏಕಲವ್ಯ ದೂರಿದರು.

ಫೋಟೋ ೨
ಫೋಟೋ ೩
ಫೋಟೋ ೪
ಫೋಟೋ ೫
ಸಿರಿಗೆರೆ ಗ್ರಾಮದಲ್ಲಿ ಗಣಿ ಲಾರಿಯ ಓಡಾಟ
ಸೇತುವೆ ಕುಸಿಯುತ್ತಿರುವ ವಿಚಾರವನ್ನು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಒಂದೆರಡು ದಿನಗಳಲ್ಲಿ ಪರಿಶೀಲಿಸುವ ಭರವಸೆ ನೀಡಿದ್ದಾರೆ. ಈವರೆಗೆ ದುರಸ್ತಿಯಾಗಿಲ್ಲ
ರೂಪಾ ಪ್ರದೀಪ್‌ ‍ಅಧ್ಯಕ್ಷೆ ಗ್ರಾಮ ಪಂಚಾಯಿತಿ ಸಿರಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.