ADVERTISEMENT

ಚಿತ್ರದುರ್ಗ: ಚುನಾವಣೆ ಆಸೆಗೆ ಮಗಳನ್ನೇ ಕೊಂದ ಅಪ್ಪ

ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಮಗುವಿನ ಶವ ತೆಗದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 16:12 IST
Last Updated 13 ಅಕ್ಟೋಬರ್ 2020, 16:12 IST
ಆರೋಪಿ ನಿಂಗಪ್ಪ
ಆರೋಪಿ ನಿಂಗಪ್ಪ   

ಚಿತ್ರದುರ್ಗ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಆರೋಪಿ ನಿಂಗಪ್ಪ (33), ಸಮಾಜದಲ್ಲಿ ಹೊಂದಿದ್ದ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಪುತ್ರಿಯನ್ನು ಕೊಲೆ ಮಾಡಿದ್ದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

‘ವೃತ್ತಿಯಲ್ಲಿ ಕೃಷಿಕನಾಗಿದ್ದ ಆರೋಪಿ ಗುತ್ತಿಗೆ ಕೆಲಸಗಳನ್ನು ಮಾಡಿಸುತ್ತಿದ್ದ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಹೊಂದಿದ್ದ. ಈ ನಡುವೆ ತಮ್ಮ ವೈವಾಹಿಕ ಸಂಬಂಧವನ್ನು ಸಮಾಜಕ್ಕೆ ಬಹಿರಂಗಗೊಳಿಸುವಂತೆಎರಡನೇ ಪತ್ನಿ ಒತ್ತಡ ಹೇರುತ್ತಿದ್ದರು. ಇದರಿಂದ ಸಮಾಜದಲ್ಲಿ ಹೊಂದಿದ ಗೌರವಕ್ಕೆ ಧಕ್ಕೆಯಾಗುತ್ತದೆಂದು ಭಾವಿಸಿ ಪುತ್ರಿಯನ್ನು ಕೊಲೆ ಮಾಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

ವಿವಾಹಕ್ಕೂ ಮೊದಲೇ ಎರಡನೇ ಪತ್ನಿಯನ್ನು ಆರೋಪಿ ಪ್ರೀತಿಸುತ್ತಿದ್ದನು. ಹತ್ತು ವರ್ಷಗಳ ಇವರ ಪ್ರೀತಿಗೆ ಕುಲ ಅಡ್ಡಿಯಾಗಿತ್ತು. ಕುಲದ ನಿಯಮದ ಪ್ರಕಾರ ವರಸೆಯಲ್ಲಿ ಪ್ರಿಯತಮೆ ಸಹೋದರಿಯಾಗುತ್ತಿದ್ದಳು. ಇದಕ್ಕೆ ಕುಟುಂಬದಲ್ಲಿ ಅವಕಾಶ ಸಿಗುವುದು ಕಷ್ಟವೆಂದು ಭಾವಿಸಿದ ಆರೋಪಿಶಶಿಕಲಾ ಎಂಬುವರೊಂದಿಗೆ ಆರು ವರ್ಷಗಳ ಹಿಂದೆ ವಿವಾಹವಾಗಿದ್ದ. ಬಳಿಕ ಕುಟುಂಬದವರಿಗೆ ಗೊತ್ತಿಲ್ಲದಂತೆ ಪ್ರಿಯತಮೆಯನ್ನು ವಿವಾಹವಾಗಿಚಿತ್ರದುರ್ಗದ ಕೆಳಗೋಟೆಯಲ್ಲಿ ನೆಲೆಸಿದ್ದ. ಎರಡನೇ ಪತ್ನಿಗೆ ಶಿರಿಷಾ ಎಂಬ ಪುತ್ರಿ ಜನಿಸಿದ್ದಳು.

ADVERTISEMENT

‘ವೃತ್ತಿಯಲ್ಲಿ ಶುಶ್ರೂಷಕಿಯಾಗಿದ್ದ ಎರಡನೇ ಪತ್ನಿ ಸಂಬಂಧವನ್ನು ಕಾನೂನುಬದ್ಧಗೊಳಿಸುವಂತೆ ಇತ್ತೀಚೆಗೆ ಒತ್ತಡ ಹೇರುತ್ತಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಗುಟ್ಟಾಗಿ ವಿವಾಹವಾಗಿದ್ದ ಸಂಬಂಧವನ್ನು ಕಡಿದುಕೊಳ್ಳಲು ಇಬ್ಬರು ಒಪ್ಪಿಕೊಂಡಿದ್ದರು. ಪುತ್ರಿಯನ್ನು ಅನಾಥಾಶ್ರಮಕ್ಕೆ ಬಿಡಲು ತೀರ್ಮಾನಿಸಿದ್ದರು. ಕೆಳಗೋಟೆಯಲ್ಲಿರುವ ಮನೆಯನ್ನು ಖಾಲಿ ಮಾಡಿಕೊಂಡು ಸ್ವಗ್ರಾಮಕ್ಕೆ ಮರಳಿದ್ದರು. ಎರಡನೇ ಹೆಂಡತಿಗೆ ಮತ್ತೊಂದು ವಿವಾಹವಾಗುವಂತೆ ಆರೋಪಿ ಸಲಹೆ ನೀಡಿದ್ದನು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪುತ್ರಿಯನ್ನು ಅನಾಥಾಶ್ರಮಕ್ಕೆ ಬಿಟ್ಟುಬರುವುದಾಗಿ ಸೆ.7ರಂದುದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದನು. ಊರಿಗೆ ತೆರಳಿದ ಎರಡನೇ ಪತ್ನಿಗೆ ದಿನಕಳೆದಂತೆ ಮಗಳ ನೆನಪು ಕಾಡತೊಡಗಿತ್ತು. ಪುತ್ರಿಯನ್ನು ಸ್ನೇಹಿತನ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ಆರೋ‍ಪಿ ನಂಬಿಸಿದ್ದನು. ಅನುಮಾನಗೊಂಡ ಎರಡನೇ ಪತ್ನಿ ಕಟುವಾಗಿ ಪ್ರಶ್ನಿಸಿದಾಗ ಕೊಲೆಯ ವಿಚಾರವನ್ನು ಬಾಯಿಬಿಟ್ಟಿದ್ದನು. ಇದರಿಂದ ಅಘಾತಗೊಂಡ ಮಹಿಳೆ ಪತಿಯ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.