ಚಿತ್ರದುರ್ಗ: ‘ದಲಿತರ ರಾಜಕೀಯ ಪ್ರಾತಿನಿಧ್ಯ ದೇಶದಲ್ಲಿ ಅರ್ಥ ಕಳೆದುಕೊಂಡಿದೆ. ಮೀಸಲು ಮತಕ್ಷೇತ್ರಗಳಲ್ಲಿ ರಾಜಕಾರಣಿಗಳು ಮೇಲ್ಜಾತಿಯವರ ಗುಲಾಮರಂತಾಗಿದ್ದಾರೆ. ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸಿಗಬೇಕು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಿಲ್ಲ’ ಎಂದು ಹಿರಿಯ ಪತ್ರಕರ್ತ ಡಿ.ಉಮಾಪತಿ ವಿಷಾದಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎಸ್‌ಸಿ–ಎಸ್‌ಟಿ ಪತ್ರಿಕಾ ಸಂಪಾದಕರ ಸಂಘ, ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ‘ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ಬಿ.ಆರ್.ಅಂಬೇಡ್ಕರ್ ಅವರು 1951, 54ರ ಚುನಾವಣೆಯಲ್ಲಿ ಸೋಲು ಕಂಡದ್ದು ದೇಶದ ದುರಂತ ಅಧ್ಯಾಯ. ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರ ಇದ್ದಿದ್ದರೆ ಅವರು ಯಾವ ಕಾರಣಕ್ಕೂ ಸೋಲುತ್ತಿರಲಿಲ್ಲ. ದಲಿತರಿಂದ, ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರ ಸಿಗಬೇಕು ಎಂಬ ಬಯಕೆ ಪುಣೆ ಒಡಂಬಡಿಕೆಯಲ್ಲಿ ಸಮಾಧಿಯಾಯಿತು. ಉಪವಾಸ ಸತ್ಯಾಗ್ರಹದಲ್ಲಿದ್ದ ಗಾಂಧೀಜಿಯ ಜೀವ ಉಳಿಸಲು ಪುಣೆ ಒಪ್ಪಂದಕ್ಕೆ ಸಹಿ ಮಾಡಬೇಕಾಯಿತು’ ಎಂದರು.
‘ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಕೊಟ್ಟರೆ ಹಿಂದೂ ಸಮಾಜ ಛಿದ್ರವಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು. ದಲಿತರನ್ನು ಆರಿಸಿದರೆ ಹಿಂದೂಗಳಲ್ಲಿ ಒಡಕು ಉಂಟಾಗುತ್ತದೆಯೇ, ಹಿಂದೂಗಳು ಎಂದಾದರೂ ಒಂದಾಗಿದ್ದಾರೆಯೇ ಎಂದು ಅಂಬೇಡ್ಕರ್ ಪ್ರಶ್ನಿಸಿದ್ದರು. ಅಂಬೇಡ್ಕರ್ ಪ್ರಶ್ನೆಗಳಿಗೆ ಗಾಂಧೀಜಿ ಉತ್ತರ ಕೊಡಲಿಲ್ಲ. ಪ್ರತ್ಯೇಕ ಮತಕ್ಷೇತ್ರದ ಕನಸು ನನಸಾಗದ ಕಾರಣ ಇಂದಿಗೂ ದಲಿತ ರಾಜಕಾರಣಿಗಳು ಮೇಲ್ಜಾತಿಯವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ’ ಎಂದು ಹೇಳಿದರು.
‘ಇಂದು ದಲಿತರು ಆಯ್ಕೆಯಾಗಬೇಕಾದರೆ ಸವರ್ಣೀಯರ ಮತ ಬೇಕಾಗಿವೆ. ಮತಕ್ಕಾಗಿ ದಲಿತರ ಪ್ರತಿನಿಧಿಗಳು ಮೇಲ್ಜಾತಿಯವರ ಕಾಲು ಹಿಡಿಯುತ್ತಾರೆ, ಓಲೈಕೆ ಮಾಡುತ್ತಾರೆ. ಇವರಿಂದ ದಲಿತರ ಉದ್ಧಾರ ಸಾಧ್ಯವೇ? ಈಗಲೂ ದಲಿತ ರಾಜಕಾರಣಿಗಳು ಮೇಲ್ಜಾತಿಯವರ ಮನೆ, ದೇವಾಲಯಗಳಿಗೆ ಪ್ರವೇಶಿಸುವುದಿಲ್ಲ, ಪ್ರವೇಶಿಸಿದರೆ ವೋಟು ಬರುವುದಿಲ್ಲ ಎಂಬ ಭಯ ಅವರನ್ನು ಕಾಡುತ್ತದೆ. ಜಗುಲಿಯ ಮೇಲೆ ಕುಳಿತು ಬರುತ್ತಾರೆ’ ಎಂದರು.
‘ನಾನು ದೆಹಲಿಯಲ್ಲಿದ್ದಾಗ ಕಾಂಗ್ರೆಸ್‌ನ ಬಲಿಷ್ಠ ಜಾತಿಯ ಗುಂಪು ಸೋನಿಯಾ ಗಾಂಧಿ ಅವರಿಗೊಂದು ಮನವಿ ಪತ್ರ ಸಲ್ಲಿಸಿತ್ತು. ದಲಿತ ಮೀಸಲು ಕ್ಷೇತ್ರಗಳಲ್ಲಿ ಮೇಲ್ಜಾತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಸೌಮ್ಯ ಸ್ವಭಾವದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿತ್ತು. ಬಲಿಷ್ಠರಿಗೆ ದಾಸರಾಗಿ ಇರಬೇಕಾದ ಪರಿಸ್ಥಿತಿ ದಲಿತ ರಾಜಕಾರಣಿಗಳಿಗೆ ಬಂದಿದೆ’ ಎಂದು ತಿಳಿಸಿದರು.
‘ಹಳೇ ಕಾಂಗ್ರೆಸ್‌ನಲ್ಲಿದ್ದ ಸ್ಥಿತಿ ಈಗ ಬಿಜೆಪಿಯಲ್ಲೂ ಇದೆ. ಇಡೀ ದೇಶದಲ್ಲಿ ಅತೀ ಹೆಚ್ಚು ದಲಿತ ಸಂಸದರಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿಕೊಳ್ಳುತ್ತಾರೆ. ದಲಿತ ನಾಯಕರು ರಾಜಕೀಯವಾಗಿ, ಶೈಕ್ಷಣಿಕವಾಗಿ ಅರ್ಹತೆ ಇದ್ದರೂ ಬಲಿಷ್ಠ ಪಕ್ಷಗಳಲ್ಲಿ ಅವರು ಗುಲಾಮರಾಗಿದ್ದಾರೆ. ಇಂದಿಗೂ ಪ್ರತ್ಯೇಕ ಮತಕ್ಷೇತ್ರ ಸಿಗದಿದ್ದರೆ ದಲಿತರು ರಾಜಕೀಯವಾಗಿ ಶಕ್ತಿ ಪಡೆಯಲು ಸಾಧ್ಯವಿಲ್ಲ. ದಲಿತ ಪ್ರಾತಿನಿಧ್ಯ ಎನ್ನುವುದು ಅರ್ಥ ಕಳೆದುಕೊಂಡಿದೆ’ ಎಂದು ಹೇಳಿದರು.
‘ಮಾಧ್ಯಮಗಳು ಕೂಡ ದಲಿತರನ್ನು ದಾಸ್ಯಕ್ಕೆ ದೂಕುವ ಪ್ರಯತ್ನ ಮಾಡುತ್ತಲೇ ಇವೆ. ಅಸ್ಪೃಶ್ಯರ ಪರ ಹೋರಾಡುತ್ತಿದ್ದ ಅಂಬೇಡ್ಕರ್ ಅವರನ್ನು ಹಿಂದೂವಾದಿ ಪತ್ರಿಕೆಗಳು ಭೀಮಾಸುರ, ರಾಕ್ಷಸ, ದ್ರೋಹಿ, ರಾಷ್ಟ್ರೀಯತೆ ವಿರೋಧಿ ಎಂದು ಕರೆದಿದ್ದವು’ ಎಂದು ವಿಷಾದಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ಶೋಷಿತ ಸಮುದಾಯಕ್ಕೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ತಾವು ಬದುಕಿನಲ್ಲಿ ಕಂಡ ವ್ಯಥೆ, ಅಪಮಾನಗಳನ್ನು ಮೆಟ್ಟಿ ನಿಂತು ದೇಶಕ್ಕೆ ಸಂವಿಧಾನ ನೀಡಿದರು. ಇಂತಹ ಶ್ರೇಷ್ಠ ಸಂವಿಧಾನವನ್ನು ಪ್ರಪಂಚದ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಎಸ್.ಸಿ, ಎಸ್.ಟಿ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಂ.ಸಹನಾ, ಸದಸ್ಯ ಎಂ.ಎನ್.ಅಹೋಬಳಪತಿ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.