ADVERTISEMENT

ದಸರಾ ರಜೆ ನೀಡದ ಶಾಲೆಗಳ ಮೇಲೆ ಕ್ರಮವಹಿಸಿ: ಪ್ರಮೋದ್‌ ಮುತಾಲಿಕ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 7:20 IST
Last Updated 19 ಸೆಪ್ಟೆಂಬರ್ 2025, 7:20 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಚಿತ್ರದುರ್ಗ: ‘ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬಕ್ಕೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಆದರೆ, ರಾಜ್ಯದಲ್ಲಿ ಕ್ರಿಶ್ಚಿಯನ್‌ ಶಿಕ್ಷಣ ಸಂಸ್ಥೆಗಳು ಮಾತ್ರ ರಜೆ ನೀಡದೆ ನಿಯಮ ಉಲ್ಲಂಘಿಸುತ್ತಿವೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.

‘ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಇಲಾಖೆ ಸೆ.20 ರಿಂದ ಅ.7 ರವರೆಗೆ ದಸರಾ ರಜೆ ಘೋಷಿಸಿದೆ. ಪ್ರತಿ ಬಾರಿಯೂ ಕ್ರಿಶ್ಚಿಯನ್‌ ಸಂಸ್ಥೆಗಳು ಮಾತ್ರ ದಸರಾ ರಜೆ ನೀಡದೆ ಕ್ರಿಸ್‌ಮಸ್ ಹಬ್ಬಕ್ಕೆ ನೀಡುವುದನ್ನು ರೂಢಿ ಮಾಡಿಕೊಂಡಿವೆ. ಈ ಮೂಲಕ ಹಿಂದೂ ಧಾರ್ಮಿಕ ಹಬ್ಬಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ. ರಜೆ ಘೋಷಿಸದಿದ್ದರೆ ಈ ಶಾಲೆಗಳ ಗೇಟ್‍ಗಳಿಗೆ ಬೀಗ ಹಾಕುತ್ತೇವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ರಜೆ ದಿನದಲ್ಲಿ ಪರೀಕ್ಷೆಗಳನ್ನು ಘೋಷಿಸುವ ಮೂಲಕ ಪೋಷಕರನ್ನು ಒತ್ತಡಕ್ಕೆ ಸಿಲುಕಿಸಿದ್ದಾರೆ. ಶೇ. 90 ರಷ್ಟು ಹಿಂದೂ ವಿದ್ಯಾರ್ಥಿಗಳು ಇವರ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರು, ಸಿಬ್ಬಂದಿ ಕೂಡ ಹಿಂದೂಗಳಿದ್ದಾರೆ. ಈ ಮೂಲಕ ಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಹಿಂದೂಗಳನ್ನು ನೇರವಾಗಿ ಮತಾಂತರಗೊಳಿಸದಿದ್ದರೂ ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆ ಬಸವಣ್ಣ, ಗಾಂಧಿ, ಅಂಬೇಡ್ಕರ್ ಫೋಟೋಗಳನ್ನು ಶಾಲೆಯಲ್ಲಿಡಬೇಕು. ಆದರೆ ಯಾವ ಕ್ರಿಶ್ಚಿಯನ್‌ ಶಾಲೆಗಳಲ್ಲಿಯೂ ಇವರ ಫೋಟೋಗಳಿಲ್ಲ. ರಾಜ್ಯೋತ್ಸವ ಕೂಡ ಆಚರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ನಡೆದಿದೆ. ಆದರೆ, ಡಿಜೆ ವಾಹನ ಮಾಲೀಕರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಿನಕ್ಕೆ ಐದು ಬಾರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದರಿಂದ ಶಬ್ಧ ಬರುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಶ್ರೀರಾಮಸೇನೆ ದಕ್ಷಿಣ ಪ್ರಾಂತ ಅಧ್ಯಕ್ಷ ಬಾಬಣ್ಣ, ಮುಖಂಡ ಸುಂದರೇಶ್‌ ನಾಡಗಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.