ಹೊಳಲ್ಕೆರೆ: ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ₹1 ಲಕ್ಷ ಬಹುಮಾನ ನೀಡಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಘೋಷಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಐಕ್ಯೂಎಸಿ ಅಡಿಯಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‍ಕ್ರಾಸ್, ರೋವರ್ಸ್ ಹಾಗೂ ರೇಂಜರ್ಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷ ಇದೇ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿಯೊಬ್ಬರು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದರು. ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ₹ 50,000 ನಗದು ಬಹುಮಾನ ನೀಡಿದ್ದೆ. ವಿದ್ಯಾರ್ಥಿಗಳನ್ನು ಓದಲು ಪ್ರೇರೇಪಿಸುವ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದು, ಎಲ್ಲರೂ ಶ್ರದ್ಧೆಯಿಂದ ಓದಬೇಕು’ ಎಂದು ಹುರಿದುಂಬಿಸಿದರು.
‘ಸರ್ಕಾರಿ ಪ್ರಥಮದರ್ಜೆ ಕಾಲೇಜು ನಗರದ ಹೃದಯ ಭಾಗದಲ್ಲಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಈಗ ಮತ್ತೆ ಹೆಚ್ಚುವರಿ ಕಟ್ಟಡ, ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್‌ಎಸ್ ಸೇವೆಗಾಗಿ ರಾಷ್ಟ್ರಪತಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಇಲ್ಲಿನ ಕಾಲೇಜಿನಲ್ಲಿ ಶೇ 70ರಷ್ಟು ವಿದ್ಯಾರ್ಥಿನಿಯರು ಇರುವುದು ವಿಶೇಷ. ಮಹಿಳೆಯರು ಶಿಕ್ಷಣವಂತರಾದರೆ ಸಮಾಜ ಸುಶಿಕ್ಷಿತವಾಗಿರುತ್ತದೆ. ದೇಶವೂ ಸುರಕ್ಷಿತವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಹೆಚ್ಚಿನ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ಪ್ರಾಂಶುಪಾಲ ಸಿ.ಕೆ.ಕೊಟ್ರಪ್ಪ ಬಿ.ಸಿ.ದಾದಾಪೀರ್ ನವಿಲೆಹಾಳ್, ಸಿ.ಕೆ.ಮಂಜಣ್ಣ, ಗುರುಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಮದಗ್ನಿ, ಡಿ.ಸಿ.ಮೋಹನ್, ಪಿ.ಆರ್.ಮಲ್ಲಿಕಾರ್ಜುನ್, ಮರುಳಸಿದ್ದಪ್ಪ, ಜಿ.ಡಿ.ಸುರೇಶ್, ಪ್ರವೀಣ್ ಕುಮಾರ್, ಶಿವಮೂರ್ತಿ ನಾಯ್ಕ, ಚೇತನ್, ಕರಿಸಿದ್ದಯ್ಯ ಒಡೆಯರ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.