ಹೊಳಲ್ಕೆರೆ: ಡಿಸೆಂಬರ್ 2027ರ ಒಳಗೆ ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಅರೇಹಳ್ಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಂಗಳೂರು-ಹೊಸಪೇಟೆ ರೈಲು ನಿಲುಗಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ-ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಆದರೆ ಚಿತ್ರದುರ್ಗ ಭಾಗದಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ರೈಲು ಮಾರ್ಗ ನಿರ್ಮಿಸಲು ಭೂಮಿ ಸ್ವಾಧೀನ ಮಾಡಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಶೀಘ್ರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
‘ದೇಶದಲ್ಲಿ ರಕ್ಷಣಾ ಇಲಾಖೆಯಲ್ಲಿ 14 ಲಕ್ಷ ನೌಕರರಿದ್ದಾರೆ. ಅದನ್ನು ಬಿಟ್ಟರೆ ರೈಲ್ವೆ ಇಲಾಖೆಯಲ್ಲಿ 12.50 ಲಕ್ಷ ನೌಕರರಿದ್ದಾರೆ. ದೇಶದ ತುಂಬ ರೈಲು ಜಾಲವಿದ್ದು, ಉದ್ಯೋಗ ಸೃಷ್ಟಿ, ಔದ್ಯೋಗಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮುಂದಿನ 5 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ರೈಲ್ವೆ ಇಲಾಖೆಗೆ ₹ 58 ಲಕ್ಷ ಕೋಟಿ ಬಂಡವಾಳ ಹೂಡುವ ಗುರಿ ಹೊಂದಿದ್ದಾರೆ. 1,300 ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲಾಗಿದ್ದು, 136 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಚಿಕ್ಕಜಾಜೂರು-ಬಳ್ಳಾರಿ ಮಾರ್ಗದ 170 ಕಿ.ಮೀ. ರೈಲು ಮಾರ್ಗವನ್ನು ದ್ವಿಪಥ ಮಾಡಲು ₹ 3,200 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಚಿತ್ರದುರ್ಗದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಿಸಲು ಕೇಂದ್ರ ಸರ್ಕಾರವೇ ಶೇ 100 ಹಣ ಭರಿಸುವ ಯೋಜನೆ ಮಂಜೂರು ಮಾಡಿಸಿದ್ದೇವೆ’ ಎಂದು ಹೇಳಿದರು.
‘ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಕಾಲದಲ್ಲಿ ಚತುಷ್ಪಥ ಹೆದ್ದಾರಿಗಳಿಗೆ ಚಾಲನೆ ನೀಡಲಾಯಿತು. ಈಗ ನಿತಿನ್ ಗಡ್ಕರಿ ಅವರು ದಿನಕ್ಕೆ 63 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಅಮೆರಿಕದ ರಸ್ತೆಗಳನ್ನೂ ಮೀರಿಸುವ ರಸ್ತೆ ನಿರ್ಮಿಸುವ ಗುರಿ ಹೊಂದಿದ್ದಾರೆ. ರೈಲ್ವೆ ಅಂಡರ್‌ಪಾಸ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಂಡರ್‌ಪಾಸ್ ಕೆಳಗೆ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇಂತಹ ಕಡೆ ಮೇಲ್ಸೇತುವೆ ನಿರ್ಮಿಸಬೇಕು. ರೈಲ್ವೆ ಸಚಿವ ಸೋಮಣ್ಣ ನಮ್ಮ ರಾಜ್ಯದವರೇ ಆಗಿರುವುದರಿಂದ ಹೆಚ್ಚು ನೆರವು ಪಡೆದುಕೊಳ್ಳಬೇಕು’ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಪುರಸಭೆ ಅಧ್ಯಕ್ಷ ವಿಜಯಸಿಂಹ ಕಾಟ್ರೋತ್, ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ, ಹಿರಿಯ ವಾಣಿಜ್ಯ ವ್ಯವಸ್ಥಾಪಕ ಜೆ.ಲೋಹಿತೇಶ್ವರ್, ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.
ರಾಮಗಿರಿಯಲ್ಲಿ ವಾಸ್ಕೋಡಗಾಮ ರೈಲು ಹಾಗೂ ಹೊಳಲ್ಕೆರೆಯಲ್ಲಿ ವಿಶ್ವ ಮಾನವ ರೈಲು ನಿಲುಗಡೆಗೆ ಬೇಡಿಕೆ ಇದ್ದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆಗೋವಿಂದ ಕಾರಜೋಳ ಸಂಸದ
ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಇಂತಹ ಇರುವ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕುಎಂ.ಚಂದ್ರಪ್ಪ ಶಾಸಕ
ಚನ್ನಗಿರಿ ಭಾಗದ ಪ್ರಯಾಣಿಕರಿಗೂ ಅನುಕೂಲ
ಹೊಳಲ್ಕೆರೆ ನಿಲ್ದಾಣದಲ್ಲಿ ಬೆಂಗಳೂರು-ಹೊಸಪೇಟೆ ರೈಲು ನಿಲುಗಡೆಯಿಂದ ಹೊಳಲ್ಕೆರೆ ತಾಲ್ಲೂಕು ಸೇರಿ ಚನ್ನಗಿರಿ ಭಾಗದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ಅರೇಹಳ್ಳಿ ರೈಲು ನಿಲ್ದಾಣ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಇರುವುದರಿಂದ ಹೊಳಲ್ಕೆರೆ ರಾಮಗಿರಿ ಚನ್ನಗಿರಿ ಭಾಗದ ಜನ ಬೆಂಗಳೂರಿಗೆ ಸಂಚರಿಸಲು ಸುಲಭವಾಗಲಿದೆ. ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲು ಹೊಳಲ್ಕೆರೆ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 9.57ಕ್ಕೆ ಬರಲಿದೆ. ರೈಲು ಸಂಖ್ಯೆ 56520 ಹೊಸಪೇಟೆಯಿಂದ ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲು ಹೊಳಲ್ಕೆರೆಗೆ ಸಂಜೆ 5.22ಕ್ಕೆ ಬರಲಿದೆ. ಈ ರೈಲು ಅಮೃತಾಪುರ ನಿಲ್ದಾಣದಲ್ಲೂ ನಿಲುಗಡೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.