ADVERTISEMENT

ಕಷ್ಟದಲ್ಲಿ ಓದಿದರು, ಬಂಗಾರ ಗೆದ್ದರು

ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ * ಶ್ರಮಿಕರ ಮಕ್ಕಳಿಗೆ ಪದಕಗಳ ಗೌರವ

ನಾಗರಾಜ ಎನ್‌
Published 30 ಜನವರಿ 2019, 16:07 IST
Last Updated 30 ಜನವರಿ 2019, 16:07 IST
ಹಿರಿಯ ವೈದ್ಯ ಡಾ. ಎಸ್‌.ಎಂ. ಎಲಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಕುಲಸಚಿವರಾದ ಪ್ರೊ. ಬಸವರಾಜ ಬಣಕಾರ, ಪ್ರೊ. ಪಿ. ಕಣ್ಣನ್‌, ‘ನ್ಯಾಕ್‌’ ನಿರ್ದೇಶಕ ಪ್ರೊ. ಎಸ್‌.ಸಿ. ಶರ್ಮಾ, ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರೂ ಇದ್ದರು
ಹಿರಿಯ ವೈದ್ಯ ಡಾ. ಎಸ್‌.ಎಂ. ಎಲಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಕುಲಸಚಿವರಾದ ಪ್ರೊ. ಬಸವರಾಜ ಬಣಕಾರ, ಪ್ರೊ. ಪಿ. ಕಣ್ಣನ್‌, ‘ನ್ಯಾಕ್‌’ ನಿರ್ದೇಶಕ ಪ್ರೊ. ಎಸ್‌.ಸಿ. ಶರ್ಮಾ, ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರೂ ಇದ್ದರು   

ದಾವಣಗೆರೆ: ತಾಲ್ಲೂಕಿನ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ 6ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದವರಲ್ಲಿ ಬಹುತೇಕರು ಶ್ರಮಿಕರ ಮಕ್ಕಳು.

ಆಟೊಚಾಲಕ, ರೈತ, ಮೆಕಾನಿಕ್‌, ಕಾರ್ಮಿಕ, ಅಡುಗೆ ಭಟ್ಟರ ಮಕ್ಕಳು ರ‍್ಯಾಂಕ್‌ ಪಡೆದು, ಹೆತ್ತವರ ಶ್ರಮಕ್ಕೆ ‘ಚಿನ್ನ’ದ ಫಲ ಕೊಟ್ಟರು.

ಆರು ಪದಕ ಬಾಚಿಕೊಂಡ ತೇಜಸ್ವಿನಿ:
ಎಂ.ಕಾಂ. ನಲ್ಲಿ ಪ್ರಥಮ ರ‍್ಯಾಂಕ್‌ ಗಳಿಸುವ ಮೂಲಕ ಆರು ಬಂಗಾರದ ಪದಕಗಳನ್ನು ಬಾಚಿಕೊಂಡ ತೇಜಸ್ವಿನಿ ಮೆಕಾನಿಕ್‌ರ ಮಗಳು. ಅವರ ತಂದೆ ಚಂದ್ರಪ್ಪ ಸ್ನೇಹಿತರ ವರ್ಕ್‌ಶಾಪ್‌ನಲ್ಲಿ ಮೆಕಾನಿಕ್‌ ಆಗಿ ದುಡಿಯುತ್ತಿದ್ದಾರೆ. ಅವರ ಶ್ರಮಕ್ಕೆ ತೇಜಸ್ವಿನಿ ಚಿನ್ನದ ಉಡುಗೊರೆ ನೀಡಿದ್ದಾರೆ.

ADVERTISEMENT

ಆಟೊ ಡ್ರೈವರ್ ಪುತ್ರಿಗೆ ಮೂರು ಚಿನ್ನ:
ಆಟೊ ಚಾಲಕರ ಪುತ್ರಿ ಎಫ್. ರುಕ್ಸಾನಾ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಮೂರು ಬಂಗಾರದ ಪದಕಗಳನ್ನು ಪಡೆದರು. ರುಕ್ಸಾನಾ ಅವರು ದಾವಣಗೆರೆಯ ಬೂದಾಳ್‌ ರಸ್ತೆ ನಿವಾಸಿ ಫಯಾಜ್ ಅಹಮದ್, ಶಕೀಲಾ ಬಾನು ದಂಪತಿ ಪುತ್ರಿ.

‘ನನ್ನ ಸಾಧನೆಗೆ ತಂದೆಯೇ ಪ್ರೇರಣೆ. ಮುಂದೆ ಪಿಎಚ್‌.ಡಿ ಪಡೆಯುವ ಕನಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆಯಬೇಕೆಂದಿದ್ದೇನೆ’ ಎಂದು ರುಕ್ಸಾನಾ ಹೇಳಿದರು.

ಅಡುಗೆ ಭಟ್ಟರ ಪುತ್ರಿಯರು:
ಚಿತ್ರದುರ್ಗ ಪಿಜಿ ಸೆಂಟರ್‌ನಲ್ಲಿ ಓದಿದ ಎಸ್. ಹೇಮಾವತಿ ಎಂ.ಎ. ಅರ್ಥಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಪಡೆದುಕೊಂಡರು. ಹೇಮಾವತಿ ಅವರು ಸುರೇಶ್‌ಕುಮಾರ್, ಶಾಂತವೀರಮ್ಮ ಪುತ್ರಿ. ಸುರೇಶ್‌ಕುಮಾರ್‌ ಅಡುಗೆ ಭಟ್ಟರು.

‘ಅಣ್ಣನ ಪ್ರೋತ್ಸಾಹದಿಂದ ಓದಿದೆ. ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ಆರಂಭಿಸಿದ್ದೇನೆ. ನಿತ್ಯವು ಗ್ರಂಥಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದೇನೆ’ ಎಂದು ಎಸ್. ಹೇಮಾವತಿ ಹೇಳಿದರು.

ಸ್ನಾತಕೋತ್ತರ ಪದವಿಯ ಭೌತಶಾಸ್ತ್ರ ವಿಭಾಗದಲ್ಲಿ ಚಿನ್ನ ಮುಡಿಗೇರಿಸಿರುವ ಚಿತ್ರದುರ್ಗದ ಅರ್ಪಿತಾ ತಂದೆ ತಿಪ್ಪೇಸ್ವಾಮಿ ಕೂಡ ಅಡುಗೆ ಭಟ್ಟರು. ಅವರು ಸರ್ಕಾರಿ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ‘ರ‍್ಯಾಂಕ್‌ ಪಡೆಯುವ ವಿಶ್ವಾಸವಿತ್ತು. ಹೀಗಾಗಿ ಶ್ರದ್ಧೆಯಿಂದ ಓದಿದೆ’ ಎಂದರು ಅರ್ಪಿತಾ.

ಪದಕ ಪಡೆಯುವ ಛಲ:
ಹರಪನಹಳ್ಳಿ ತಾಲ್ಲೂಕು ಕಡತಿಯ ಸಣ್ಣರೈತ ಮಲ್ಲೇಶಪ್ಪ, ಸರೋಜಮ್ಮ ದಂಪತಿ ಪುತ್ರಿ ನೇತ್ರಾವತಿ ಸಣ್ಣಗುಡ್ಡಪ್ಪರ್‌ ಕನ್ನಡದಲ್ಲಿ ಸ್ನಾತಕೋತ್ತರ ಓದಿ, ಬಂಗಾರ ಗೆದ್ದಿದ್ದಾರೆ. ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿದ ನೇತ್ರಾವತಿ ಈಗ ಇಲ್ಲಿನ ಎಂಎಂ ಕಾಲೇಜಿನಲ್ಲಿ ಬಿ.ಇಡಿ. ಅಧ್ಯಯನ ಮಾಡುತ್ತಿದ್ದಾರೆ.

‘ಪ್ರಥಮ ರ‍್ಯಾಂಕ್‌ ಪಡೆಯಲೇಬೇಕು ಎನ್ನುವ ಗುರಿಯೊಂದಿಗೆ ಓದುತ್ತಿದ್ದೆ. ಆದರೆ, ಪದವಿಯಲ್ಲಿ ಡಿಸ್ಟಿಂಕ್ಷನ್ ಬಂದೆ. ಆದರೆ, ಎಂ.ಎನಲ್ಲಿ ಮೂರು ಚಿನ್ನದ ಪದಕಗಳು ಬಂದಿರುವುದು ಸಂತೋಷ ತಂದಿದೆ. ದಕ್ಷ ಅಧಿಕಾರಿಯಾಗಬೇಕು ಎಂಬ ಕನಸಿದೆ. ಬಿ.ಇಡಿ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತೇನೆ’ ಎಂದು ನೇತ್ರಾವತಿ ಹೇಳಿದರು.

ಸುಲ್ತಾನಾಗೆ ಶಿಕ್ಷಕಿಯಾಗುವಾಸೆ:
ಚನ್ನಗಿರಿ ತಾಲ್ಲೂಕು ಕೆರೆಬಿಳಚಿಯ ಸುಲ್ತಾನಾ ಬಾನು ಇತಿಹಾಸ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್‌ ಪಡೆದಿದ್ದು, ಶಿಕ್ಷಕಿಯಾಗುವ ಆಸೆ ವ್ಯಕ್ತಪಡಿಸಿದರು. ‘ದುಬೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಸಂದರ್ಶನದಲ್ಲಿ ಭಾಗವಹಿಸಿದ್ದೇನೆ. ಕೆಲಸ ಸಿಗುವ ವಿಶ್ವಾಸವಿದೆ’ ಎಂದರು.

ಎವಿಕೆ ಕಾಲೇಜಿನಲ್ಲಿ ಬಿ.ಎ ಓದಿ ಪ್ರಥಮ ರ‍್ಯಾಂಕ್‌ ಪಡೆದ ಎಚ್‌.ಬಿ. ಪೂಜಾ ಕೂಡಾ ರೈತನ ಮಗಳು. ಅವರ ತಂದೆ ಎಚ್‌.ಬಿ. ಬಸವರಾಜ್‌ ದಾವಣಗೆರೆ ತಾಲ್ಲೂಕಿನ ದೇವರಹಟ್ಟಿಯಲ್ಲಿ ವ್ಯವಸಾಯ ಮಾಡುತ್ತಾರೆ.

ಚಿತ್ರದುರ್ಗ ಜಿಲ್ಲೆ ಕರಿಯಮ್ಮನಹಟ್ಟಿಯ ರೈತ ಕುಟುಂಬದ ಜಿ.ಎಚ್‌. ಸೌಮ್ಯಾ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ವಿಜೇತೆ. ಅವರ ತಂದೆ ಹುನುಮಂತಪ್ಪ ಅವರ ಕನಸಿನಂತೆ ಮಗಳು ಈಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ಆರಂಭಿಸಿದ್ದಾರೆ.

ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ವಿಭಾಗದಲ್ಲಿ ರ‍್ಯಾಂಕ್‌ ಪಡೆದಿರುವ ಚಿತ್ರದುರ್ಗ ಜಿಲ್ಲೆ ಭೀಮನಕೆರೆಯ ಎಂ. ಹನುಮೇಶಿ ಕೂಡ ಶ್ರಮಿಕರ ಕುಟುಂಬದ ಮಗ. ಅವರೀಗ ಚಿತ್ರದುರ್ಗದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ತಂದೆ ತಾಯಿ ಕೂಲಿ ಮಾಡಿ ಬದುಕುತ್ತಿದ್ದಾರೆ. ಅಣ್ಣ ಕೊಳವೆ ಬಾವಿ ಕೊರೆಯುವ ಯಂತ್ರದಲ್ಲಿ ಕೆಲಸ ಮಾಡುತ್ತಾ ನನ್ನನ್ನು ಓದಿಸಿದರು. ಅವರಿಲ್ಲದೇ ನನ್ನಿಂದ ಈ ಸಾಧನೆ ಅಸಾಧ್ಯ’ ಎಂದರು ಹನುಮೇಶಿ.

ಸ್ನಾತಕೋತ್ತರ ಪದವಿಯ ರಸಾಯನ ವಿಜ್ಞಾನದಲ್ಲಿ ಚಿನ್ನ ಗೆದ್ದಿರುವ ಚಿತ್ರದುರ್ಗ ಜಿಲ್ಲೆ ಚೌಡಗೊಂಡನಹಳ್ಳಿಯ ಎಸ್‌. ಜ್ಯೋತಿ, ಜೀವ ರಸಾಯನ ವಿಜ್ಞಾನದಲ್ಲಿ ರ‍್ಯಾಂಕ್‌ ಬಂದಿರುವ ಎಫ್‌. ರುಕ್ಸಾನಾ, ‘ನಾವು ರ‍್ಯಾಂಕ್‌ ಬರಲು ಪ್ರಾಧ್ಯಾಪಕರ ಮಾರ್ಗದರ್ಶನವೇ ಕಾರಣ. ಲ್ಯಾಬ್‌ನಲ್ಲಿ ಉತ್ತಮ ಬೋಧನೆ ಮಾಡಿದ್ದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು’ ಎಂದರು.

ಅಂಧ ವಿದ್ಯಾರ್ಥಿನಿ ಅಮೃತಾ ಎಂ.ಎ ಇಂಗ್ಲಿಷ್‌ನಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದು, ಮೂರು ಚಿನ್ನದ ಪದಕಗಳನ್ನು ಸ್ವೀಕರಿಸಿದರು.

ರ‍್ಯಾಂಕ್‌ ಪಡೆದ ನೇಪಾಳದ ವಿದ್ಯಾರ್ಥಿ
ಇಲ್ಲಿನ ಬಾಪೂಜಿ ‘ಬಿ’ ಸ್ಕೂಲ್‌ ವಿದ್ಯಾರ್ಥಿ ನೇಪಾಳದ ಆನಂದ್‌ ಉಪಾಧ್ಯಾಯ ಬಿಸಿಎನಲ್ಲಿ ಪ್ರಥಮ ರ‍್ಯಾಂಕ್‌ ಪಡೆದರು.

‘ತಂದೆ ಜಿತೇಂದ್ರ ಉಪಾಧ್ಯಾಯ ನೇಪಾಳದಲ್ಲಿ ರೈತರು. ನಾನು ರ‍್ಯಾಂಕ್‌ ಪಡೆಯಬೇಕು ಎಂಬುದು ತಾಯಿ ಕಿರಣ್‌ದೇವಿ ಅವರ ಕನಸಾಗಿತ್ತು. ಅವರು ಈಗ ಇಲ್ಲ. ಆದರೆ, ಅವರ ಆಸೆಯನ್ನು ಪೂರೈಸಿದ್ದೇನೆ. ನೇಪಾಳದಲ್ಲಿ ದಾವಣಗೆರೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಹೆಮ್ಮೆಯಿದೆ’ ಎಂದು ಆನಂದ್ ಹೇಳಿದರು.

* * *

ಮಾನವೀಯತೆಗಾಗಿ ಮೌಲ್ಯಾಧಾರಿತ ಶಿಕ್ಷಣ
ಗೌರವ ಡಾಕ್ಟರೇಟ್‌ ಸ್ವೀಕಾರ ಮಾಡಿದ ವೈದ್ಯ ಡಾ. ಎಸ್‌.ಎಂ. ಎಲಿ ಅವರು, ‘ನನಗೆ ಕೊಟ್ಟ ಪದವಿ ಶಿಕ್ಷಣಕ್ಕೆ ನೀಡಿದ ಗೌರವ ಎಂದು ಭಾವಿಸುತ್ತೇನೆ. ಶಿಕ್ಷಣ ಎಲ್ಲರಿಗೂ ಧ್ವನಿ ನೀಡುತ್ತದೆ. ಆದರೆ, ಮೌಲ್ಯಾಧಾರಿತ ಶಿಕ್ಷಣ ನೀಡುವ ಸಂಸ್ಥೆಗಳು ಹೆಚ್ಚಬೇಕು. ಆಗಷ್ಟೇ ಮಾನವೀಯತೆ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

* * *

‘ವೈಯಕ್ತಿಕ ಪ್ರಗತಿಗಾಗಿ ಸಂಶೋಧನೆ ಸಲ್ಲದು’
ಹೆಸರಿಗಾಗಿ, ಪ್ರಾಧ್ಯಾಪಕ ಹುದ್ದೆ ಪಡೆಯುವುದಕ್ಕಾಗಿ, ವೃತ್ತಿಬಡ್ತಿಗಾಗಿ ಸಂಶೋಧನೆ ಮಾಡುವವರಿಂದ ಉಪಯೋಗವಿಲ್ಲ ಎಂದು ‘ನ್ಯಾಕ್‌’ ನಿರ್ದೇಶಕ ಪ್ರೊ. ಎಸ್‌.ಸಿ. ಶರ್ಮಾ ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಸಂಶೋಧನೆಗಳಲ್ಲಿ ಸಂವೇದನೆ ಇರಬೇಕು. ಇಲ್ಲದಿದ್ದರೆ ಅಂಥ ಸಂಶೋಧನೆಗಳು ಪ್ರಗತಿಗೆ ಪೂರಕವಾಗುವುದಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಆತ್ಮಸಾಕ್ಷಿ ಪ್ರಶ್ನಿಸಿಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿ. ಆಗಷ್ಟೇ ಮುಂದಿನ ಪೀಳಿಗೆಗೆ ಸಂಶೋಧನೆಗಳಿಂದ ಒಂದಷ್ಟು ಕೊಡುಗೆ ಕೊಡಲು ಸಾಧ್ಯ’ ಎಂದರು.

ವಿಶ್ವವಿದ್ಯಾಲಯಗಳು ಆಯೋಜಿಸುವ ಕಾರ್ಯಾಗಾರಗಳು, ಸಮ್ಮೇಳನಗಳು ವ್ಯವಹಾರಗಳಾಗಿ ಮಾರ್ಪಟ್ಟಿವೆ. ಇವುಗಳಿಂದ ಜ್ಞಾನ ವೃದ್ಧಿಸುವ ಕಾರ್ಯವಾಗುತ್ತಿಲ್ಲ. ಹೀಗಾಗಿ, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳನ್ನು ಅಧ್ಯಯನ ಮಾಡಬೇಕು. ಅವುಗಳಿಗೆ ಲೇಖನಗಳನ್ನು ಬರೆಯಬೇಕು. ಇದರಿಂದ ಸಂಶೋಧನಾ ಗುಣಮಟ್ಟ ಹೆಚ್ಚುತ್ತದೆ’ ಎಂದರು.

ಕುಲಪತಿ ಪ್ರೊ. ಎಸ್‌.ವಿ. ಹಲಸೆ ಸ್ವಾಗತ ಭಾಷಣ ಮಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್, ಕುಲಸಚಿವ ಪ್ರೊ. ಪಿ. ಕಣ್ಣನ್, ಡೀನ್‌ರಾದ ಗಾಯತ್ರಿ ದೇವರಾಜ್, ಲಕ್ಷ್ಮಣ್, ವೀರಭದ್ರಯ್ಯ, ಪ್ರದೀಪ್, ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಜೆ.ಕೆ. ರಾಜು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.