ADVERTISEMENT

ದಾವಣಗೆರೆ ವಿಶ್ವವಿದ್ಯಾಲಯ | ಬಿ.ಎ ಪದವಿ: ಗಂಗಮ್ಮಗೆ ಪ್ರಥಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 13:55 IST
Last Updated 6 ಫೆಬ್ರುವರಿ 2025, 13:55 IST
ಎಸ್. ಗಂಗಮ್ಮ
ಎಸ್. ಗಂಗಮ್ಮ   

ಹೊಳಲ್ಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ವಿದ್ಯಾರ್ಥಿನಿ ಎಸ್.ಗಂಗಮ್ಮ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ತಾಲ್ಲೂಕಿನ ಚಿಕ್ಕಎಮ್ಮಿಗನೂರಿನ ಶಿವಪ್ಪ, ನಾಗಮ್ಮ ದಂಪತಿಯ ಪುತ್ರಿ ಗಂಗಮ್ಮ ಸತತ ಪರಿಶ್ರಮದಿಂದ ಓದಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ತಂದೆ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. 

‘ನಮ್ಮ ಕಾಲೇಜಿನಲ್ಲಿ ರ‍‍್ಯಾಂಕ್‌ ಕಲ್ಪನೆಯೇ ಇರಲಿಲ್ಲ. ಹೆಚ್ಚು ಅಂಕ ತಗೆಯಬೇಕು ಎಂದು ಕ್ರಮಬದ್ಧವಾಗಿ ಅಧ್ಯಯನ ಮಾಡಿದೆ. ಉಪನ್ಯಾಸಕರೂ ಹೆಚ್ಚು ಪ್ರೋತ್ಸಾಹ ನೀಡಿದರು. ನಮ್ಮ ಗ್ರಾಮಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ದಿನಕ್ಕೆ ಒಂದು ಬಸ್ ಎರಡು ಬಾರಿ ಮಾತ್ರ ಊರಿಗೆ ಬರುತ್ತದೆ. ಬೆಳಿಗ್ಗೆ 8.30ಕ್ಕೆ ಬರುವ ಬಸ್‌ಗೆ ಕಾಲೇಜಿಗೆ ಬರುತ್ತಿದ್ದೆ. ಸಂಜೆ 4.30ಕ್ಕೆ ಅದೇ ಬಸ್‌ನಲ್ಲಿ ಊರಿಗೆ ಹೋಗುತ್ತಿದ್ದೆ. ಸಿಗುವ ಕಡಿಮೆ ಅವಧಿಯಲ್ಲೇ ಅಧ್ಯಯನ ಮಾಡುತ್ತಿದ್ದೆ. ಈಗ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದು, ಮುಂದೆ ಕೆಎಎಸ್ ಅಥವಾ ಐಎಎಸ್ ಮಾಡುವ ಗುರಿ ಇದೆ. ದೂರ ಶಿಕ್ಷಣದಲ್ಲಿ ಎಂಎ ಮಾಡುತ್ತೇನೆ’ ಎಂದು ಗಂಗಮ್ಮ ತಿಳಿಸಿದರು.

ADVERTISEMENT

‘ಮಗಳು ಪ್ರಥಮ ರ‍್ಯಾಂಕ್‌ ಪಡೆದಿರುವುದು ಹೆಚ್ಚು ಸಂತಸ ತಂದಿದೆ’ ಎಂದು ಗಂಗಮ್ಮ  ತಂದೆ ಶಿವಪ್ಪ ಹೇಳಿದರು.

‘ಗಂಗಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು. ಬಿಡುವಿನ ಅವಧಿಯಲ್ಲಿ ಗ್ರಂಥಾಲಯದಲ್ಲಿ ಓದುತ್ತಿದ್ದಳು’ ಎಂದು ಪ್ರಾಚಾರ್ಯ ಎನ್. ಶಿವಮೂರ್ತಿ ನಾಯ್ಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.